ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

ಲೋಹಿಯಾ ವಿಚಾರ ವೇದಿಕೆಯಿಂದ ವಿತರಣೆ
Published 10 ಫೆಬ್ರುವರಿ 2024, 19:11 IST
Last Updated 10 ಫೆಬ್ರುವರಿ 2024, 19:11 IST
ಅಕ್ಷರ ಗಾತ್ರ

ಮೈಸೂರು: ಶ್ರವಣದೋಷದ ನಡುವೆಯೂ ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರುತ್ತಿರುವ 20 ವಿದ್ಯಾರ್ಥಿಗಳಿಗೆ ಮಂಡ್ಯದ ಲೋಹಿಯಾ ವಿಚಾರ ವೇದಿಕೆಯ ಬಿ.ಎಸ್. ಶಿವಣ್ಣ ಅವರು ಲ್ಯಾಪ್‌ಟಾಪ್‌ಗಳನ್ನು ನೀಡಿ ಉತ್ತೇಜಿಸಿದರು. ಕೆಲವು ವಿದ್ಯಾರ್ಥಿಗಳು ಎಷ್ಟೋ ದಿನದ ಕನಸೆಂಬಂತೆ ಲ್ಯಾಪ್‌ಟಾಪ್‌ನೊಂದಿಗೆ ಸಂಭ್ರಮಿಸಿದರು.

ಇಲ್ಲಿನ ಬೋಗಾದಿಯ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್ (ಪಿಎಡಿಸಿ) ಸಂಸ್ಥೆಯಲ್ಲಿ ವೇದಿಕೆಯಿಂದ ಶನಿವಾರ ಕಾರ್ಯಕ್ರಮ ನಡೆಯಿತು. ಈ ಸಂಸ್ಥೆಯಲ್ಲಿ ತರಬೇತಿ ಪಡೆದು, ವಿವಿಧ ಕಾಲೇಜುಗಳಲ್ಲಿ ತಾಂತ್ರಿಕ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನೆರವು ಪಡೆದರು.

‘ಕಾಕ್ಲಿಯರ್ ಇಂಪ್ಲಾಂಟ್ ಮಾಡಿರುವ ನನ್ನ ಮಗ ಪುನೀತ್‌ಗೆ ಶಕ್ತಿ ಮೀರಿ ಖರ್ಚು ಮಾಡುತ್ತಿದ್ದೇವೆ. ಅವನನ್ನು ಎಲ್ಲರಂತೆ ಮಾಡುವ ಪ್ರಯತ್ನದಲ್ಲಿಯೇ ನಮ್ಮ ಆರ್ಥಿಕ ಶಕ್ತಿ ವ್ಯಯವಾಗುತ್ತಿದೆ. ಆತನ ಓದಿಗಾಗಿ ಲ್ಯಾಪ್‌ಟಾಪ್‌ ಖರೀದಿಸುವ ಸಾಮರ್ಥ್ಯವಿರಲಿಲ್ಲ. ಶಿವಣ್ಣ ಅವರು ನೆರವಾಗಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೆನೆ’ ಎಂದು ಬೆಂಗಳೂರಿನ ಪೋಷಕಿ ಮಮತಾ ಕಣ್ಣೀರಾದರು.

ಲ್ಯಾಪ್‌ಟಾಪ್‌ ವಿತರಿಸಿ ಮಾತನಾಡಿದ ಶಿವಣ್ಣ, ‘ದೇಶದಲ್ಲಿ ಡಿಜಿಟಲ್‌ ಇಂಡಿಯಾ ಬಗ್ಗೆ ಮಾತನಾಡಲಾಗುತ್ತದೆ. ಆದರೆ, ಬಡ ಮತ್ತು ಅಶಕ್ತ ಮಕ್ಕಳಿಗೆ ಯೋಜನೆಗೆ ಪೂರಕವಾದ ಸಾಧನಗಳನ್ನು ನೀಡದಿದ್ದರೆ ಡಿಜಿಟಲ್‌ ಕಲಿಕೆ ಸಾಧ್ಯವೇ? ಆದ್ದರಿಂದ ನಮ್ಮ ಸಂಸ್ಥೆಯಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅಗತ್ಯವುಳ್ಳವರಿಗೆ ಲ್ಯಾಪ್‌ಟಾಪ್‌ ನೀಡಲಾಗಿದೆ. ಒಟ್ಟು ಒಂದು ಸಾವಿರ ಮಂದಿಗೆ ಕೊಡಿಸುವ ಗುರಿ ಇದೆ’ ಎಂದು ತಿಳಿಸಿದರು.

‘ಈ ಕೆಲಸವನ್ನು ಸರ್ಕಾರಗಳು ಮಾಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು. ಉಚಿತ ಶಿಕ್ಷಣ ಹಾಗೂ ಪ್ರಸ್ತುತ ವ್ಯವಸ್ಥೆಗೆ ಅಗತ್ಯ ತಾಂತ್ರಿಕ ಗ್ಯಾಜೆಟ್‌ಗಳನ್ನು ನೀಡಬೇಕು. ತಾಂತ್ರಿಕ ಸೌಲಭ್ಯ ನೀಡಿ, ವಿಶೇಷ ಉದ್ಯೋಗ ಮೇಳ ನಡೆಸಬೇಕು. ಅದನ್ನು ಬಿಟ್ಟು, ಶ್ರೀರಾಮ ಮಂದಿರ, ನಾಯಕರ ಪ್ರತಿಮೆಗಳ ನಿರ್ಮಾಣ, ಚುನಾವಣೆಗಾಗಿ ಭಾರತರತ್ನ ಕೊಡುವುದರಿಂದ ಇಂತಹ ವಿದ್ಯಾರ್ಥಿಗಳು ಎದುರಿಸುತ್ತಿರುವ ಅಸಮಾನತೆ ಹೋಗುವುದಿಲ್ಲ’ ಎಂದರು.

‘ಪಿಎಡಿಸಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಶಿವಣ್ಣ ತಿಳಿಸಿದರು.

ಅನುದಾನ ನೀಡಿ: ‘ಶ್ರವಣದೋಷವುಳ್ಳ ಮಕ್ಕಳ ತಾಯಂದಿರನ್ನು ತರಬೇತಿಗೆ ಸರ್ಕಾರ ಆರಂಭಿಸಿರುವ ಯೋಜನೆಯ ವ್ಯಾಪ್ತಿಗೆ ನಮ್ಮ ಸಂಸ್ಥೆಯನ್ನು ಸೇರಿಸಿ ಅನುದಾನ ನೀಡಬೇಕು. ಈ ತಾಯಂದಿರಿಗೆ ಕನಿಷ್ಠ 6 ವರ್ಷಗಳವರೆಗೆ ಪ್ರೋತ್ಸಾಹಧನ ನೀಡಬೇಕು’ ಎಂದು ಪಿಎಡಿಸಿ ಕಾರ್ಯಕಾರಿ ಸಮಿತಿ ಸದಸ್ಯೆ ರತ್ನಾ ಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದರು.

ಸಂಸ್ಥೆಯ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ದಿನಕರ್ ಶೆಟ್ಟಿ, ಸದಸ್ಯರಾದ ಎಂ.ಮಲ್ಲಿಕಾರ್ಜುನ, ಲೋಹಿಯಾ ವೇದಿಕೆ ಪ್ರಮುಖರಾದ ರಘು, ರಮೇಶ್‌ ಉಪಸ್ಥಿತರಿದ್ದರು.

ಎಂ.ಚೈತ್ರಾ
ಎಂ.ಚೈತ್ರಾ

ಕಂಪ್ಯೂಟರ್‌ ಸೈನ್ಸ್‌ ಓದುತ್ತಿರುವುದರಿಂದ ಲ್ಯಾಪ್‌ಟಾಪ್ ಅಗತ್ಯವಿತ್ತು. ಈಗ ದೊರೆತಿದ್ದರಿಂದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ

ಎಂ.ಚೈತ್ರಾ ಡಿಪ್ಲೊಮಾ ಜೆಎಸ್ಎಸ್‌ ಪಾಲಿಟೆಕ್ನಿಕ್‌ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT