ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರ ನಿರೀಕ್ಷೆ ತಿರುವುಮುರುವು: ಸಿದ್ದರಾಮಯ್ಯ

ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಿದ ಮಾಜಿ ಸಚಿವ ಎಂ.ಶಿವಣ್ಣ
Published 27 ಮಾರ್ಚ್ 2024, 15:47 IST
Last Updated 27 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ಮೈಸೂರು: ‘ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದಿಂದ ದೇಶದಾದ್ಯಂತ ನಮ್ಮ ಪರವಾದ ವಾತಾವರಣ ನಿರ್ಮಾಣವಾಗಲಿದೆ ಎಂಬ ಬಿಜೆಪಿಯವರ ನಿರೀಕ್ಷೆ ತಿರುವು ಮುರುವು ಆಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಇಂದಿರಗಾಂಧಿ ಕಾಂಗ್ರೆಸ್ ಭವನದ ಆವರಣದಲ್ಲಿ ಬುಧವಾರ ಸಂಜೆ ಪಕ್ಷದಿಂದ ಆಯೋಜಿಸಿದ್ದ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಜೆಪಿಯು ಶೂದ್ರರ, ಮಹಿಳೆಯರು, ದಲಿತರು, ದುಡಿಯುವ ವರ್ಗದವರು, ಶ್ರಮಿಕರು, ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಪಕ್ಷ. ಶೂದ್ರರು ರಾಜಕೀಯ ಸ್ವಾರ್ಥಕ್ಕಾಗಿ ಬಿಜೆಪಿಯಲ್ಲಿದ್ದಾರಷ್ಟೆ’ ಎಂದು ಟೀಕಿಸಿದರು.

‘ನುಡಿದಂತೆ ನಡೆದು ಜನರ ಬದುಕಿಗೆ ಸ್ಪಂದಿಸುವುದು ಕಾಂಗ್ರೆಸ್‌ನ ಸಂಸ್ಕಾರ. ಜನರನ್ನು ಭಾವನಾತ್ಮಕವಾಗಿ ಕೆರಳಿಸಿ  ಅವರನ್ನು ವಂಚಿಸುವುದು ಬಿಜೆಪಿ ಸಂಸ್ಕಾರ’ ಎಂದು ವಾಗ್ದಾಳಿ ನಡೆಸಿದರು.

‘ಮೋದಿಯವರು ಇಡೀ ದೇಶದ ಜನರಿಗೆ ಸುಳ್ಳು ಹೇಳಿದ್ದಾರೆ. 10 ವರ್ಷಗಳಲ್ಲಿ ಒಂದೇ ಒಂದು ದಿನ ಈ ದೇಶದ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಲಿಲ್ಲ. ಮಹಿಳೆಯರು, ದಲಿತರು ಹಾಗೂ ರೈತರ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ. ಏಕೆಂದರೆ, ಅವರು ಕೊಟ್ಟಿದ್ದ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಪತ್ರಕರ್ತರು ಪ್ರಶ್ನಿಸುತ್ತಾರೆಂದು ಹೆದರಿ ಈವರೆಗೂ ಒಂದು ಪತ್ರಿಕಾಗೋಷ್ಠಿಯನ್ನೇ ನಡೆಸಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಎಂ.ಶಿವಣ್ಣ ಕಾಂಗ್ರೆಸ್‌ಗೆ ಮರಳಿದ್ದಾರೆ. ಅವರನ್ನು ವಿಧಾನಸಭೆ ಚುನಾವಣೆಗೆ ಮುನ್ನ ಆಹ್ವಾನಿಸಿದ್ದೆ. ದಲಿತ ನಾಯಕನಾಗಿ ಕೋಮುವಾದಿ ಪಕ್ಷದಲ್ಲಿ ಇರಬೇಡ ಎಂದು ಹೇಳಿದ್ದೆ. ಈಗ ಅರಿವಾಗಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ದೇವರು, ಧರ್ಮ, ಜಾತಿ ಹೆಸರಿನಲ್ಲಿ ಎತ್ತಿ ಕಟ್ಟುವುದು ಬಹಳ ಸುಲಭ. ಆ ರೀತಿ ನಡೆದುಕೊಂಡು ಸಮಾಜ ಒಡೆಯುವ ಕಾರ್ಯದಲ್ಲಿ ಬಿಜೆಪಿ ತೊಡಗಿದೆ’ ಎಂದು ದೂರಿದರು.

‘ನನ್ನ ಮತ, ನನ್ನ ಪಕ್ಷ ಹಾಗೂ ನಾನೇ ಅಭ್ಯರ್ಥಿ ಎಂಬುದು ಎಲ್ಲ ಕಾರ್ಯಕರ್ತರ ಜಪ ಆಗಬೇಕು’ ಎಂದು ಸೂಚಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಜನರಿಂದ ಮತಯಾಚನೆಗೆ ನಾವು ನೈತಿಕತೆ ಉಳಿಸಿಕೊಂಡಿದ್ದೇವೆ. ಏಕೆಂದರೆ, ನುಡಿದಂತೆ ನಡೆದಿದ್ದೇವೆ’ ಎಂದು ತಿಳಿಸಿದರು.

ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿ, ‘ಸಾಮಾನ್ಯರ ಕೈಗೆ ಸುಲಭವಾಗಿ ಸಿಗುವಂತಹ ವ್ಯಕ್ತಿ ನಾನು. ಈ ಚುನಾವಣೆ ಸಿದ್ದರಾಮಯ್ಯ ಅವರ ಮರ್ಯಾದೆ ಪ್ರಶ್ನೆ. ಶಾಸಕರೇನಾದರೂ ನನ್ನನ್ನು ಸೋಲಿಸಿದರೆ ಅವರನ್ನೇ ಸೋಲಿಸಿದಂತೆ ಆಗುತ್ತದೆ’ ಎಂದರು.

ಮಾಜಿ ಸಚಿವ ಎಂ.ಶಿವಣ್ಣ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಿದರು. ಮುಖಂಡ ವಾಸು ಹಾಗೂ ಶಶಿಕಲಾ ನಾಗರಾಜ್ ಕಾಂಗ್ರೆಸ್‌ ಸೇರ್ಪಡೆಯಾದರು.

ಮೋದಿ ಅಲೆ ಇಲ್ಲ

ಡಿಕೆಶಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ ‘ಬಿಜೆಪಿಯ ಬಹಳಷ್ಟು ಮಂದಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಕಾಂಗ್ರೆಸ್ ಹಾಗೂ ಗ್ಯಾರಂಟಿ ಅಲೆ ಇದೆ. ಇದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಜನರ ನಡುವೆ ಇರುವವರನ್ನು ಗೆಲ್ಲಿಸಬೇಕು’ ಎಂದು ಸೂಚಿಸಿದರು. ‘ಇಲ್ಲಿ ಡಿಕೆಶಿ ಸಿದ್ದರಾಮಯ್ಯ ಅವರೇ ಅಭ್ಯರ್ಥಿ ಎಂದು ಭಾವಿಸಬೇಕು. ಮೈಸೂರು ಧ್ವನಿಯಾಗಿ ಲೋಕಸಭೆಯಲ್ಲಿ ಗರ್ಜಿಸಲೆಂದು ಲಕ್ಷ್ಮಣ ಅವರಿಗೆ ಟಿಕೆಟ್ ನೀಡಿದ್ದೇವೆ. ಬಿಜೆಪಿ ವೀಕ್ ಆಗಿದ್ದರಿಂದಲೇ ಹಲವು ಸಂಸದರಿಗೆ ಟಿಕೆಟ್ ನೀಡಿಲ್ಲ’ ಎಂದು ಟೀಕಿಸಿದರು.

ನನಗೆ ಆನೆ ಬಲ ಬಂದಿದೆ ಶಿವಣ್ಣ

ಎಂ. ಶಿವಣ್ಣ‌ ಮಾತನಾಡಿ ‘ಗೂಡಿಗೆ ಮರಳಿದ್ದೇನೆ. 1976ರಲ್ಲೇ ಕಾಂಗ್ರೆಸ್‌ ಸದಸ್ಯ ಆಗಿದ್ದೆ. ತಾಲ್ಲೂಕು ಬೋರ್ಡ್ ಸದಸ್ಯ ಶಾಸಕ ಹಾಗೂ ಸಚಿವ ಆಗಿದ್ದೆಲ್ಲವೂ ಕಾಂಗ್ರೆಸ್‌ ಕೊಡುಗೆಯೇ. ಬಳಿಕ ಜೆಡಿಎಸ್ ನಂತರ ಬಿಜೆಪಿ ಸೇರಿದ್ದೆ. ಈಗ ಕಾಂಗ್ರೆಸ್ ಸೇರಿದ್ದರಿಂದ ಪಕ್ಷಕ್ಕಲ್ಲ ನನಗೇ ಆನೆಬಲ ಬಂದಂತಾಗಿದೆ. ಕಾಂಗ್ರೆಸ್ ಸಾಮ್ರಾಜ್ಯ ನೋಡಿದರೆ ಸಂತೋಷ ಆಗುತ್ತದೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ಪಕ್ಷ ಗೆಲ್ಲುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT