ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕುಡುಗೋಲು ಕಣ ರಕ್ತಹೀನತೆ’ ರೋಗಿಗಳಿಗೆ ಗುರುತಿನ ಚೀಟಿ ವಿತರಣೆ: ಉಚಿತ ಚಿಕಿತ್ಸೆ

Published 4 ಜುಲೈ 2024, 7:13 IST
Last Updated 4 ಜುಲೈ 2024, 7:13 IST
ಅಕ್ಷರ ಗಾತ್ರ

ಮೈಸೂರು: ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ‘ಕುಡುಗೋಲು ಕಣ ರಕ್ತಹೀನತೆ’ (ಸಿಕಲ್ ಸೆಲ್ ಕಾಯಿಲೆಗೆ ಒಳಗಾಗಿರುವ ಬುಡಕಟ್ಟು ಜನರಿಗೆ ಹಲವು ಸೌಲಭ್ಯಗಳನ್ನು ಪಡೆಯುವುದಕ್ಕೆ ಅನುಕೂಲ ಕಲ್ಪಿಸುವ ‘ವಿಶಿಷ್ಟ ಗುರುತಿನ ಚೀಟಿ’ ವಿತರಿಸುವ ಕಾರ್ಯಕ್ಕೆ ಆರೋಗ್ಯ ಇಲಾಖೆಯಿಂದ ಚಾಲನೆ ನೀಡಲಾಗಿದೆ.

ಈ ಕಾಯಿಲೆಯ ತಪಾಸಣೆ ಕಾರ್ಯಕ್ಕೆ ಹೋದ ವರ್ಷ ಮೈಸೂರಿನಲ್ಲೇ ಚಾಲನೆ ನೀಡಲಾಗಿತ್ತು. ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 55,503 ಮಂದಿ ಆದಿವಾಸಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. 2,018 ಮಂದಿಗೆ ರೋಗ ಲಕ್ಷಣ ಕಂಡುಬಂದಿದೆ. ಇವರಲ್ಲಿ ಮೈಸೂರಿನಲ್ಲಿ 86, ಚಾಮರಾಜನಗರದಲ್ಲಿ 75 ಹಾಗೂ ಕೊಡಗು ಜಿಲ್ಲೆಯಲ್ಲಿ 31 ಮಂದಿಯಲ್ಲಿ ಈ ರೋಗವಿರುವುದು ದೃಢಪಟ್ಟಿದೆ. ಅವರಿಗೆ ನೆರವಾಗಲು ಸರ್ಕಾರದಿಂದ ಕ್ರಮ ವಹಿಸಲಾಗಿದೆ.

ರೋಗಿಗಳಿಗೆ ಮುಂದಿನ ಎರಡು ವರ್ಷಗಳ ಅವಧಿಗೆ ಸಂಪೂರ್ಣ ತಪಾಸಣೆ, ತರಬೇತಿ, ಜಾಗೃತಿ, ಮಾದರಿ ಸಾರಿಗೆ ಮತ್ತು ಸಂಪರ್ಕ ಸೇವೆಗಳಿಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳನ್ನು ದತ್ತು ತೆಗೆದುಕೊಂಡಿದೆ.

ಗಂಭೀರ ಸಮಸ್ಯೆಗೆ: ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ವೈದ್ಯಾಧಿಕಾರಿ ಡಾ.ಸಿರಾಜ್‌ ಅಹಮದ್, ‘ಇದೊಂದು ಆನುವಂಶಿಕ ಅಸ್ವಸ್ಥತೆಗಳ ಗುಂಪಿನಲ್ಲಿ ಒಂದಾಗಿದೆ. ಕೆಲವು ಕೆಂಪು ರಕ್ತ ಕಣಗಳು ಕುಡುಗೋಲು ಅಥವಾ ಅರ್ಧಚಂದ್ರಾಕಾರದಲ್ಲಿರುತ್ತವೆ. ಇದು ರಕ್ತದ ಹರಿವನ್ನು ನಿಧಾನಗೊಳಿಸಬಹುದು ಹಾಗೂ ನಿರ್ಬಂಧಿಸಲೂಬಹುದು. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು’ ಎಂದು ತಿಳಿಸಿದರು.

‘ಈ ಕಾಯಿಲೆ ದೃಢಪಟ್ಟಿರುವವರನ್ನು ‘ಅದೃಶ್ಯ ಅಂಗವಿಕಲರು’ (ಇನ್‌ವಿಸಿಬಲ್ ಹ್ಯಾಂಡಿಕ್ಯಾಪ್‌) ಎಂದು ಪರಿಗಣಿಸಲಾಗಿದೆ. ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಇದನ್ನು ಪ್ರಮಾಣೀಕರಿಸಲಾಗುತ್ತದೆ. ಈ ಸಮಸ್ಯೆ ಉಳ್ಳವರಿಗೆ ಜೀವಿತಾವಧಿಯವರೆಗೂ ಪಿಂಚಣಿ, ಔಷಧಿ ಹಾಗೂ ಆರೋಗ್ಯ ಸೇವೆಯನ್ನು ಕಲ್ಪಿಸಲಾಗುತ್ತದೆ. ಇದಕ್ಕಾಗಿ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ನೋಂದಣಿಗಾಗಿ ಆನ್‌ಲೈನ್‌ನಲ್ಲಿ ಪೋರ್ಟಲ್‌ ಕೂಡ ಆರಂಭಿಸಲಾಗಿದೆ. ಇದರಿಂದ ಪ್ರಗತಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದಾಗಿದೆ’ ಎಂದು ವಿವರ ನೀಡಿದರು.

‘ಬುಡಕಟ್ಟು ಜನರು ಮದುವೆಗೆ ಮುನ್ನ ಜೆನೆಟಿಕ್ ಕೌನ್ಸೆಲಿಂಗ್ ಮಾಡಿಸುವುದರಿಂದ, ಈ ರೋಗ ಬೇರೆಯವರಿಗೆ ಬರುವುದನ್ನು ತಪ್ಪಿಸಲು ಅವಕಾಶವಿದೆ. ಪಾಸಿಟಿವ್‌ ಬಂದವರು ನೆಗೆಟಿವ್ ಇರುವವರನ್ನು ಮದುವೆಯಾದರೆ ತೊಂದರೆ ಆಗುವುದಿಲ್ಲ. ರೋಗ ದೃಢಪಟ್ಟವರು ಪಾಸಿಟಿವ್ ಇರುವವರನ್ನೇ ಮದುವೆಯಾದರೆ ಕಾಯಿಲೆ ಬರುತ್ತದೆ. ಈ ಬಗ್ಗೆಯೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಈ ಕಾಯಿಲೆ ದೃಢಪಟ್ಟಿರುವವರು ‘ಅದೃಶ್ಯ ಅಂಗವಿಕಲರು’ ರೋಗಿಗಳಿಗೆ ಮುಂದಿನ ಎರಡು ವರ್ಷಗಳವರೆಗೆ ಸೌಲಭ್ಯ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ದತ್ತು ಪಡೆದ ಐಐಎಸ್‌ಸಿ
ಮುಂದಿನ‌ ಎರಡು ವರ್ಷಗಳಲ್ಲಿ ಏಳು ಜಿಲ್ಲೆಗಳ ಹಾಡಿಗಳ 352187 ಜನರನ್ನು ತಪಾಸಣೆಗೆ ಒಳಪಡಿಸಲಾಗುವುದು. ಅವರಿಗೆ ನಿಯಮಿತ ಚಿಕಿತ್ಸೆ ಕೊಡಿಸಿ ಜೀವನ ಮಟ್ಟ ವೃದ್ಧಿಸಲಾಗುವುದು.
ದಿನೇಶ್‌ ಗುಂಡೂರಾವ್ ಆರೋಗ್ಯ ಸಚಿವ
ಏನೇನು ಸೌಲಭ್ಯ?
ಕಾಯಿಲೆ ಇರುವುದು ದೃಢಪಟ್ಟವರಿಗೆ ಮಾಸಿಕ ಪಿಂಚಣಿ ₹ 1600 ನೀಡಲಾಗುತ್ತದೆ. ನಿಗದಿತ ತಂತ್ರಾಂಶದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಅವರವರ ಖಾತೆಗೆ ಜಮೆಯಾಗುತ್ತದೆ. ಬಸ್‌ ಹಾಗೂ ರೈಲಿನಲ್ಲಿ ಪ್ರಯಾಣಿಸುವಾಗ ಶೇ 50ರಷ್ಟು ರಿಯಾಯಿತಿ ದೊರೆಯುತ್ತದೆ. ಅವರಿಗೆ ಆರೋಗ್ಯದ ಸಮಸ್ಯೆ ಕಂಡುಬಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಕಾಲಕಾಲಕ್ಕೆ ತಪಾಸಣೆಯನ್ನೂ ಉಚಿತವಾಗಿ ನೀಡಲಾಗುವುದು. ಬಳಕೆದಾರರ ಶುಲ್ಕವನ್ನೂ ಅವರಿಂದ ಪಡೆದುಕೊಳ್ಳುವುದಿಲ್ಲ. ರಕ್ತವನ್ನೂ ಉಚಿತವಾಗಿ ನೀಡಲಾಗುತ್ತದೆ. ಚಿಕಿತ್ಸೆಗೆ ಒದಗಿಸಲಾಗುವ ಮಾತ್ರೆಗಳನ್ನು (ಹೈಡ್ರಾಕ್ಸಿಯುರಿಯಾ ಮಾತ್ರೆ ಹಾಗೂ ಹೆಚ್ಚುವರಿ ರೋಗ ನಿರೋಧಕಗಳು) ಪ್ರತಿ ತಿಂಗಳೂ ಉಚಿತವಾಗಿ ವಿತರಿಸಲಾಗುತ್ತದೆ. ಇದೆಲ್ಲದಕ್ಕೂ ‘ಬಹುಪಯೋಗಿ’ಯಾದ ಗುರುತಿನ ಚೀಟಿ ನೆರವಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT