ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಟ್ರಿಮೊನಿಯಲ್‌ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್: 15 ಮದುವೆಯಾಗಿ ವಂಚಿಸಿದ ಭೂಪ

Published 9 ಜುಲೈ 2023, 0:30 IST
Last Updated 9 ಜುಲೈ 2023, 0:30 IST
ಅಕ್ಷರ ಗಾತ್ರ

ಮೈಸೂರು: ಮ್ಯಾಟ್ರಿಮೊನಿಯಲ್‌ ವೆಬ್‌ ಸೈಟ್‌ಗಳ ಮೂಲಕ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆಯಾಗಿ ನಂತರ ಅವರ ಹಣ, ಒಡವೆ ಯೊಂದಿಗೆ ಪರಾರಿ ಯಾಗುತ್ತಿದ್ದ, ಬೆಂಗಳೂರಿನ ಕಾಳಿದಾಸ ನಗರದ ನಿವಾಸಿ ಕೆ.ಬಿ.ಮಹೇಶ್‌ (35) ಎಂಬಾತನನ್ನು ಇಲ್ಲಿನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ಎರಡು ಕಾರು, 7 ಮೊಬೈಲ್‌ ಫೋನ್ ಹಾಗೂ ₹2 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ. 15ಕ್ಕೂ ಹೆಚ್ಚು ಮಹಿಳೆಯರನ್ನು ವಂಚಿಸಿದ್ದಾಗಿ ಆರೋಪಿಯು ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

‘ವಿವಾಹ ಸಂಬಂಧಿ ಜಾಲತಾಣ ಗಳಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿಕೊಳ್ಳು ತ್ತಿದ್ದ ಆರೋಪಿಯು, ಮದುವೆಯಾಗದ ವಯಸ್ಸಾದ ಮಹಿಳೆಯರು, ವಿಧವೆಯರನ್ನು ಹುಡುಕುತ್ತಿದ್ದ. ಅವರಿಗೆ ತಾನು ಡಾಕ್ಟರ್‌, ಎಂಜಿನಿಯರ್, ಸಿವಿಲ್‌ ಗುತ್ತಿಗೆದಾರನೆಂದು ಪರಿಚಯಿಸಿ ಕೊಂಡು ಸಂಪರ್ಕ ಬೆಳೆಸುತ್ತಿದ್ದ. ನಂಬಿಸಿ ಮದುವೆ ಮಾಡಿಕೊಳ್ಳುತ್ತಿದ್ದ. ಬಾಡಿಗೆ ಮನೆಗಳಿಗೆ ಕರೆದೊಯ್ದು ಬಿಡುತ್ತಿದ್ದ. ಒಂದಿಷ್ಟು ದಿನ ಜೊತೆಗಿದ್ದು, ಅವರ ಹಣ, ಒಡವೆಯೊಂದಿಗೆ ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ನನಗೆ ತುರ್ತು ಶಸ್ತ್ರಚಿಕಿತ್ಸೆ ಆಗಿರುವುದರಿಂದ ಫೋನ್ ತೆಗೆಯುವು ದಿಲ್ಲ. ನನ್ನ ವಿರುದ್ಧ ಸಿವಿಲ್‌ ಪ್ರಕರಣ ಇದೆ. ಪೊಲೀಸರು ಕೇಳಿದರೆ ಏನೂ ಹೇಳಬೇಡಿ. ಹೇಳಿದರೆ ನನ್ನನ್ನು ಬಂಧಿಸುತ್ತಾರೆ’ ಎಂದು ಆರೋಪಿಯು ಮಹಿಳೆಯರನ್ನು ಯಾಮಾರಿಸುತ್ತಿದ್ದ. 

ಬೆಳಕಿಗೆ ಬಂದಿದ್ದು ಹೇಗೆ?: ಆರೋಪಿ ಜಾಲತಾಣವೊಂದರ ಮೂಲಕ ಬೆಂಗಳೂರು ನಿವಾಸಿ ಹೇಮಲತಾ ಎಂಬುವರನ್ನು ಪರಿಚಯಿಸಿಕೊಂಡು ತಾನು ವೈದ್ಯನೆಂದು ಹೇಳಿಕೊಂಡಿದ್ದ. 2022ರ ಡಿಸೆಂಬರ್‌ನಲ್ಲಿ ಮಹಿಳೆಯು ಮೈಸೂರಿನ ಲಿಂಗಾಂಬುದಿ ಪಾಳ್ಯ ದಲ್ಲಿರುವ ಆರೋಪಿಯ ಬಾಡಿಗೆ ಮನೆಗೂ ಬಂದು ಹೋಗಿದ್ದರು. 2023ರ ಜ.28ರಂದು ವಿಶಾಖ ಪಟ್ಟಣದ ಹೋಟೆಲ್‌ನಲ್ಲಿ ಮದುವೆ ಯಾಗಿದ್ದರು. ಮರುದಿನವೇ ಆರೋಪಿಯು ಹೇಮಲತಾ ಅವರನ್ನು ಮೈಸೂರಿನ ಮನೆಗೆ ಕರೆತಂದಿದ್ದ.

ಕೆಲ ದಿನಗಳ ಬಳಿಕ, ತಾನು ವಿಜಯನಗರದಲ್ಲಿ ಕ್ಲಿನಿಕ್‌ ತೆರೆಯುತ್ತಿದ್ದು, ₹70 ಲಕ್ಷ ಸಾಲ ತೆಗೆದುಕೊಡುವಂತೆ ಪತ್ನಿಯನ್ನು ಪೀಡಿಸಿದ್ದ. ಒಪ್ಪದಿದ್ದಾಗ ಕೊಲೆ ಬೆದರಿಕೆಯೊಡ್ಡಿದ್ದ. ಫೆ.5ರಂದು ಮನೆಯಲ್ಲಿದ್ದ ₹15 ಲಕ್ಷ ನಗದು ಹಾಗೂ 200 ಗ್ರಾಂನಷ್ಟು ಒಡವೆಗಳೊಂದಿಗೆ ಪರಾರಿಯಾಗಿದ್ದ. ನಂತರ, ದಿವ್ಯ ಎಂಬ ಮಹಿಳೆ ಮನೆಗೆ ಬಂದು, ಮಹೇಶ್‌ ತನ್ನನ್ನೂ ಮದುವೆಯಾಗಿರುವುದಾಗಿ ಹೇಳಿದ್ದರು. ಮೋಸ ಹೋಗಿರುವುದನ್ನು ಅರಿತು ಹೇಮಲತಾ ಕುವೆಂಪುನಗರ ಠಾಣೆಗೆ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 420, 406, 506 ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ‌ತುಮಕೂರಿನ ಮಹರ್ಷಿ ವಾಲ್ಮೀಕಿ ಸರ್ಕಲ್‌ ಬಳಿ ಶುಕ್ರವಾರ ಬಂಧಿಸಿದರು.

ಡಿಸಿಪಿ ಮುತ್ತುರಾಜು, ಎಸಿಪಿ ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಕುವೆಂಪುನಗರ ಠಾಣೆ ಇನ್‌ಸ್ಪೆಕ್ಟರ್‌ ಎಲ್‌.ಅರುಣ್, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಎಂ.ರಾಧಾ, ಎಸ್‌.ಪಿ. ಗೋಪಾಲ್, ನಂಜುಂಡಸ್ವಾಮಿ ಅವರ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT