ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಭಾರತದಿಂದಲೂ ವೈದ್ಯರ ಸೃಷ್ಟಿ: ಡಾ.ಶಶಾಂಕ್ ಆರ್.ಜೋಶಿ

ಜೆಎಸ್‌ಎಸ್; ವೈದ್ಯಕೀಯ ಪದವೀಧರರ ದಿನಾಚರಣೆ, 204 ವಿದ್ಯಾರ್ಥಿಗಳಿಗೆ ಪದವಿ
Published 24 ಮಾರ್ಚ್ 2024, 15:53 IST
Last Updated 24 ಮಾರ್ಚ್ 2024, 15:53 IST
ಅಕ್ಷರ ಗಾತ್ರ

ಮೈಸೂರು: ‘ವೈದ್ಯಕೀಯ ಕ್ಷೇತ್ರಕ್ಕೆ ಗ್ರಾಮೀಣ ಭಾಗದವರೂ ಹೆಚ್ಚಾಗಿ ಬರುತ್ತಿದ್ದು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವೈದ್ಯರನ್ನು ಸೃಷ್ಟಿಸುತ್ತಿದೆ’ ಎಂದು ಮುಂಬೈನ ಲೀಲಾವತಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಎಂಡೋಕ್ರಿನಾಲಜಿಸ್ಟ್ ಡಾ.ಶಶಾಂಕ್ ಆರ್.ಜೋಶಿ ತಿಳಿಸಿದರು.

ಇಲ್ಲಿನ ಶಿವರಾತ್ರೀಶ್ವರ ನಗರದ ಜೆಎಸ್‌ಎಸ್ ವೈದ್ಯಕೀಯ ಸಂಸ್ಥೆಗಳ ಆವರಣದಲ್ಲಿ ಶನಿವಾರ ನಡೆದ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪದವೀಧರರ ದಿನಾಚರಣೆಯಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ‘ವೈದ್ಯ ವೃತ್ತಿ ಶ್ರೇಷ್ಠವಾದ ಕೆಲಸ. ಜಾತಿ, ಮತ, ಧರ್ಮ ನೋಡದೆ ಮಾನವೀಯತೆಯಡಿ ವೈದ್ಯರು ಕೆಲಸ ಮಾಡಬೇಕು. ವೈದ್ಯಕೀಯ ಅಧ್ಯಯನದಲ್ಲಿ ಬಹುಮಾನ ಮುಖ್ಯವಲ್ಲ. ರೋಗಿಯ ಕಾಯಿಲೆ ಗುಣಪಡಿಸುವುದೇ ಮುಖ್ಯ’ ಎಂದರು.

‘ಭಾಷಾಂತರ ತಂತ್ರಜ್ಞಾನ ಬಳಕೆಯಿಂದ ರೋಗಿ ಮಾತನಾಡುವ ಭಾಷೆ ಅರ್ಥ ಮಾಡಿಕೊಂಡು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಲಿಕೆ, ಸಂಶೋಧನೆ ಮತ್ತು ವಿಷಯ ಹಂಚಿಕೆ ಹೆಚ್ಚಾದಲ್ಲಿ ವ್ಯಕ್ತಿಯ ಜ್ಞಾನಮಟ್ಟವು ಹೆಚ್ಚಾಗುತ್ತದೆ. ವೈದ್ಯರೂ ಜ್ಞಾನ ಹಂಚಿಕೊಳ್ಳಲು ಸಿದ್ಧರಿರಬೇಕು. ವೈದ್ಯರಿಗೆ ತಾಳ್ಮೆ, ಸಮಯ ಪ್ರಜ್ಞೆ ಬಹಳ ಮುಖ್ಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೃತ್ತಿರೇಖೆಯನ್ನು ದಾಟಬಾರದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಸಿಇಒ ಸಿ.ಜಿ.ಬೆಟಸೂರಮಠ, ಜೆಎಸ್‌ಎಸ್ ಅಕಾಡೆಮಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಸುರೀಂದರ್ ಸಿಂಗ್, ಕುಲಸಚಿವ ಡಾ.ಬಿ.ಮಂಜುನಾಥ್, ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ, ಉಪ ಪ್ರಾಂಶುಪಾಲರಾದ ಡಾ.ಎಂ.ಎನ್.ಸುಮಾ, ಡಾ.ಪ್ರವೀಣ್ ಕುಲಕರ್ಣಿ, ಆಡಳಿತಾಧಿಕಾರಿ ಎಸ್.ಆರ್.ಸತೀಶ್ ಚಂದ್ರ, ಡಾ.ಮಹಾಂತಪ್ಪ ಇದ್ದರು.

8 ಮಂದಿಗೆ ಚಿನ್ನ ನಗದು ಬಹುಮಾನ

ಕಾರ್ಯಕ್ರಮದಲ್ಲಿ 204 ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆದರು. ಅವರಲ್ಲಿ 8 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳು 12 ಚಿನ್ನದ ಪದಕ ಹಾಗೂ 12 ನಗದು ಬಹುಮಾನಗಳನ್ನು ಪಡೆದರು. ಶುಭದೀಪ್ ಧರ್‌ಗೆ 6 ಚಿನ್ನ 2 ನಗದು ಬಹುಮಾನ ರೋಹಿತ್ ಆರ್‌. ನಾಯರ್ 3 ಚಿನ್ನ 4 ನಗದು ಬಹುಮಾನ ಎಸ್.ಎಂ.ತೇಜಶ್ರೀ 2 ಚಿನ್ನ 2 ನಗದು ಬಹುಮಾನ ಸೃಷ್ಟಿ ಖೈತಾನ್ 1 ಚಿನ್ನದ ಪದಕವನ್ನು ಪಡೆದರು. ಜ್ಯೋತ್ಸ್ನಾ ಸಿ. ರಾಮೇಶ್ವರ ಸಮ್ಯಕ್ ಶಾ ಕೆ.ನಯನಾ ಶಾಂತ್ವಿ ಕುಮಾರಿ ತಲಾ ಒಂದು ನಗದು ಬಹುಮಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT