ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗಶ್ರೀ, ಕಿರಣ್‌ಕುಮಾರ್‌ ಪ್ರಥಮ

ವಿಜಯವಿಠ್ಠಲ ಕಾಲೇಜಿನಲ್ಲಿ ನಡೆದ ‘ಸಂಗೀತ ಜ್ಞಾನ ಸುಧಾ–2024’ ಸ್ಪರ್ಧೆ
Published 1 ಸೆಪ್ಟೆಂಬರ್ 2024, 2:50 IST
Last Updated 1 ಸೆಪ್ಟೆಂಬರ್ 2024, 2:50 IST
ಅಕ್ಷರ ಗಾತ್ರ

ಮೈಸೂರು: ‘ಆಧುನಿಕ ಜೀವನಶೈಲಿಯಿಂದಾಗಿ ನಾವಿಂದು ನಮ್ಮ ಸಂಸ್ಕೃತಿ ಮತ್ತು ಜಾನಪದ ಕಲೆಗಳನ್ನು ಮರೆಯುತ್ತಿದ್ದೇವೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದ ವರಪ್ರಸಾದ್ ಕಳವಳ ವ್ಯಕ್ತಪಡಿಸಿದರು.

ನಗರದ ವಿಜಯ ವಿಠ್ಠಲ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಸಂಗೀತ ಜ್ಞಾನ ಸುಧಾ–2024’ ನಗರ ಮಟ್ಟದ ಅಂತರಕಾಲೇಜು ಸಾಮಾನ್ಯ ಜ್ಞಾನ– ರಸಪ್ರಶ್ನೆ ಮತ್ತು ಭಾವಗೀತೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಗೀತ, ಸಾಹಿತ್ಯ, ಚಿತ್ರಕಲೆ ಮತ್ತು ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳು ದೈಹಿಕ ಮತ್ತು ಮಾನಸಿಕ ಜಡತ್ವವನ್ನು ಹೋಗಲಾಡಿಸಿ ಸದಾ ಚಟುವಟಿಕೆಯಿಂದ ಹಾಗೂ ಕ್ರಿಯಾಶೀಲರಾಗಿರುವಂತೆ ಪ್ರೇರೇಪಿಸುತ್ತವೆ’ ಎಂದರು.

‘ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಬಹುದು ಹಾಗೂ ಏಕಾಗ್ರತೆಯೂ ಹೆಚ್ಚುತ್ತದೆ. ಬಹುಮಾನ ಗಳಿಸುವ ಉದ್ದೇಶದಿಂದ ಸ್ಪರ್ಧೆಗಳಲ್ಲಿ ಭಾಗವಹಿಸದೇ ಆತ್ಮತೃಪ್ತಿಗಾಗಿ ಕಲೆಯನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠ್ಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ಮಾತನಾಡಿ, ‘ಜೀವನದ ಯಶಸ್ಸಿಗೆ ಅಂಕವೊಂದೇ ಮಾಪನವಲ್ಲ. ಸಂಗೀತ, ರಸಪ್ರಶ್ನೆ ಮುಂತಾದ ಚಟುವಟಿಕೆಗಳು ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಲವಾರು ವಿಷಯಗಳ ಮೂಲ ಜ್ಞಾನವನ್ನು ಅರಿಯಲು ಸಾಧ್ಯ. ಭಾಗವಹಿಸುವಿಕೆ ಮುಖ್ಯವೇ ಹೊರತು ಬಹುಮಾನವಲ್ಲ’ ಎಂದು ಹೇಳಿದರು.

ಪ್ರಾಂಶುಪಾಲ ಎಚ್.ಸತ್ಯಪ್ರಸಾದ್‌ ಮಾತನಾಡಿದರು. ವಿಜಯವಿಠ್ಠಲ ವಿದ್ಯಾಶಾಲೆಯ ಪ್ರಾಂಶುಪಾಲರಾದ ಎಸ್.ಎ.ವೀಣಾ ಉಪಸ್ಥಿತರಿದ್ದರು.

ಭಾವಗೀತೆ ಸ್ಪರ್ಧೆಯ ನಿರ್ಣಾಯಕರಾಗಿ ಅಶ್ವಿನ್ ಎಂ. ಪ್ರಭು, ಹಂಸಿನಿ ಎಸ್. ಕುಮಾರ್, ಸುಶ್ರಾವ್ಯಾ ಸಚಿನ್ ಕಾರ್ಯನಿರ್ವಹಿಸಿದರು. ವಿವಿಧ ಕಾಲೇಜುಗಳ 100 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

- ಭಾವಗೀತೆ ಸ್ಪರ್ಧೆ ವಿಜೇತರು

ಪ್ರಥಮ– ಯೋಗಶ್ರೀ (ಪ್ರಮತಿ ಪಿಯು ಕಾಲೇಜು) ದ್ವಿತೀಯ– ಶ್ರೇಯಾ ಶ್ರೀಧರ್ (ಸದ್ವಿದ್ವಾ ಸೆಮಿ ರೆಸಿಡೆನ್ಷಿಯಲ್ ಪಿಯು ಕಾಲೇಜು) ತೃತೀಯ– ಭುವನ ಎಸ್. (ವಿಜಯ ವಿಠ್ಠಲ ಪಿಯು ಕಾಲೇಜು) ಸಮಾಧಾನಕರ ಬಹುಮಾನ– ರಿಷಭ್ ಜಕ್ಕಳ್ಳಿ (ಸದ್ವಿದ್ವಾ ಸೆಮಿ ರೆಸಿಡೆನ್ಷಿಯಲ್ ಪಿಯು ಕಾಲೇಜು) ಪರ್ಯಾಯ ಪಾರಿತೋಷಕ– ಸದ್ವಿದ್ವಾ ಸೆಮಿ ರೆಸಿಡೆನ್ಷಿಯಲ್ ಪಿಯು ಕಾಲೇಜು.

- ರಸಪ್ರಶ್ನೆ ಸ್ಪರ್ಧೆ ವಿಜೇತರು

ಪ್ರಥಮ– ಕಿರಣ್ ಕುಮಾರ್ ಎಸ್. ಮತ್ತು ಮಂಜುನಾಥ ಎಸ್.ಆರ್. (ಜ್ಞಾನೋದಯ ಪಿಯು ಕಾಲೇಜು) ದ್ವಿತೀಯ– ನಾಗಶ್ರೇಯಾ ಸೌರಭ ಮತ್ತು ಪರೀಕ್ಷಾನಂದ್ ಎಸ್. (ಮರಿಮಲ್ಲಪ್ಪ ಪಿಯು ಕಾಲೇಜು) ತೃತೀಯ– ರಘುನಂದನ್ ಎ.ಎಸ್. ಮತ್ತು ಸುಪ್ರೀತ್ ಡಿ.ವೈ. (ಸದ್ವಿದ್ವಾ ಪಿಯು ಕಾಲೇಜು) ಸಮಾಧಾನಕರ ಬಹುಮಾನ– ವಿಶ್ರುತ್ ಎಸ್. ಪ್ರಸಾದ್ ಮತ್ತು ಅದ್ವೈತ್‌ ಕೆ.ವಿ. (ವಿಜಯ ವಿಠ್ಠಲ ಪಿಯು ಕಾಲೇಜು) ಪರ್ಯಾಯ ಪಾರಿತೋಷಕ– ಜ್ಞಾನೋದಯ ಪದವಿಪೂರ್ವ ಕಾಲೇಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT