ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ನೀಡಿದವರಿಗೆ ಉದ್ಯೋಗ ಕೊಡಲು ಆಗ್ರಹ

ಸಮನ್ವಯ ಸಮಿತಿ ಸಭೆ ಮುಂದಕ್ಕೆ; ಆಕ್ರೋಶಗೊಂಡ ರೈತರು
Last Updated 3 ನವೆಂಬರ್ 2020, 13:39 IST
ಅಕ್ಷರ ಗಾತ್ರ

ಮೈಸೂರು: ಏಷ್ಯನ್ ಪೇಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದವರಿಗೆ ಉದ್ಯೋಗ ಕಲ್ಪಿಸಿಕೊಡುವ ಸಂಬಂಧ ನಿಗದಿಯಾಗಿದ್ದ ಸಮನ್ವಯ ಸಮಿತಿ ಸಭೆ ಮುಂದೂಡಿದ್ದನ್ನು ಖಂಡಿಸಿ ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದ ಸಮೀಪ ರೈತರು ಕಾರ್ಖಾನೆ ಸ್ಥಾಪನೆಗೆ ತಮ್ಮ ಭೂಮಿ ನೀಡಿದ್ದರು. ಆ ಸಮಯದಲ್ಲಿ ಇವರಿಗೆ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೂ ಉದ್ಯೋಗ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಸೇರಿದ್ದ ಪ್ರತಿಭಟನಕಾರರು ದೂರಿದರು.

ಉದ್ಯೋಗ ನೀಡುವ ಆಮಿಷ ಒಡ್ಡಿ ಅತಿ ಕಡಿಮೆ ದರದಲ್ಲಿ ಭೂಮಿ ಪಡೆದುಕೊಂಡರು. ಈಗ ಕಾರ್ಖಾನೆ ಆರಂಭವಾಗಿದೆ. ಕೆಲಸಕ್ಕೆ ತೆಗೆದುಕೊಳ್ಳುವಾಗ ಸ್ಥಳೀಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಜಿಲ್ಲಾಡಳಿತದ ಗಮನಕ್ಕೆ ಈ ವಿಷಯ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ, ಕಾರ್ಖಾನೆಯವರು ಈ ಸೂಚನೆಗೆ ಕಿಮ್ಮತ್ತು ನೀಡಿಲ್ಲ. ಈಗ ಜಿಲ್ಲಾಡಳಿತ ಮೌನ ವಹಿಸಿದೆ. ಹೋರಾಟ ಬಿಟ್ಟರೆ ಬೇರೆ ದಾರಿ ಕಾಣದಾಗಿದೆ ಎಂದು ಅಳಲು ತೋಡಿಕೊಂಡರು.

ಒಂದು ವೇಳೆ ಬೇಡಿಕೆ ಈಡೇರದೇ ಹೋದರೆ ಕಾರ್ಖಾನೆಗೆ ಮುತ್ತಿಗೆ ಹಾಕಲಾಗುವುದು. ರೈತರಿಗೆ ಏನಾದರೂ ಆದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ. ಶೀಘ್ರದಲ್ಲಿ ಸಮನ್ವಯ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಮೂರು ಬಾರಿ ನಿಗದಿಯಾಗಿದ್ದ ಸಮನ್ವಯ ಸಮಿತಿ ಸಭೆಯನ್ನು ವಿನಾಕಾರಣ ಮುಂದಕ್ಕೆ ಹಾಕಲಾಗಿದೆ. ಇದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದರು.

ಸಂಘಟನೆಯ ಹೊಸಕೋಟೆ ಬಸವರಾಜು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT