ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿವಿಧ ರಾಜ್ಯಗಳಲ್ಲಿ ರೈತರ ಮಹಾಅಧಿವೇಶನ ಡಿ.20ರಿಂದ: ಕುರುಬೂರು ಶಾಂತಕುಮಾರ್

Published 18 ಡಿಸೆಂಬರ್ 2023, 6:54 IST
Last Updated 18 ಡಿಸೆಂಬರ್ 2023, 6:54 IST
ಅಕ್ಷರ ಗಾತ್ರ

ಮೈಸೂರು: ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.20ರಿಂದ ದೇಶದ ವಿವಿಧ ರಾಜ್ಯಗಳಲ್ಲಿ ‘ರೈತರ ಮಹಾಅಧಿವೇಶನ’ ಹಮ್ಮಿಕೊಳ್ಳಲಾಗಿದೆ.

‘ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ನೇತೃತ್ವದಲ್ಲಿ ಡಿ.20ರಂದು ಕೇರಳದ ಪಾಲಕ್ಕಾಡ್‌ನಲ್ಲಿ, 21ರಂದು ತಮಿಳುನಾಡಿನ ಚೆನ್ನೈ, 23ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಹಾಗೂ 26ರಂದು ಹೈದರಾಬಾದ್‌ನಲ್ಲಿ ಶಕ್ತಿ ಪ್ರದರ್ಶಿಸುವ ಮೂಲಕ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುವುದು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಡ್ಡಿ ದುಪ್ಪಟ್ಟಾಗುತ್ತದೆ ಅಥವಾ ಸುಸ್ತಿಯಾಗುತ್ತದೆ ಎಂದು ರೈತರನ್ನು ಹೆದರಿಸುತ್ತಿರುವ ಬ್ಯಾಂಕ್‌ನವರು, ಇಂಗ್ಲಿಷ್‌ನಲ್ಲಿರುವ ಪತ್ರಕ್ಕೆ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ ಅವರು, ‘ಇದರಿಂದ ಸಾಲ ಮನ್ನಾದಿಂದ ವಂಚಿತವಾಗಬೇಕಾಗುತ್ತದೆ. ರೈತರು ಎಚ್ಚರ ವಹಿಸಬೇಕು’ ಎಂದರು.

‘ಮೂರು ವರ್ಷಗಳಿಂದ ಅತಿವೃಷ್ಟಿ, ಪ್ರವಾಹ ಹಾಗೂ ಬರದಿಂದ ಹಾನಿ ಅನುಭವಿಸಿರುವ ರಾಜ್ಯದ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬೆಳೆ ನಾಶದಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವಾಗಲೇಬೇಕು’ ಎಂದು ಒತ್ತಾಯಿಸಿದರು.

ಕೋರಿಕೆ ಅರ್ಜಿ ಸಲ್ಲಿಸಲು ಬನ್ನಿ...

ಡಿ..23ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಾಲ ಮನ್ನಾ ಕೋರಿಕೆ ಅರ್ಜಿ ಸಲ್ಲಿಸಲಾಗುವುದು. ಸಾಲ ಪಡೆದ ರೈತರೆಲ್ಲರೂ ಅಧಿವೇಶನಕ್ಕೆ ಬರಬೇಕು
– ಕುರುಬೂರು ಶಾಂತಕುಮಾರ್, ಅಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ:

‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಪ್ರಧಾನಿಯು ರೈತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

‘ರೈತರು ಬರಗಾಲದಿಂದ ತತ್ತರಿಸಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ₹ 2 ಸಾವಿರ ಭಿಕ್ಷಾರೂಪದ ಪರಿಹಾರ ಕೊಡುವುದು ಬೇಡ. ಸಂಪೂರ್ಣ ಬೆಳೆ ನಷ್ಟ ಪರಿಹಾರವಾಗಿ ಕನಿಷ್ಠ ₹25 ಸಾವಿರ ಕೊಡಬೇಕು. ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಷೇಧ, ಎಥೆನಾಲ್‌ ಉತ್ಪಾದನೆಗೆ ತಡೆ ಹಾಕಿರುವುದು ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದನ್ನು ಮರುಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.

‘60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ ₹5ಸಾವಿರ ಪಿಂಚಣಿ ನೀಡಬೇಕು. ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ನೌಕರಿಯಲ್ಲಿ ಶೇ 10ರಷ್ಟು ಮೀಸಲಾತಿ ಜಾರಿಗೊಳಿಸಬೇಕು. ಹತ್ತಾರು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಸಾಗುವಳಿ ಪತ್ರಗಳನ್ನು ಕೂಡಲೇ ವಿತರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗುವುದು’ ಎಂದರು.

ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ವೆಂಕಟೇಶ್, ಹೆಗ್ಗೂರು ರಂಗರಾಜು, ನೀಲಕಂಠಪ್ಪ ಮತ್ತು ವಾಜಮಂಗಲ ಮಾದೇವ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT