ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹವಾಮಾನ ವೈಪರೀತ್ಯದಿಂದ ಅತಿವೃಷ್ಟಿ-ಅನಾವೃಷ್ಟಿ: ಸಂಸದ ಯದುವೀರ್

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ
Published : 29 ಆಗಸ್ಟ್ 2024, 14:39 IST
Last Updated : 29 ಆಗಸ್ಟ್ 2024, 14:39 IST
ಫಾಲೋ ಮಾಡಿ
Comments

ಹನಗೋಡು: ಪ್ರಸ್ತುತ ಜಾಗತಿಕ ತಾಪಮಾನ ಹೆಚ್ಚಿದ ಪರಿಣಾಮ, ಹವಾಮಾನ ವೈಪರೀತ್ಯದಿಂದಾಗಿ ಅತಿವೃಷ್ಟಿ, ಅನಾವೃಷ್ಟಿ ಹೆಚ್ಚಿದೆ. ಅರಣ್ಯ, ಪರಿಸರ, ವನ್ಯಜೀವಿ ಸಂರಕ್ಷಣೆಯಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅರಣ್ಯ– ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಹನಗೋಡಿನಲ್ಲಿ ಬೆಂಗಳೂರಿನ ಸೊಸೈಟಿ ಫಾರ್ ಪ್ರೊಟಕ್ಷನ್ ಆಫ್ ಪ್ಲಾಂಟ್ ಅಂಡ್ ಅನಿಮಲ್ಸ್ (ಎಸ್‌ಪಿಎಎ) ಸ್ವಯಂಸೇವಾ ಸಂಸ್ಥೆಯು, ಅರಣ್ಯ ಇಲಾಖೆ, ವನ್ಯಜೀವಿಮಂಡಳಿ, ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪರಿಸರ ಮತ್ತು ಅರಣ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯೆ ಹಾಗೂ ವನ್ಯಜೀವಿಗಳ ಪ್ರಮಾಣ ಹೆಚ್ಚಳವಾಗಿರುವುದರಿಂದಾಗಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿದ್ದು, ಇದನ್ನು ತಡೆಯುವುದು ದೊಡ್ಡ ಸವಾಲಾಗಿದೆ. ನಮ್ಮ ಪಶ್ಚಿಮಘಟ್ಟ ಪ್ರದೇಶವು ಉತ್ತಮ ಹಸರೀಕರಣದಿಂದ ಕೂಡಿದ್ದು, ನಗರೀಕರಣ, ಕೈಗಾರೀಕರಣ ಹೆಚ್ಚಾಗಿರುವ ಪರಿಣಾಮ ಶೇ 80ರಷ್ಟು ಪರಿಸರ ಹಾಳಾಗಿದೆ. ನಾಗರಹೊಳೆ, ಬಂಡೀಪುರ ಉದ್ಯಾನದಲ್ಲಿ ಸಾಕಷ್ಟು ಜೀವವೈವಿಧ್ಯತೆ ಅಡಗಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಧರ್ಮದ ಮೂಲಕ ಪ್ರಕೃತಿ ಸಂರಕ್ಷಿಸಿಕೊಂಡು ಬಂದಿದ್ದೇವೆ ಎಂದರು.

ಶ್ರೇಷ್ಠ ಭಾರತ ನಿರ್ಮಾಣದಲ್ಲಿ ಪ್ರಕೃತಿ ಸಂರಕ್ಷಣೆಯೂ ಒಂದು ಭಾಗವಾಗಿದ್ದು, ಸಂರಕ್ಷಣೆ ನಮ್ಮೆಲ್ಲರ ಆದ್ಯತೆಯಾಗಬೇಕು. ವಿದ್ಯಾರ್ಥಿಗಳು, ಯುವಜನರಲ್ಲಿ ಅರಣ್ಯ, ಪರಿಸರ, ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯವಿದೆ. ಈ ನಿಟ್ಟಿನಲ್ಲಿ ಎಸ್‌ಪಿಪಿಎ ಸಂಸ್ಥೆಯು ಅರಣ್ಯ, ಪರಿಸರ ವನ್ಯಜೀವಿ ಸಂರಕ್ಷಣೆಗಾಗಿ ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅಭಿನಂದನೀಯ, ಈ ಸಂಸ್ಥೆಯ ಎಲ್ಲಾ ಪರಿಸರ ಕಾರ್ಯಗಳಿಗೆ ಬೆಂಬಲಿಸುವುದಾಗಿ ತಿಳಿಸಿದರು.

ರಾಜ್ಯ ವನ್ಯಜೀವಿಮಂಡಳಿ ಸದಸ್ಯ ಹಾಗೂ ಎಸ್‌ಪಿಪಿಎ ಸಂಸ್ಥೆಯ ಸಂಸ್ಥಾಪಕ ಧೃವ ಪಾಟೀಲ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಪರಿಸರ, ಅರಣ್ಯ ಸಂರಕ್ಷಣೆ ಅತೀ ಮುಖ್ಯವಾದುದು. ಜೀವವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಎಸ್‌ಪಿಪಿಎ ಸಂಸ್ಥೆಯು ರಾಜ್ಯದ ವಿವಿಧೆಡೆ ಪರಿಸರ ಉಳಿವಿನ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಅರಣ್ಯದಲ್ಲಿ ಹುಲಿ ಸಂರಕ್ಷಿತವಾಗಿದ್ದರೆ, ಅರಣ್ಯ ಸಮೃದ್ಧವಾಗಿರುತ್ತದೆ. ಜನರು ಪ್ಲಾಸ್ಟಿಕ್ ಬಳಕೆಯಿಂದ ದೂರವಿರಬೇಕು. ವಿದ್ಯಾರ್ಥಿಗಳು ಪರಿಸರ ಉಳಿವಿಗೆ ಆದ್ಯತೆ ನೀಡಬೇಕು ಎಂದರು.

ಕಿರಿಯ ಸಿನಿಮಾ ನಿರ್ದೇಶಕ ಎಸ್.ಎಸ್.ಕಿಶನ್ ಮಾತನಾಡಿ, ಭೂಮಿಗೆ ಸುರಕ್ಷತೆ ನೀಡುತ್ತಿರುವ ಓಜೋನ್ ಪದರ ಸಂರಕ್ಷಿಸುವ ಅವಶ್ಯವಿದೆ ಎಂದರು.

ಸಂಸ್ಥೆಯ ಸಂಚಾಲಕ ಡಾ.ಮುರುಗೇಶ್ ಪಟ್ಟಣಶೆಟ್ಟಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು. ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನದಿಂದ ಆಗುತ್ತಿರುವ ಅನಾಹುತಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಬಿಇಒ ಮಹದೇವ್, ಬಿಆರ್‌ಸಿ ಹೇಮಾವತಿ, ಸಂಸ್ಥೆಯ ಉಪಾಧ್ಯಕ್ಷ ಮಹಮ್ಮದ್‌ಷಿಹಾಬ್, ಸುನಿಲ್‌ಕುಮಾರ್, ಆರ್.ಎಫ್.ಒ.ಗಳಾದ ಸುಬ್ರಹ್ಮಣ್ಯ, ಅಭಿಷೇಕ್, ಪ್ರಾಚಾರ್ಯ ದೊರೈರಾಜ್, ಉಪಪ್ರಾಚಾರ್ಯ ಸಂತೋಷ್‌ಕುಮಾರ್, ಮುಖಂಡರಾದ ಮಂಜುನಾಥ್, ಕಾಂತರಾಜು, ಡಾ. ಕಾರ್ತಿಕ್‌ ವೆಂಕಟಪ್ಪ, ಶಿವಣ್ಣ, ಸಂತೋಷ್ ಸೇರಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಗವಹಿಸಿದ್ದರು.

ಹನಗೋಡಿನಲ್ಲಿ ನಡೆದ ಅರಣ್ಯ-ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಮೂಹ
ಹನಗೋಡಿನಲ್ಲಿ ನಡೆದ ಅರಣ್ಯ-ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಮೂಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT