ಮೈಸೂರು: ‘ಹಲವು ಆರೋಪಗಳನ್ನು ಹೊಂದಿರುವ ಸಿದ್ದರಾಮಯ್ಯ ಅವರು ಜಾತಿ, ಪಕ್ಷದ ರಕ್ಷಣೆ ಪಡೆಯದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಡಾ ಪ್ರಕರಣವನ್ನು ಸಿಬಿಐ ಇಲ್ಲವೇ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ಮಾಡಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಿದ್ದರಾಮಯ್ಯ ಅವರು ತನ್ನ 40 ವರ್ಷದ ಸಾರ್ವಜನಿಕ ಜೀವನದಲ್ಲಿ ಯಾವುದೇ ಕಳಂಕ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಮುಡಾ, ವಾಲ್ಮೀಕಿ ನಿಗಮ, ಅಲ್ಪಸಂಖ್ಯಾತರ ಇಲಾಖೆಯಲ್ಲಿನ ಹಗರಣ, ಇಲಾಖೆಗಳಲ್ಲಿ ಪ್ರತಿ ಹುದ್ದೆಗೆ ರೇಟ್ ಕಾರ್ಡ್ ನಿಗದಿಗೊಳಿಸಿರುವುದು, ರೀಡೂ ಹೆಸರಿನಲ್ಲಿ 884 ಎಕರೆ ಡಿನೋಟಿಫಿಕೇಷನ್ ಮಾಡಿರುವುದು ಕಳಂಕವಲ್ಲವೇ’ ಎಂದು ಪ್ರಶ್ನಿಸಿದರು.
‘ಕೆಸರೆ ಗ್ರಾಮದ ಸರ್ವೆ ನಂಬರ್ 464ರ ಜಾಗ 1997ರಲ್ಲಿ ನೋಟಿಫಿಕೇಷನ್ ಆಗಿತ್ತು. 1998ರಲ್ಲಿ ಡಿನೋಟಿಫಿಕೇಷನ್ ಹೇಗೆ ಆಗಿದೆ. ಈಗಾಗಲೇ ಬಡಾವಣೆಯಾಗಿ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದ ಜಾಗವನ್ನು ಮತ್ತೆ ನೋಟಿಫಿಕೇಷನ್ ಮಾಡುವಂತಿಲ್ಲ. ಆದರೆ, ಆ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿರುವ ಉದ್ದೇಶವೇನು? ಈ ಆರೋಪ ಹೊತ್ತಿರುವ ನೀವು ಮುಡಾ ಪ್ರಕರಣದಲ್ಲಿ ಅಮಾಯಕ ಅಲ್ಲ. ನಿಮ್ಮ ಕುಟುಂಬಕ್ಕೆ ಜಮೀನು ನೀಡಿದ ನಿಂಗ ಅವರಿಗೆ ಮುಡಾದಿಂದಲೇ ₹12 ಲಕ್ಷ ಪರಿಹಾರ ಸಿಗುತ್ತಿತ್ತು. ಅದಕ್ಕಿಂತ ಕಡಿಮೆ ಬೆಲೆಗೆ ನಿಮ್ಮ ಬಾಮೈದನಿಗೆ ಏಕೆ ಮಾರಿದ್ದಾರೆ? ದಲಿತ ಸಮುದಾಯಕ್ಕೆ ವಂಚನೆ ಮಾಡಿರುವುದು ತಪ್ಪಲ್ಲವೇ’ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಎಂ.ಜಿ.ಮಹೇಶ್, ದಯಾನಂದ ಪಟೇಲ್, ಕೇಬಲ್ ಮಹೇಶ್ ಇದ್ದರು.
‘ಬೆದರಿಕೆ ರಾಜಕಾರಣ ಆರಂಭಿಸಿದ ಕಾಂಗ್ರೆಸ್’
‘ನಮ್ಮ ಪಾದಯಾತ್ರೆಯು ಜನಾಂದೋಲನವಾಗಿ ಮಾರ್ಪಟ್ಟಿದೆ. ಇದನ್ನು ಕಂಡು ಕಾಂಗ್ರೆಸ್ ಸರ್ಕಾರ ಭಯಗೊಂಡು ಬೆದರಿಕೆ ರಾಜಕಾರಣ ಆರಂಭಿಸಿದೆ. ಸಿಎಂ ವಿರುದ್ಧ ದೂರು ನೀಡಿದ ಆರ್‌ಟಿಐ ಕಾರ್ಯಕರ್ತ ಅಬ್ರಾಹಂ ವಿರುದ್ಧದ ಹಳೇ ಪ್ರಕರಣಗಳಿಗೆ ಜೀವ ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಕ್ಲೀನಿ ಇಲ್ಲ. ಯು ಆರ್ ಎ ಮಿಸ್ಟರ್ ಕರಪ್ಟ್’ ಎಂದು ಸಿ.ಟಿ.ರವಿ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.