ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಜಯಂತಿ ವಿಶೇಷ | ಚರಕದೊಂದಿಗೆ ಬೆರೆತ ಶಕ್ತಿಧಾಮದ ಮಕ್ಕಳು

ಗಾಂಧಿ ಜಯಂತಿ ನಾಳೆ: ನೂಲಿನಿಂದ ನೇಯ್ದ ಬಟ್ಟೆ ಪಡೆಯುವ ಪುಳಕ
Published 1 ಅಕ್ಟೋಬರ್ 2023, 6:14 IST
Last Updated 1 ಅಕ್ಟೋಬರ್ 2023, 6:14 IST
ಅಕ್ಷರ ಗಾತ್ರ

ಮೈಸೂರು: ನಗರದ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರ ‘ಶಕ್ತಿಧಾಮ’ದ 25 ಮಕ್ಕಳು ನಾಲ್ಕು ತಿಂಗಳಿನಿಂದ ಚರಕದಿಂದ ನೂಲು ತೆಗೆದಿದ್ದು, ಅದರಿಂದ 320 ಮೀಟರ್‌ ಬಟ್ಟೆಯನ್ನು ನೇಕಾರರು ಸಿದ್ಧಪಡಿಸಿದ್ದಾರೆ.

ಗಾಂಧಿ ಜಯಂತಿಯಂದು (ಅ.2) ಮೇಲುಕೋಟೆಯ ನೇಕಾರರೇ ಮಕ್ಕಳಿಗೆ ಖಾದಿ ವಸ್ತ್ರವನ್ನು ನೀಡುತ್ತಿದ್ದಾರೆ. ನಿತ್ಯ ಓದಿನ ಜೊತೆಗೆ ಚರಕ ತಿರುಗಿಸುತ್ತಾ, ತೆಗೆದ ನೂಲು ವಸ್ತ್ರವಾಗಿ ದೊರೆಯುವ ಪುಳಕದಲ್ಲಿ ಮಕ್ಕಳಿದ್ದಾರೆ!

ಈ ಖುಷಿಯ ಹಿಂದೆ ನಟ ಕೆ.ಜೆ.ಸಚ್ಚಿದಾನಂದ ಹಾಗೂ ಮೈಸೂರು ನೂಲುಗಾರರ ಬಳಗವಿದೆ. ಗಾಂಧಿ ಚರಕದ ಮೂಲಕ ದೇಶದ ಶ್ರಮಜೀವಿಗಳಾದ ಹತ್ತಿ ಬೆಳೆಯುವ ರೈತ, ನೂಲು ತೆಗೆವ ನೂಲುಗಾರ, ನೇಯುವ ನೇಕಾರ ಸೇರಿದಂತೆ ಶ್ರಮಿಕರ ಮೇಲೆ ಮಕ್ಕಳಿಗೆ ಗೌರವ ಭಾವನೆಯನ್ನು ಮೂಡಿಸಿದ್ದಾರೆ.

‘ಗಾಂಧಿ ಚರಕದಿಂದ ನೂಲು ತೆಗೆದಾಗ, ಅದು ಬಟ್ಟೆಯಾಗಿ ಧರಿಸಿದಾಗ ನನ್ನಲ್ಲಿ ಮೂಡಿದ ಸಂತಸ, ತಾಳ್ಮೆ, ಸ್ವಾವಲಂಬನೆ, ದೇಶದ ಶ್ರಮಿಕರ ಬಗ್ಗೆ ಹುಟ್ಟಿದ ಪೂಜನೀಯ ಗೌರವ, ಮಕ್ಕಳಿಗೂ ಸಿಗಬೇಕು. ಅದು ಈಗ ಸಿಕ್ಕಿದೆ. 9ನೇ ತರಗತಿಯ ಮಕ್ಕಳು ಗಾಂಧಿಯನ್ನು ಅರ್ಥೈಸಿಕೊಂಡಿದ್ದಾರೆ. ಅವರ ಮಾತುಗಳನ್ನು ಅವರಲ್ಲಿಯೇ ಕೇಳಬೇಕು’ ಎಂದು ಕೆ.ಜೆ.ಸಚ್ಚಿದಾನಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಮ್ಮ ಜೀವನ ಧಾವಂತಕ್ಕೆ ಸಿಲುಕಿದೆ. ಬರೀ ಓಡುತ್ತಿದ್ದೇವೆ. ಎಲ್ಲ ಮರೆತು ಚರಕದೊಂದಿಗೆ ಕೂತಾಗ ನನ್ನ ಜೊತೆ ಇರುವುದು ನಾನು ಮಾತ್ರ. ಮಕ್ಕಳಿಗೆ ಅದನ್ನೇ ಕಲಿಸಲಾಗಿದೆ. ಗಾಂಧೀಜಿ ಬಗ್ಗೆ ನಾವೇನೇ ಓದಿ, ಭಾಷಣ ಮಾಡಿದರೂ, ಕಲಿಯಲು ಆಗದ್ದನ್ನು ಚರಕ ಮಕ್ಕಳಿಗೆ ಕಲಿಸಿದೆ’ ಎಂದರು.

‘ಬಟ್ಟೆ ಕೊಳೆಯಾಯಿತೆಂದರೆ, ಮಾಸಿದರೆ ಬಿಸಾಡುತ್ತೇವೆ. ಆದರೆ, ಜನರ ಪರಿಶ್ರಮದ ಸಂಕೇತ ಎಂದು ಅರಿತಿರುವ ಮಕ್ಕಳಿಗೆ ಖಾದಿ ಮೌಲ್ಯಯುತ ವಸ್ತ್ರ. ತಾವೇ ತೆಗೆದ ನೂಲಿನಿಂದ ಬಟ್ಟೆ ತಯಾರಿಸಿಕೊಂಡರೆ ಅದು ಚಿನ್ನಕ್ಕಿಂತ ದೊಡ್ಡ ಬೆಲೆ. ರೈತ, ನೇಕಾರ, ಟೈಲರ್‌ ಎಲ್ಲರೊಂದಿಗೆ ಸಹಜವಾಗಿ ಬೆರೆಯುವ ಗುಣ ಬೆಳೆಯುವುದಲ್ಲದೇ, ಅವರ ಶ್ರಮವನ್ನು ಚರಕದಿಂದ ಕಂಡಿದ್ದಾರೆ’ ಎಂದು ಹೇಳಿದರು. 

‘ಒಂದು ಲಡಿಯಲ್ಲಿ (ದಾರದ ಉಂಡೆ) 500 ಮೀಟರ್‌ ನೂಲು ಇರುತ್ತದೆ. ಅಂಥ 650 ಲಡಿಯನ್ನು 9ನೇ ತರಗತಿ ಮಕ್ಕಳು ತಯಾರಿಸಿದ್ದು, ಅದರಿಂದ 320 ಮೀಟರ್‌ ಬಟ್ಟೆ ಸಿಕ್ಕಿದೆ’ ಎಂದರು.

‘ಶಕ್ತಿಧಾಮದ ಪೋಷಕ, ನಟ ಶಿವರಾಜ್‌ ಕುಮಾರ್ ಅವರೂ 25 ಚರಕಗಳನ್ನು ನೀಡಿದ್ದಾರೆ. ಇದೀಗ 7 ಹಾಗೂ 8ನೇ ತರಗತಿ ಮಕ್ಕಳಿಗೂ ಕಲಿಕಾ ಶಿಬಿರವನ್ನು ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

ನಾಲ್ಕು ತಿಂಗಳಲ್ಲಿ 650 ‘ಲಡಿ’ ತಯಾರಿ ಮೇಲುಕೋಟೆಯಲ್ಲಿ ನೇಯ್ಗೆ ಸಿದ್ಧವಾಯಿತು 320 ಮೀಟರ್ ಖಾದಿ ಬಟ್ಟೆ

‘ಎಲ್ಲರನ್ನೂ ಒಳಗೊಳ್ಳುವ ಕ್ರಿಯೆ’ ‘ಚರಕ ಎಲ್ಲರನ್ನೂ ಸೇರಿಸುತ್ತದೆ. ಅದರಿಂದಲೇ ದೇಶವನ್ನು ಗಾಂಧಿ ಒಂದುಗೂಡಿಸಿದರು. ಶಕ್ತಿಧಾಮದ ಮಕ್ಕಳು ಶ್ರಮಿಕರ ಮೇಲೆ ಈಗ ತಳೆದಿರುವ ಗೌರವ ಭಾವನೆಯು ಪ್ರತಿ ಮಕ್ಕಳದ್ದಾಗಬೇಕು’ ಎಂದು ಮೈಸೂರು ನೂಲುಗಾರರ ಬಳಗದ ಅಭಿಲಾಷ್‌ ಹೇಳಿದರು. ‘ಚರಕದಿಂದ ತಮ್ಮ ಬಟ್ಟೆಗೆ ನೂಲು ತೆಗೆಯುವ ರಚನಾತ್ಮಕ ಕ್ರಿಯೆಯು ನೂರಾರು ಜನಕ್ಕೆ ನೂಲುಗಾರಿಕೆಯನ್ನು ಕಲಿಸಿದೆ ಮತ್ತು ನೂಲುವಿಕೆಯ ಸುಖವನ್ನು ಹಂಚಿಕೊಂಡಿದೆ’ ಎಂದು ತಿಳಿಸಿದರು.

- ಕಾರ್ಯಕ್ರಮ ನಾಳೆ ಗಾಂಧಿ ಜಯಂತಿಯಂದು ಸಂಜೆ 5 ರಿಂದ 8ರವರೆಗೆ ಸಂವಾದ ಹಾಗೂ ಸಂಗೀತ ಕಾರ್ಯಕ್ರಮವನ್ನು ಮೈಸೂರು ನೂಲುಗಾರರ ಬಳಗವು ಚಾಮರಾಜ ಮೊಹಲ್ಲಾದ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್‌ನಲ್ಲಿ ಆಯೋಜಿಸಿದೆ. ಹಿರಿಯ ನೂಲುಗಾರ ಪುಣೆಯ ಮಾಧವ ಸಹಸ್ರ ಬುದ್ದೆ ತಮಿಳುನಾಡಿನ ತುಲಾ ಖಾದಿ ಸಂಸ್ಥೆಯ ಸಂಸ್ಥಾಪಕ ಅನಂತ ಶಯನ ಭಾಗವಹಿಸಲಿದ್ದಾರೆ. ಮೀರ್ ಮುಖ್ತಿಯಾರ್ ಅಲಿ ಸಂಗೀತ ಕಛೇರಿ ನಡೆಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT