ಭಾನುವಾರ, ನವೆಂಬರ್ 27, 2022
27 °C
ನಾಡಹಬ್ಬ: ಜನರ ಮೆಚ್ಚುಗೆಗೆ ಪಾತ್ರವಾದ ಕಾರ್ಯಕ್ರಮಗಳು

ಮೈಸೂರು| ನಾಡಹಬ್ಬ ದಸರಾ ಪ್ರವಾಸೋದ್ಯಮಕ್ಕೆ ‘ಬೂಸ್ಟರ್ ಡೋಸ್’

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ದಸರಾ ಅಂಗವಾಗಿ ಈ ಬಾರಿ ಹಮ್ಮಿಕೊಂಡಿದ್ದ ವೈವಿಧ್ಯಮಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ಕೋವಿಡ್–19 ಸಾಂಕ್ರಾಮಿಕದಿಂದಾಗಿ ಎರಡು ವರ್ಷಗಳಿಂದ ತೀವ್ರ ಕಂಗೆಟ್ಟಿದ್ದ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಲು ಉತ್ಸವವು ‘ಬೂಸ್ಟರ್‌ ಡೋಸ್’ ಕೂಡ ಆಯಿತು.

ಕಲೆ, ಸಂಸ್ಕೃತಿ, ಯದುವಂಶದ ಪರಂಪರೆ ಬಿಂಬಿಸುವ ಕಾರ್ಯಕ್ರಮವಾದ ದಸರೆಯು ವಾಣಿಜ್ಯ ಚಟುವಟಿಕೆಗಳಿಗೂ ಚಿಮ್ಮುಹಲಗೆಯಾಯಿತು. ಹೊರ ರಾಜ್ಯ, ಜಿಲ್ಲೆ ಹಾಗೂ ದೇಶಗಳ ಪ್ರವಾಸಿಗರು ಮತ್ತು ಜನತೆಯ ಗಮನಸೆಳೆಯಿತು.

ದಸರಾ ಉದ್ಘಾಟನೆ ದಿನದಿಂದಲೇ ನಗರದಾದ್ಯಂತ ಜನವೋ ಜನ ಕಂಡುಬಂದರು. ಅದರಲ್ಲೂ ಸಂಜೆಯಿಂದ ತಡರಾತ್ರಿವರೆಗೆ ಮತ್ತು ವಾರಾಂತ್ಯದಲ್ಲಿ ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌ ಉಂಟಾಗುತ್ತಿತ್ತು. ದೀಪಾಲಂಕಾರ ವೀಕ್ಷಣೆಗೆ ಜನರು ಮುಗಿಬಿದ್ದರು. ಈ ಕಾರಣದಿಂದ ವಾಹನ ದಟ್ಟಣೆ ನಿಯಂತ್ರಿಸಲು, ರಾತ್ರಿ 9ರಿಂದ ರಾತ್ರಿ 11ರವರೆಗೆ ಅರಮನೆ ಸುತ್ತಲಿನ ರಸ್ತೆಗಳನ್ನು ‘ವಾಹನ ರಹಿತ ವಲಯ’ ಎಂದು ಘೋಷಿಸಲಾಗಿತ್ತು.

ಜಂಬೂಸವಾರಿಗೆ ಸಿದ್ಧಗೊಳ್ಳುತ್ತಿರುವ ಅರಮನೆಗಳ ನಗರಿಯಲ್ಲಿ ಆಯುಧ ಪೂಜೆಯ ಮುನ್ನಾ ದಿನವಾದ ಸೋಮವಾರವೂ ಕಾರ್ಯಕ್ರಮಗಳಿಗೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಹಲವು ಕಾರ್ಯಕ್ರಮಗಳು:

ಚಲನಚಿತ್ರೋತ್ಸವ ಮತ್ತು ಯುವ ದಸರಾದಲ್ಲಿ ಒಂದು ದಿನವನ್ನು ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸಿದ್ದು ವಿಶೇಷವಾಗಿತ್ತು. ವಿದ್ಯುತ್‌ ದೀಪಾಲಂಕಾರದಲ್ಲೂ ಪುನೀತ್‌ ಸ್ಮರಿಸಲಾಯಿತು. ಕುಪ್ಪಣ್ಣ ಉದ್ಯಾನ ಮತ್ತು ಅರಮನೆ ಆವರಣದಲ್ಲಿ ನಡೆದ ಪುಷ್ಪ ಪ್ರದರ್ಶನದಲ್ಲೂ ಅಪ್ಪುಗೆ ನಮನ ಸಲ್ಲಿಸಲಾಯಿತು.

ಇದರೊಂದಿಗೆ, ಕುಸ್ತಿ, ಕ್ರೀಡೆ, ಆಹಾರ ಮೇಳ, ಮಹಿಳಾ–ಮಕ್ಕಳ ದಸರಾ, ರೈತ ದಸರಾ, ಯೋಗ  ದಸರಾ, ಪಾರಂಪರಿಕ ದಸರಾ, ವಿವಿಧ ಕವಿಗೋಷ್ಠಿಗಳು, ಶ್ವಾನಗಳ ಪ್ರದರ್ಶನ, ಪೊಲೀಸ್ ವಾದ್ಯ ವೃಂದ, ಚಿತ್ರ–ಶಿಲ್ಪ ಕಲೆ ಪ್ರದರ್ಶನ, ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ, ಗ್ರಾಮೀಣ ಜನರಿಗೆ ದಸರಾ ದರ್ಶನ, ಸಾಹಸ ಚಟುವಟಿಕೆಗಳು, ಹೆಲಿರೈಡ್, ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ, ಯೋಗ ಸಂಭ್ರಮ, ವೈದ್ಯಕೀಯ ವಸ್ತುಪ್ರದರ್ಶನ, ಉರ್ದು ಕವಿಗೋಷ್ಠಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ, ಅರಮನೆ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೊದಲಾದವು ನಡೆದವು. ಕೈಗಾರಿಕಾ ದಸರಾ ಈ ಬಾರಿಯ ವಿಶೇಷವಾಗಿತ್ತು.

ಮುಂದುವರಿಯಲಿರುವ ವಸ್ತುಪ್ರದರ್ಶನ:

ದಸರಾ ವಸ್ತುಪ್ರದರ್ಶನವು 90 ದಿನಗಳವರೆಗೆ ಮುಂದುವರಿಯಲಿದೆ. ದಸರೆಗೂ ಮುನ್ನವೇ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆದ ಯುವ ಸಂಭ್ರಮ ಯುವಜನರನ್ನು ಆಕರ್ಷಿಸಿತು. ರಾಜವಂಶಸ್ಥರು ಅರಮನೆಯಲ್ಲಿ ‘ಖಾಸಗಿ ದರ್ಬಾರ್‌’ ನಡೆಸಿದರು. ಕವಿಗೋಷ್ಠಿಯಲ್ಲಿ ಅವಾಂತರಗಳೇ ಸದ್ದು ಮಾಡಿದವು. ಕ್ರೀಡಾಕೂಟವು ದಸರೆ ಉದ್ಘಾಟನೆಯಂದೇ ಆರಂಭಗೊಳ್ಳಲಿಲ್ಲ. ಯುವದಸರೆಯನ್ನು 7 ದಿನಗಳ ಬದಲಿಗೆ 6 ದಿನವಷ್ಟೇ ನಡೆಸಲಾಯಿತು. ಚಿತ್ರೋತ್ಸವ ಉದ್ಘಾಟನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಯುವ ದಸರಾ ಸೇರಿದಂತೆ ಬಹುತೇಕ ಕಾರ್ಯಕ್ರಮಗಳಿಗೆ ಸೋಮವಾರ ತೆರೆ ಬಿದ್ದಿತು. ಮಂಗಳವಾರ ಆಯುಧ ಪೂಜೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು