ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತನನ್ನು ಕಳೆದುಕೊಂಡು ದುಃಖವಾಗಿದೆ: ಸಿದ್ದರಾಮಯ್ಯ

Published 29 ಏಪ್ರಿಲ್ 2024, 16:33 IST
Last Updated 29 ಏಪ್ರಿಲ್ 2024, 16:33 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಶೋಕಪುರಂನ ಸರ್ಕಾರಿ ಶಾಲೆಯ ಆವರಣದಲ್ಲಿ ಸೋಮವಾರ ವಿ.ಶ್ರೀನಿವಾಸ ಪ್ರಸಾದ್‌ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವುಕರಾದರು.

ನಂತರ ಮಾತನಾಡಿದ ಸಿದ್ದರಾಮಯ್ಯ, ‘ಸ್ನೇಹಿತನನ್ನು ಕಳೆದುಕೊಂಡು ದುಃಖವಾಗಿದೆ. ನಾನೂ, ಅವರು ಒಂದೇ ವಯಸ್ಸಿನವರು. ರಾಜಕೀಯದಲ್ಲಿ ನೇರ ನುಡಿಗೆ ಹೆಸರಾಗಿದ್ದವರು. ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹೋರಾಟ ಮಾಡಿದವರು’ ಎಂದು ಸ್ಮರಿಸಿದರು.

‘ಅಂಬೇಡ್ಕರ್‌ ತತ್ವ– ಸಿದ್ಧಾಂತದಂತೆ ನಡೆದುಕೊಳ್ಳುತ್ತಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿದ್ದರು. ರಾಜಕೀಯದಲ್ಲಿ ಸೋಲು– ಗೆಲುವು ಸಾಮಾನ್ಯ. ಈಚೆಗಷ್ಟೇ 50 ವರ್ಷದ ಸುದೀರ್ಘ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಿದ್ದರು. 15 ದಿನದ ಹಿಂದೆ ಭೇಟಿಯಾದಾಗ ಯಾರ ಪರವಾಗಿಯೂ ಪ್ರಚಾರದಲ್ಲೂ ಭಾಗವಹಿಸುವುದಿಲ್ಲ ಎಂದಿದ್ದರು. ಬಹಳ ವರ್ಷದ ನಂತರದ ಭೇಟಿ ಸಂತಸ ತಂದಿತ್ತು’ ಎಂದು ನೆನದರು.

‘ಪ್ರಸಾದ್‌ ಅವರಿಗೆ ಜ್ಞಾಪಕ ಶಕ್ತಿ ಚೆನ್ನಾಗಿತ್ತು. ಮೊನ್ನೆಯಷ್ಟೇ ಆಸ್ಪತ್ರೆಗೆ ಭೇಟಿ ನೀಡಿದಾಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಸಂಕಲ್ಪ ಶಕ್ತಿ ಅವರಲ್ಲಿ ಹೆಚ್ಚಿದ್ದರಿಂದ ಆರೋಗ್ಯ ಸುಧಾರಿಸುವ ಭರವಸೆಯಿತ್ತು. ಅವರ ಸಾವಿನಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದರು.

‘ನನಗೆ ಟಿಕೆಟ್‌ ಕೊಡಿಸಿದ್ದರು’: ಡಿ.ಕೆ.ಶಿವಕುಮಾರ್‌ ಮಾತನಾಡಿ, ‘1985ರ ಚುನಾವಣೆಯಲ್ಲಿ ಪ್ರಸಾದ್‌ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ವಿಧಾನಸಭಾ ಟಿಕೆಟ್‌ ದೊರೆಯಲು ಬೆಂಬಲವಾಗಿ ನಿಂತಿದ್ದರು. ಟಿಕೆಟ್‌ ಕೊಡಿಸಿದರು. ನಾನೂ ಹಾಗೂ ವಿಶ್ವನಾಥ್ ಕಾರ್ಯದರ್ಶಿ ಆಗಿದ್ದೆವು’ ಎಂದು ನೆನೆದರು.

‘ಎರಡು ಅವಧಿ ಹೊರತುಪಡಿಸಿದರೆ ಕಾಂಗ್ರೆಸ್‌ ಪಕ್ಷದಿಂದಲೇ ಸುದೀರ್ಘ ರಾಜಕಾರಣ ಮಾಡಿದ್ದಾರೆ. ನನ್ನ ಪರವಾಗಿ ಸದಾ ನಿಲ್ಲುತ್ತಿದ್ದರು. ನಾನು ಸಚಿವನಾಗಲು ಪ್ರಸಾದ್ ಹೋರಾಟ ಮಾಡಿದ್ದರು‌. ನಂಬಿದ ವ್ಯಕ್ತಿಯನ್ನು ಎಂದೂ ಬಿಟ್ಟುಕೊಡುತ್ತಿರಲಿಲ್ಲ’ ಎಂದು ಸ್ಮರಿಸಿದರು.

‘ಸ್ನೇಹಕ್ಕೆ ಮತ್ತೊಂದು ಹೆಸರೇ ಪ್ರಸಾದ್. ಅವರು ಯಾವುದೇ ಪಕ್ಷದಲ್ಲಿದ್ದರೂ ನನ್ನ ಅವರ ಸಂಬಂಧ ಉತ್ತಮವಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಫೋನ್‌ನಲ್ಲಿ ದೀರ್ಘವಾಗಿ ಮಾತನಾಡಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT