ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವರುಣ ಬಿಜೆಪಿ – ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಾಟೆ: ದೂರು ದಾಖಲು

Published 1 ಮೇ 2023, 19:52 IST
Last Updated 1 ಮೇ 2023, 19:52 IST
ಅಕ್ಷರ ಗಾತ್ರ

ತಿ.ನರಸೀಪುರ: ಪಟ್ಟಣದಲ್ಲಿ ವರುಣ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಸೋಮವಾರ ಬೆಳಿಗ್ಗೆ ನಡೆದ ಗಲಾಟೆಯಲ್ಲಿ ಗಾಯಗೊಂಡ ಎರಡೂ ಗುಂಪಿನವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೈರಾಪುರದ ದಿಲೀಪ್ ಕುಮಾರ್, ಕಿರಣ್ ಹಾಗೂ ಮತ್ತೊಂದು ಗುಂಪಿನ ಹೊಸ ತಿರಮಕೂಡಲಿನ ಮಹೇಶ್, ಕುಮಾರ್, ಆನಂದ್ ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ತಿರುಮಕೂಡಲಿನ ‘ಮಲ್ಲಣ್ಣ ಹೋಟೆಲ್‌’ಗೆ ತಿಂಡಿ ತಿನ್ನಲು ಹೋಗುತ್ತಿದ್ದಾಗ ಹುಡುಗನೊಬ್ಬ ಅಡ್ಡಲಾಗಿ ಬೈಕ್ ನುಗ್ಗಿಸಿದ. ಆಕ್ಷೇಪಿಸಿದ್ದಕ್ಕೆ ಉಡಾಫೆಯಿಂದ ಮಾತನಾಡಿದ. ನಂತರ ಫೋನ್‌ ಮಾಡಿ ದಿಲೀಪ್ ಮತ್ತು ಹಲವರನ್ನು ಕರೆಯಿಸಿ ಹಲ್ಲೆ ನಡೆಸಿದ್ದಾನೆ’ ಎಂದು ಮಹೇಶ್ ದೂರು ನೀಡಿದ್ದಾರೆ.

ಪ್ರತಿದೂರು ನೀಡಿರುವ ಗಾಯಾಳು ದಿಲೀಪ್ ಕುಮಾರ್, ‘ಕಿರಣ್ ತಿಂಡಿ ತಿನ್ನಲು ಹೋಗುತ್ತಿದ್ದಾಗ ಹಿಂದೆ ಬರುತ್ತಿದ್ದ ಕುಮಾರ್, ಮಹೇಶ್ ಹಾಗೂ ಮತ್ತಿಬ್ಬರು, ಕಿರಣ್ ಜೊತೆ ಜಗಳ ತೆಗೆದರು. ಅವರನ್ನು ಸಮಾಧಾನಪಡಿಸಲು ಮುಂದಾದಾಗ, ಚುನಾವಣೆ ವಿಚಾರವನ್ನು ತೆಗೆದು, ನಿಂದಿಸಿ ತಲೆಗೆ ಹೊಡೆದರು’ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.

ಹರಿದಾಡಿದ ವಿಡಿಯೊ: ಗಾಯಗೊಂಡ ದಿಲೀಪ್‌ ಕುಮಾರ್‌ ಅವರ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಸಂಸದ ಪ್ರತಾಪ ಸಿಂಹ ತಮ್ಮ ಟ್ವಿಟರ್‌ನಲ್ಲೂ ಚಿತ್ರಗಳನ್ನು ಹಂಚಿಕೊಂಡಿದ್ದು, ‘ಇದೂನೂ ಸುಳ್ಳಾ, ಸಿದ್ದರಾಮಯ್ಯನವರೇ’ ಎಂದು ಪ್ರಶ್ನಿಸಿದ್ದಾರೆ.

‘ಹುಡುಗ ತಿಂಡಿ ತಿನ್ನಲು ಹೋದಾಗ ಗಲಾಟೆ ಮಾಡಿದ್ದರು. ಮೊಬೈಲ್‌ ಫೋನ್‌ ಕರೆ ಬಂದಾಗ ಸ್ಥಳಕ್ಕೆ ಹೋದೆ. ಆಗ ಬಿಜೆಪಿ ಕಡೆಯವ್ರ ನೀವು ಎಂದು ಹೊಸ ತಿರುಮುಕೂಡಲಿನ ಕುಮಾರ್‌ ಅವರು ದೊಣ್ಣೆಯಲ್ಲಿ ನನ್ನ ತಲೆಗೆ ಹೊಡೆದರು. ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದೆಚ್ಚರಿಸಿದರು’ ಎಂದು ವಿಡಿಯೊದಲ್ಲಿ ದಿಲೀಪ್‌ ಕುಮಾರ್‌ ಹೇಳಿದ್ದಾರೆ. 

ಆದರೆ, ವಿಡಿಯೊದ ಯಾವುದೇ ಅಂಶಗಳು ದೂರಿನಲ್ಲಿ ಇಲ್ಲ. ‘ಚುನಾವಣಾ ವಿಚಾರ ತೆಗೆದು’ ಹಲ್ಲೆ ನಡೆಸಲಾಗಿದೆ ಎಂಬುದು ಮಾತ್ರ ಉಲ್ಲೇಖಗೊಂಡಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT