ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸುವಂತೆ ರೈತ ಸಂಘ ಒತ್ತಾಯ

Published 19 ಅಕ್ಟೋಬರ್ 2023, 14:45 IST
Last Updated 19 ಅಕ್ಟೋಬರ್ 2023, 14:45 IST
ಅಕ್ಷರ ಗಾತ್ರ

ಮೈಸೂರು: ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದವರು ಇಲ್ಲಿನ ವಿಜಯನಗರದ ಸೆಸ್ಕ್‌ ಕಚೇರಿ ಮುಂಭಾಗ ಗುರುವಾರ ಪ್ರತಿಭಟಿಸಿದರು.

‘ರಾಜ್ಯದ 45 ಲಕ್ಷಕ್ಕಿಂತಲೂ ಹೆಚ್ಚು ರೈತ ಕುಟುಂಬದವರು ಪಂಪ್‌ಸೆಟ್‌ ನೀರಾವರಿ ಆಶ್ರಯಿಸಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ಇಳುವರಿ ಸಮಯದಲ್ಲೇ ವಿದ್ಯುತ್‌ ವ್ಯತ್ಯಯವಾಗುತ್ತಿದ್ದು, ಬೆಳೆ ಕೈಗೆ ಸಿಗುವುದಿಲ್ಲ ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಬರಗಾಲದ ಬಗ್ಗೆ ಜೂನ್‌ ತಿಂಗಳಿನಲ್ಲೇ ಅರಿವಿಗೆ ಬಂದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇಂಧನ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಈ ಪರಿಣಾಮ ಜನರು ತೊಂದರೆ ಅನುಭವಿಸಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೈಗಾರಿಕೆಗಳಿಗೆ ಎಂದಿನಂತೆ ವಿದ್ಯುತ್‌ ವಿತರಣೆಯಾಗುತ್ತಿದ್ದು, ಕೃಷಿಯನ್ನು ಕಡೆಗಣಿಸಲಾಗುತ್ತಿದೆ. ಗುಣಮಟ್ಟದ ವಿದ್ಯುತ್‌ ಸರಬರಾಜು ಮಾಡಿ, ಪಂಪ್‌ಸೆಟ್‌ ನಂಬಿ ಬೆಳೆ ಬೆಳೆದಿರುವ ರೈತರನ್ನು ರಕ್ಷಿಸಬೇಕು. ಸಾಧ್ಯವಾಗದಿದ್ದರೆ ರೈತರು ಹೊಂದುವ ಫಸಲು ನಷ್ಟಕ್ಕೆ ಸರ್ಕಾರವೇ ನೇರ ಹೊಣೆ’ ಎಂದು ಎಚ್ಚರಿಸಿದರು.

‘ವಿದ್ಯುತ್‌ ವ್ಯರ್ಥವಾಗುವುದನ್ನು ಇಂಧನ ಇಲಾಖೆ ತಡೆಯಬೇಕು. ಸೌರ ವಿದ್ಯುತ್‌ ಉತ್ಪಾದನೆಗೆ ಒತ್ತು ನೀಡಿ, ಸಕ್ಕರೆ ಕಾರ್ಖಾನೆಗಳು ವಿದ್ಯುತ್‌ ಉತ್ಪಾದಿಸುವಂತೆ ಸೂಚಿಸಬೇಕು’ ಎಂದು ಒತ್ತಾಯಿಸಿದರು.

ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಭರವಸೆ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ರೈತ ಸಂಘದ ಮುಖಂಡರಿಂದ ಮನವಿ ಸ್ವೀಕರಿಸಿದರು.

ಬಳಿಕ ಮಾತನಾಡಿ, ‘ನಮ್ಮ ಸರ್ಕಾರ ರೈತರ ಪರವಾಗಿದೆ. ಸಮಸ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ರೈತರ ಅನುಕೂಲಕ್ಕೆ ತಕ್ಕಂತೆ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೆಸ್ಕ್‌ ಅಧಿಕಾರಿಗಳೊಂದಿಗೆ ವಿದ್ಯುತ್ ಸಮಸ್ಯೆ ಕುರಿತು ಚರ್ಚಿಸಿ ರೈತರು ಬೆಳೆ ಬೆಳೆಯಲು ಪಂಪ್‌ಸೆಟ್‌ಗಳಿಗೆ ಅಗತ್ಯಕ್ಕೆ ಅನುಸಾರ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವಂತೆ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು.

‘‌ನೂರು ವರ್ಷಗಳಿಂದ ಕಾಣದಂತಹ ಬರ ಈ ಬಾರಿ ಎದುರಾಗಿದೆ. ಅನೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ನಮ್ಮ ರೈತರು ಸಂಕಷ್ಟಕ್ಕೆ ಸಿಲುಕಿರುವುದು ಸರ್ಕಾರದ ಗಮನದಲ್ಲಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ರೈತರ ಜೊತೆ ಇರುತ್ತದೆ. ಎಂದಿಗೂ ಕೈಬಿಡುವುದಿಲ್ಲ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಸಭೆ ಕರೆದು, ಆರೋಗ್ಯಕರ ಚರ್ಚೆಗೆ ರೈತ ಮುಖಂಡರಿಗೆ ಅವಕಾಶ ಕಲ್ಪಿಸಲಾಗುವುದು. ರೈತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೆಲ್ಲರೂ ಸೇರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ’ ಎಂದರು.

ರೈತ ಸಂಘ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಹೊಸಕೋಟೆ ಬಸವರಾಜ್, ಮುಖಂಡರಾದ ಹೊಸೂರು ಕುಮಾರ್, ಪ್ರಸನ್ನ ಎನ್.ಗೌಡ, ನೇತ್ರಾವತಿ ಮತ್ತು ಮರಂಕಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT