ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ‘ಜನಾಂದೋಲನ’ ಇಂದು: ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜು

Published 8 ಆಗಸ್ಟ್ 2024, 23:30 IST
Last Updated 8 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಮೈಸೂರು: ಆಡಳಿತಾರೂಢ ಕಾಂಗ್ರೆಸ್, ವಿರೋಧ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ನಿಂದ ಕೈಗೊಂಡಿರುವ ಹೋರಾಟದ ಸಮಾರೋಪಕ್ಕೆ ನಗರದ ಮಹಾರಾಜ ಕಾಲೇಜು ಮೈದಾನ ಸಜ್ಜಾಗಿದೆ.

‘ಮುಡಾ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿರುವ ಬಿಜೆಪಿ–ಜೆಡಿಎಸ್‌ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಡೆಸಿದ ‘ಮೈಸೂರು ಚಲೋ’ ಪಾದಯಾತ್ರೆ ಆ.10ರಂದು ಸಮಾರೋಪಗೊಳ್ಳಲಿದೆ. ಅದಕ್ಕೆ ಒಂದು ದಿನ ಮುಂಚಿತವಾಗಿಯೇ, ಅಂದರೆ ಆ.9ರಂದು (ಶುಕ್ರವಾರ) ‘ಭ್ರಷ್ಟ ಬಿಜೆಪಿ– ಜೆಡಿಎಸ್‌ ಪಾಪಪೀಡಿತರ ಯಾತ್ರೆ ವಿರುದ್ಧ ಬೃಹತ್ ಜನಾಂದೋಲನ’ಕ್ಕೆ ಕಾಂಗ್ರೆಸ್‌ ತಯಾರಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜತೆಗೆ ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಶಕ್ತಿ ಪ್ರದರ್ಶಿಸಲು ಮೂರೂ ಪಕ್ಷದವರೂ ಕಸರತ್ತು ನಡೆಸುತ್ತಿದ್ದಾರೆ. ಈ ಎರಡೂ ಸಮಾವೇಶಗಳಿಗೆ ಒಂದೇ ಸ್ಥಳ, ಒಂದೇ ವೇದಿಕೆಯು ಸಾಕ್ಷಿಯಾಗಲಿದೆ. ಪಕ್ಷಗಳ ಬ್ಯಾನರ್‌ ಮಾತ್ರ ಬದಲಾಗಲಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತಿನಿಧಿಸುವ ರಾಮನಗರ ಜಿಲ್ಲೆಯಿಂದ ಆರಂಭವಾದ ಎರಡು ದೊಡ್ಡ ಹೋರಾಟಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ತವರಾದ ಮೈಸೂರಿನಲ್ಲಿ ಸಮಾರೋಪಗೊಳ್ಳುತ್ತಿರುವುದು ವಿಶೇಷ.

ಆರೋಪ–ಪ್ರತ್ಯಾರೋಪ:

ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಸರ್ಕಾರವನ್ನು ಉರುಳಿಸಲು ಬಿಜೆಪಿ–ಜೆಡಿಎಸ್‌ ದೋಸ್ತಿಗಳು ಪೈಪೋಟಿ ಕೊಡುತ್ತಿದ್ದು, ಹೋರಾಟದ ಉದ್ದೇಶವನ್ನು ಜನರ ಮುಂದಿಡಲು ಸಮಾವೇಶಗಳ ಮೊರೆ ಹೋಗಿದ್ದಾರೆ. ಆರೋಪ–ಪ್ರತ್ಯಾರೋಪಗಳಿಗೆ ಸಮಾವೇಶ ವೇದಿಕೆಯಾಗಲಿದೆ.

ಕೇಂದ್ರದ ಎನ್‌ಡಿಎ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಮೇಲೆ ಬೆಳಕು ಚೆಲ್ಲಲು, ಬಿಜೆಪಿ–ಜೆಡಿಎಸ್‌ ಸರ್ಕಾರದ ಅವಧಿಯಲ್ಲಾದ ಹಗರಣಗಳನ್ನು ಬಿಚ್ಚಿಡಲು ಕಾಂಗ್ರೆಸ್‌ ತಯಾರಾಗಿದ್ದರೆ, ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದಿರುವ ಮುಡಾ ನಿವೇಶನ ಹಂಚಿಕೆ ಹಗರಣ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣಗಳನ್ನು ಮುಂದಿಟ್ಟುಕೊಂಡು ‘ಮೈತ್ರಿ’ ಪಕ್ಷಗಳಾದ ಬಿಜೆಪಿ–ಜೆಡಿಎಸ್‌ ಸಜ್ಜಾಗಿವೆ.

ಸಿಎಂ ಹೇಳಿಕೆ– ಕುತೂಹಲ:

‘ಬಿಜೆಪಿ–ಜೆಡಿಎಸ್‌ ಸರ್ಕಾರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಾಗಿರುವ ಹಗರಣಗಳನ್ನೆಲ್ಲಾ ಬಿಚ್ಚಿಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅವರ ತವರಿನಲ್ಲೇ ನಿಂತು, ತಿರುಗೇಟು ಕೊಡಲು ದೋಸ್ತಿಗಳೂ ಕಾಯುತ್ತಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಗೊಳಿಸಲಾಗಿದ್ದು, ಮಳೆಯಾದರೂ ಸೋರದಂತೆ ಪೆಂಡಾಲ್‌ ವ್ಯವಸ್ಥೆ ಮಾಡಲಾಗಿದೆ. 2 ಲಕ್ಷ ಮಂದಿಯನ್ನು ಸೇರಿಸಬೇಕೆಂದು ಕೆಪಿಸಿಸಿ ಉದ್ದೇಶಿಸಿದೆ. ವೇದಿಕೆಯ ಮುಂಭಾಗ 60ಸಾವಿರ ಕುರ್ಚಿಗಳನ್ನು ಹಾಕಲಾಗಿದ್ದು, ಜನರ ಸಂಖ್ಯೆಗೆ ತಕ್ಕಂತೆ ಕುರ್ಚಿಗಳ ವ್ಯವಸ್ಥೆ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಗಣ್ಯರು ಕುಳಿತುಕೊಳ್ಳುವ ಮುಖ್ಯ ವೇದಿಕೆಯೊಂದಿಗೆ (500 ಆಸನ) ಅಕ್ಕಪಕ್ಕದಲ್ಲಿ ಮತ್ತೆರಡು ಡಯಾಸ್‌ಗಳನ್ನು ಹಾಕಲಾಗಿದ್ದು, ಅಲ್ಲಿ ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಂಚೂಣಿ ನಾಯಕರಿಗೆ ಆಸನಗಳನ್ನು (ತಲಾ 250) ವ್ಯವಸ್ಥೆ ಮಾಡಲಾಗಿದೆ. ಭದ್ರತೆಗೆ ಹೊರ ಜಿಲ್ಲೆಯ ಪೊಲೀಸರನ್ನೂ ನಿಯೋಜಿಲಾಗಿದೆ.

ಬಿಜೆಪಿ–ಜೆಡಿಎಸ್‌ ಸರ್ಕಾರದಲ್ಲಾದ ಹಗರಣಗಳ ಕುರಿತು ಕೆಪಿಸಿಸಿಯಿಂದ ಸಿದ್ಧಪಡಿಸಿರುವ ವಿಡಿಯೊಗಳನ್ನು ಪ್ರದರ್ಶಿಸಲು ವೇದಿಕೆಯ ಅಲ್ಲಲ್ಲಿ ಎಲ್‌ಇಡಿ ಟಿವಿ ಹಾಗೂ ಪರದೆಗಳನ್ನು ಅಳವಡಿಸಲಾಗಿದೆ. ‘ಇಂತಿಷ್ಟು ಜನರನ್ನು ಕರೆದುಕೊಂಡು ಬರಬೇಕು’ ಎಂಬ ಗುರಿಯನ್ನು ಈ ಭಾಗದ ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸದರು, ನಿಗಮ– ಮಂಡಳಿಗಳ ಅಧ್ಯಕ್ಷರು ಹಾಗೂ ಪಕ್ಷದ ನಾಯಕರಿಗೆ ನೀಡಲಾಗಿದೆ. ಗ್ರಾಮಾತರ ಪ್ರದೇಶದಿಂದ ಜನರನ್ನು ಕರೆತರಲು ಬಸ್‌ಗಳ ವ್ಯವಸ್ಥೆಯನ್ನು ಪಕ್ಷದಿಂದ ಮಾಡಿಕೊಡಲಾಗಿದೆ.

ತಮ್ಮ ವಿರುದ್ಧ ದೋಸ್ತಿಗಳು ಮಾಡುತ್ತಿರುವ ಆರೋಪಗಳಿಂದ ಕುಪಿತರಾಗಿರುವ ಸಿದ್ದರಾಮಯ್ಯ, ‘ಶಕ್ತಿ ಪ್ರದರ್ಶನ’ದ ಮೂಲಕ ಪ್ರತ್ಯುತ್ತರ ನೀಡಲು ಬಯಸಿದ್ದು ಹೆಚ್ಚಿನ ಜನರನ್ನು ಸೇರಿಸುವಂತೆ ಬೆಂಬಲಿಗರಿಗೆ ತಾಕೀತು ಮಾಡಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ‘ಕಾಂಗ್ರೆಸ್ ಜನಾಂದೋಲನ’ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳಿಸುವ ಕಾರ್ಯದಲ್ಲಿ ಕಾರ್ಮಿಕರು ಗುರುವಾರ ನಿರತರಾಗಿದ್ದರು– ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ‘ಕಾಂಗ್ರೆಸ್ ಜನಾಂದೋಲನ’ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳಿಸುವ ಕಾರ್ಯದಲ್ಲಿ ಕಾರ್ಮಿಕರು ಗುರುವಾರ ನಿರತರಾಗಿದ್ದರು– ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ‘ಕಾಂಗ್ರೆಸ್ ಜನಾಂದೋಲನ’ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳಿಸಲಾಗಿದೆ– ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ‘ಕಾಂಗ್ರೆಸ್ ಜನಾಂದೋಲನ’ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳಿಸಲಾಗಿದೆ– ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಬಿಜೆಪಿ–ಜೆಡಿಎಸ್‌ನವರು ಸುಳ್ಳುಗಳನ್ನು ಹೇಳಿ ಇಲ್ಲಸಲ್ಲದ್ದನ್ನು ಬಿಂಬಿಸುತ್ತಿದ್ದಾರಲ್ಲ ಎಂಬ ನೋವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಅವರ ಪರವಾಗಿ ಬಂಡೆಯಾಗಿ ನಿಲ್ಲುತ್ತೇನೆ
ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ
ಸುಳ್ಳು ಪ್ರಕರಣಗಳನ್ನೆಲ್ಲಾ ಎದುರಿಸುವ ಶಕ್ತಿ ನನಗಿದೆ. ಸುಳ್ಳು ಕೇಸುಗಳು ಮಾನ್ಯವಾಗುವುದಿಲ್ಲ
ಸಿದ್ದರಾಮಯ್ಯ, ಮುಖ್ಯಮಂತ್ರಿ ( ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದಾಖಲಿಸಿದ ದೂರಿಗೆ ಪ್ರತಿಕ್ರಿಯೆ)
ಕಾಂಗ್ರೆಸ್‌ ಜನಾಂದೋಲನದಲ್ಲಿ...
ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸಚಿವ ಸಂಪುಟದ ಎಲ್ಲ ಸದಸ್ಯರು ಶಾಸಕರು ಸಂಸದರು ವಿಧಾನಪರಿಷತ್‌ ಸದಸ್ಯರು ನಿಗಮ–ಮಂಡಳಿಗಳ ಅಧ್ಯಕ್ಷರು ಪಕ್ಷದ ಮುಂಚೂಣಿ ಘಟಕದ ಪದಾಧಿಕಾರಿಗಳು ಕಾಂಗ್ರೆಸ್ ಜನಾಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಜೆಪಿ ‘ಮೈಸೂರು ಚಲೋ’ದಲ್ಲಿ
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ್‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಶಾಸಕರು ಸಂಸದರು ವಿಧಾನಪರಿಷತ್‌ ಸದಸ್ಯರು ಪಕ್ಷದ ಪ್ರಮುಖರು ‘ಮೈಸೂರು ಚಲೋ’ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT