ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಯ ಭೀಮರಾಜ್ಯ ಸ್ಥಾಪಿಸಿ: ಪ್ರೊ.ಕೆ.ಎಸ್‌.ಭಗವಾನ್

Last Updated 6 ಡಿಸೆಂಬರ್ 2022, 12:23 IST
ಅಕ್ಷರ ಗಾತ್ರ

ಮೈಸೂರು: ‘ಸಮಾನತೆಯ ಭೀಮರಾಜ್ಯ ಸ್ಥಾಪನೆಯೇ ಶೋಷಿತ ಶೂದ್ರ ಸಮುದಾಯಗಳ ಗುರಿಯಾಗಬೇಕು’ ಎಂದು ಲೇಖಕ ಪ್ರೊ.ಕೆ.ಎಸ್‌.ಭಗವಾನ್‌ ಹೇಳಿದರು.

ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ ಸಮಾಜದಲ್ಲಿ ಸ್ಥಾಪನೆಯಾಗಲು ಶೂದ್ರ ಸಮುದಾಯ ಸಂಘಟಿತವಾಗಬೇಕು. ರಾಮರಾಜ್ಯದಲ್ಲಿ ತಪ್ಪಸ್ಸು ಮಾಡಿದ ಶಂಭೂಕನಿಗೆ ಆದ ಅನ್ಯಾಯವೇ ಈಗಲೂ ನಡೆಯುತ್ತಿದೆ. ಎಲ್ಲ ದೇವರನ್ನೂ ತ್ಯಜಿಸಬೇಕು. ಅಂಬೇಡ್ಕರ್‌ ರಚಿಸಿದ ಸಂವಿಧಾನವೇ ದೇವರಾಗಬೇಕು’ ಎಂದು ಹೇಳಿದರು.

‘ದಲಿತರಿಗೆ ಮಾತ್ರ ಅಂಬೇಡ್ಕರ್ ಹೋರಾಡಿಲ್ಲ. ಎಲ್ಲ ವರ್ಗದ, ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದರು. ವೈದಿಕ ಧರ್ಮವು ಶೂದ್ರ ಸಮುದಾಯಗಳಿಗೆ ವಿಧಿಸಿದ್ದ ಸಂಕೋಲೆಯನ್ನು ಸಂವಿಧಾನದಿಂದ ಕಳಚಿದರು. ಆದರೆ, ಶೂದ್ರರಿನ್ನೂ ಗುಲಾಮಗಿರಿಯಿಂದ ಹೊರಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಾಬಾ ಸಾಹೇಬರ ಹೆಸರನ್ನು ಹೇಳಿಕೊಂಡು ತಿರುಗಾಡಿದರೆ ಕೊಳೆತ ಸಮಾಜವು ಬದಲಾಗುವುದಿಲ್ಲ. ಅವರು ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ದಾರಿ ತೋರಿದ್ದು, ಅನುಸರಿಸುವ ದೃಢ ನಿರ್ಧಾರ ಮಾಡಬೇಕು.ಬೌದ್ಧ ಧರ್ಮ ಸ್ವೀಕಾರ ಸಂದರ್ಭದಲ್ಲಿಅಂಬೇಡ್ಕರ್ ಹೇಳಿದ್ದ 22 ಸಂದೇಶಗ ಪಾಲಿಸಬೇಕು. ವಿವೇಕಾನಂದರೂ ಹಿಂದೂ ಧರ್ಮದ ಟೀಕಾಕಾರರಾಗಿದ್ದರು’ ಎಂದು ಸ್ಮರಿಸಿದರು.

‘ಸಂವಿಧಾನದ ಆಶಯಗಳಿಗೆ ಗುಂಡು’:ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಪುಟ್ಟನಂಜಯ್ಯ ದೇವನೂರು ಮಾತನಾಡಿ, ‘ಒಂದು ದೇಶ– ಒಂದು ಚುನಾವಣೆ ಎಂಬ ಘೋಷಣೆಯು ಏಕ ಧರ್ಮ, ಏಕ ಭಾಷೆ ನೀತಿಯ ಮುಂದುವರಿದ ಭಾಗವಷ್ಟೇ. ಸಂವಿಧಾನಕ್ಕೆ ಕೈ ಮುಗಿಯುತ್ತಲೇ ಅದರ ಆಶಯಗಳಿಗೆ ಗುಂಡು ಹೊಡೆಯುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯು ಸರ್ವಾಧಿಕಾರವಾಗಿ ಬದಲಾಗುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಅಸ್ಥಿರಗೊಳಿಸಲಾಗುತ್ತಿದೆ. ಈ ಮೂಲಕ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ಶಾಸನ ಸಭೆಯಲ್ಲಿ ಚರ್ಚೆ ನಡೆಸದೇ ಇಡಬ್ಲ್ಯೂಎಸ್‌ಗೆ ಶೇ 10 ಮೀಸಲಾತಿ ನೀಡಿರುವುದೇ ನಿದರ್ಶನ’ ಎಂದರು.

ದಲಿತ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಚಾಲಕ ಬಸವರಾಜ್ ಕೌತಾಳ್ ಮಾತನಾಡಿ, ‘ಆಳುವ ಸರ್ಕಾರ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ನಾಶ ಮಾಡುವ ರಾಜಕೀಯ ಕುತಂತ್ರ‌ ನಡೆಯುತ್ತಿದೆ. ಅದಕ್ಕೆ ಸಂಘ ಪರಿವಾರ ಕಾರಣ’ ಎಂದು ಆರೋಪಿಸಿದರು.

‘ಸಂವಿಧಾನದ ಬದಲು ಮನುವಾದ ಸ್ಥಾಪಿಸಲು ವ್ಯವಸ್ಥಿತವಾಗಿ ನಡೆದಿರುವ ರಾಜಕೀಯ ಶಕ್ತಿಗಳನ್ನು ಸೋಲಿಸಬೇಕು. ಹೀಗಾಗಿ ಶೋಷಿತ ಸಮುದಾಯ ರಾಷ್ಟ್ರೀಯ ಶಕ್ತಿ ಆಗಬೇಕು’ ಎಂದರು.

ನಳಂದ ಬೌದ್ಧ ವಿಹಾರದ ಬೋದಿರತ್ನ ಭಂತೇಜಿ, ದಸಂಸ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಡಾ.ಆರ್.ಮೋಹನ್‌ ರಾಜ್, ಉಪಾಧ್ಯಕ್ಷರಾದ ಸ್ವಪ್ನಾ ಮೋಹನ್, ಮುಖಂಡರಾದ ಎಸ್‌.ಆರ್.ಕಲ್ಲೂರು, ಶೇಖರ್‌ ಆವಂಜೆ, ಸಿದ್ದರಾಜು ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT