ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿಗಳು ದರ ಸ್ಥಿರತೆ ಕಾಯ್ದುಕೊಳ್ಳಿ: ಸಂಸದ ಪ್ರತಾಪ ಸಿಂಹ ಸಲಹೆ

ತಂಬಾಕು ಹರಾಜು ಮಾರುಕಟ್ಟೆಗೆ ಚಾಲನೆ ನೀಡಿದ ಸಂಸದ ಪ್ರತಾಪ ಸಿಂಹ ಸಲಹೆ
Published 26 ಸೆಪ್ಟೆಂಬರ್ 2023, 4:59 IST
Last Updated 26 ಸೆಪ್ಟೆಂಬರ್ 2023, 4:59 IST
ಅಕ್ಷರ ಗಾತ್ರ

ಹುಣಸೂರು: ‘ಬರ ಪರಿಸ್ಥಿತಿ ಎದುರಿಸುತ್ತಿರುವ ರೈತರಿಗೆ ಈ ಬಾರಿ ತಂಬಾಕು ಜೀವ ಉಳಿಸಿಕೊಳ್ಳಲು ಆಧಾರವಾಗಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ದರ ನೀಡುವಂತೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ 2023–24ನೇ ಸಾಲಿನ ತಂಬಾಕು ಹರಾಜು ಮಾರುಕಟ್ಟೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಳೆದ ಸಾಲಿನಲ್ಲಿ ಅಧಿಕ ಮಳೆಯಿಂದಾಗಿ ತಂಬಾಕು ನಷ್ಟ ಎದುರಿಸಿದ್ದ ರೈತರು, ಈ ಸಾಲಿನಲ್ಲಿ ಬರದಿಂದ ಬೆಳೆ ಕಳೆದುಕೊಂಡಿದ್ದಾನೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ತೀವ್ರವಾಗಿ ಕೊರತೆ ಎದುರಾಗಿ ಭತ್ತ, ರಾಗಿ, ಅವರೆಕಾಯಿ ಬೆಳೆ ಕೈ ಕೊಟ್ಟಿದೆ. ಈಗ ಬದುಕು ನಡೆಸಲು ತಂಬಾಕು ಒಂದೇ ಆಶ್ರಯವಾಗಿದೆ’ ಎಂದರು.

‘ಕಳೆದ ಸಾಲಿನಲ್ಲಿ ತಂಬಾಕಿಗೆ ಸರಾಸರಿ ಪ್ರತಿ ಕೆಜಿಗೆ ₹228 ಸಿಕ್ಕಿದ್ದು, ಈ ಸಾಲಿನಲ್ಲಿ ಆರಂಭದಲ್ಲೇ ₹ 230 ನೀಡಲಾಗಿದೆ. ಈ ದರಕ್ಕಿಂತ ಕೆಳಕ್ಕೆ ಕುಸಿಯದಂತೆ ಕಂಪನಿಗಳು ಎಚ್ಚರಿಕೆಯಿಂದ ವ್ಯವಹರಿಸಬೇಕು’ ಎಂದು ಮನವಿ ಮಾಡಿದರು.

‘ಈ ಬಾರಿ ಆರಂಭದಿಂದಲೇ 21 ಕಂಪನಿಗಳು ಮಾರುಕಟ್ಟೆಯಲ್ಲಿ ಭಾಗವಹಿಸಿದ್ದು, 5 ರಿಂದ6 ಕಂಪನಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ವಾಣಿಜ್ಯ ವಹಿವಾಟು ವಿಸ್ತರಿಸಿಕೊಂಡಿದ್ದು, ದರ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು’ ಎಂದರು.

ಶೂನ್ಯ ದಂಡ: ‘ಅನಧಿಕೃತ ತಂಬಾಕು ಬೆಳೆಗಾರರಿಗೆ ಈ ಹಿಂದೆ ಮಂಡಳಿ ಶೇ 15ರಷ್ಟು ದಂಡ ವಿಧಿಸಿತ್ತು. ಈ ಸಂಬಂಧ ಕೇಂದ್ರ ವಾಣಿಜ್ಯ ಸಚಿವಾಲಯದ ಗಮನ ಸೆಳೆದು ಶೂನ್ಯ ದಂಡದಲ್ಲಿ ವಹಿವಾಟು ನಡೆಸಲು ಸಮ್ಮತಿಸಿದೆ. ಪರವಾನಿಗೆ ಹೊಂದಿರುವ ರೈತ ನಿಗದಿಗಿಂತ ಹೆಚ್ಚು ಬೆಳೆದಲ್ಲಿ ಶೇ 2ರಷ್ಟು ದಂಡ ಪಾವತಿಸಿ ಮಾರಾಟ ನಡೆಸುವ ವ್ಯವಸ್ಥೆ ಇತ್ತು, ಈ ಸಾಲಿನಿಂದ ರದ್ದುಗೊಳಿಸಲಾಗಿದೆ’ ಎಂದರು.

ಕೋಟಾ: ‘ಪರವಾನಿಗೆ ಹೊಂದಿರುವ 49 ಸಾವಿರ ಬೆಳೆಗಾರರಿಗೆ ನಿಗದಿಗೊಳಿಸಿರುವ ಉತ್ಪಾದನಾ (1750 ಕೆ.ಜಿ.) ಕೋಟಾ ಉತ್ಪಾದಿಸಲಾಗುತ್ತಿಲ್ಲ. ಇದರಿಂದಾಗಿ ರಾಜ್ಯಕ್ಕೆ 18 ಲಕ್ಷ ರಿಂದ 19 ಲಕ್ಷ ಕೆ.ಜಿ. ನಷ್ಟವಾಗುತ್ತಿದೆ. ಈ ವ್ಯತ್ಯಾಸವನ್ನು ಅನಧಿಕೃತ ಬೆಳೆಗಾರರಿಗೆ ಇಂತಿಷ್ಟು ಕೋಟಾ ನಿಗದಿಗೊಳಿಸುವಂತೆ ಕೇಂದ್ರ ವಾಣಿಜ್ಯ ಸಚಿವಾಲಯ ಮತ್ತು ತಂಬಾಕು ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ತಿಳಿಸಿದರು.

ರಾಜ್ಯದ ತಂಬಾಕು ಮಂಡಳಿ ಹರಾಜು ನಿರ್ದೇಶಕಿ ಅಶ್ವಿನಿ ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ ಸಂಸದರು, ‘ತಂಬಾಕು ಬೆಳೆಗಾರರಿಗೆ ಪೂರಕವಾದ ಆಡಳಿತ ನಡೆಸುವ ಮನಸ್ಥಿತಿ ಇಲ್ಲ. ಅವರನ್ನು ರಾಜ್ಯದ ಸೇವೆಯಿಂದ ಹಿಂಪಡೆಯಬೇಕು ಎಂದು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

ಹರಾಜು ಮಾರುಕಟ್ಟೆ ಆರಂಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣ, ನಾಗರಾಜ್ ಮಲ್ಲಾಡಿ, ನಾಗರಾಜಪ್ಪ, ರೈತ ಮುಖಂಡರಾದ ಚಂದ್ರೇಗೌಡ, ರಾಮೇಗೌಡ, ಗೋವಿಂದಯ್ಯ, ಐಟಿಸಿ ಕಂಪನಿ ಅಧಿಕಾರಿ ಶ್ರೀನಿವಾಸ್ ರೆಡ್ಡಿ, ತಂಬಾಕು ಹರಾಜು ಮಾರುಕಟ್ಟೆ ಅಧಿಕಾರಿ ಧನರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT