ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿದ್ದರೆ ದೂಳು; ಮಳೆಯಾದರೆ ಕೆಸರು

ರಸ್ತೆ ಕಾಮಗಾರಿ ವಿಳಂಬ: ಬೋಗಾದಿ ಹಳ್ಳಿ, ರೈಲ್ವೆ ಬಡಾವಣೆಯ ಜನರಿಗೆ ತಪ್ಪದ ಸಂಕಷ್ಟ
Last Updated 9 ಆಗಸ್ಟ್ 2020, 16:29 IST
ಅಕ್ಷರ ಗಾತ್ರ

ಮೈಸೂರು: ಏಳು ತಿಂಗಳಾದರೂ ಸಕಾಲಕ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದ ಕಾರಣ, ನಿತ್ಯವೂ ಇಲ್ಲಿನ ನಿವಾಸಿಗಳು ಹಾಗೂ ವಾಹನ ಸವಾರರ ಗೋಳು ಹೇಳತೀರದು.

ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿ ಬೋಗಾದಿ ಹಾಗೂ ರೈಲ್ವೆ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಇದುವರೆಗೂ ಕಾಮಗಾರಿ ಮುಗಿಯದೇ ಇದ್ದುದರಿಂದ ಇಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಬಿಸಿಲಿದ್ದರೆ ದೂಳಿನ ಅಭಿಷೇಕ. ಮಳೆ ಬಂದರೆ ಕೆಸರಿನ ಅಭಿಷೇಕ. ಸಂಬಂಧಿಸಿದ ಅಧಿಕಾರಿಗಳಿಗೆ ಕಾಮಗಾರಿ ಮುಗಿಸಿ ಎಂದು ಮೊರೆಯಿಟ್ಟರೂ ಸ್ಪಂದನೆಯಿಲ್ಲ. ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಇದಕ್ಕೂ, ತಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ. ಇದರ ಪರಿಣಾಮ ನಾವು ನಿತ್ಯವೂ ಸಮಸ್ಯೆ ಎದುರಿಸಬೇಕಿದೆ’ ಎಂಬ ಅಳಲು ಸ್ಥಳೀಯರದ್ದು.

‘ಫೆಬ್ರುವರಿಯಲ್ಲಿ ರಸ್ತೆ ಕಾಮಗಾರಿ ಶುರುವಾಗಿತ್ತು. ರಸ್ತೆ ಅಗೆದು ಬಿಟ್ಟಿದ್ದಾರೆ. ಸಕಾಲಕ್ಕೆ ಕೆಲಸ ನಡೆಸಲಿಲ್ಲ. ಮಳೆ ಬಂದಾಗ ರಸ್ತೆಯಿಡೀ ಕೆಸರುಮಯ. ದ್ವಿಚಕ್ರ ವಾಹನ ಚಲಿಸುವಾಗ ಆಯ ತಪ್ಪಿ ಕೆಳಗೆ ಬಿದ್ದಿರುವವರು ಹಲವರು. ಆದರೂ ಸಂಬಂಧಿಸಿದ ಯಾರೊಬ್ಬರೂ ಇತ್ತ ತಲೆ ಹಾಕಿಲ್ಲ’ ಎಂದು ಸ್ಥಳೀಯ ನಿವಾಸಿಯೂ ಆಗಿರುವ ವಕೀಲ ಪ್ರಸನ್ನ ಅಲೆಗಾವಿ ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮಲ್ಲಿ ಅಂಗವಿಕಲರೂ ಇದ್ದಾರೆ. ಈ ರಸ್ತೆಯಲ್ಲಿ ನಡೆದಾಡಲೂ ಆಗದ ಪರಿಸ್ಥಿತಿಯಿದೆ. ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಸ್ಪಂದನೆ ಮಾತ್ರ ಶೂನ್ಯವಾಗಿದೆ. ಸಂಬಂಧಿಸಿದ ಎಂಜಿನಿಯರ್ ಸಹ ಸ್ಥಳಕ್ಕೆ ಬರಲ್ಲ. ಗುತ್ತಿಗೆದಾರನೂ ನಾಪತ್ತೆ. ಮೇಸ್ತ್ರಿಯದ್ದೇ ಕಾರುಬಾರು. ರಸ್ತೆ ಬಗ್ಗೆ ಯಾವೊಂದು ಮಾಹಿತಿ ಕೊಡಲ್ಲ. ಅರ್ಧಕ್ಕೆ ಕೆಲಸ ನಿಲ್ಲಿಸಿದ್ದಾರೆ. ಎಂಜಿನಿಯರ್‌ಗೆ ಮೊಬೈಲ್‌ನಲ್ಲೇ ತಾಕೀತು ಮಾಡಿದ್ದಕ್ಕೆ ಶನಿವಾರ ಒಂದಿಷ್ಟು ಮಂದಿ ಕೆಲಸಕ್ಕೆಂದು ಬಂದಿದ್ದರು’ ಎಂದು ಬೋಗಾದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ನಾಗರಾಜು ತಿಳಿಸಿದರು.

‘ಈ ರಸ್ತೆಯಲ್ಲಿ ನಿತ್ಯವೂ ನೂರಾರು ಜನ ಸಂಚರಿಸುತ್ತಾರೆ. ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಸುತ್ತಿ ಬಳಸಿ ಓಡಾಡುವುದು ಅನಿವಾರ್ಯವಾಗಿದೆ. ಯಾರೊಬ್ಬರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂಬ ದೂರು ಸ್ಥಳೀಯರಾದ ಅಶ್ರಫ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT