ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆ ಅಪಹರಣ: ರೇವಣ್ಣ ವಿರುದ್ಧ ಎಫ್‌ಐಆರ್‌

2ನೇ ಆರೋಪಿ ಸುರೇಶ್‌ ಬಾಬಣ್ಣ ಬಂಧನ
Published : 3 ಮೇ 2024, 23:45 IST
Last Updated : 3 ಮೇ 2024, 23:45 IST
ಫಾಲೋ ಮಾಡಿ
Comments

ಕೆ.ಆರ್‌.ನಗರ: ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಹೊಳೆನರಸೀಪುರದ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧ ಕೆ.ಆರ್‌.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಪ್ರಕರಣದ 2ನೇ ಆರೋಪಿ, ಕೆ.ಆರ್‌. ನಗರ ತಾಲ್ಲೂಕಿನ ಹೆಬ್ಬಾಳುಕೊಪ್ಪಲು ನಿವಾಸಿ ಸತೀಶ ಬಾಬಣ್ಣ ಎಂಬುವವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

‘ನನ್ನ ತಾಯಿಯನ್ನು ರೇವಣ್ಣ ಅವರ ಸೂಚನೆಯಂತೆ ಸತೀಶ್ ಬಾಬಣ್ಣ ಅಪಹರಿಸಿದ್ದಾರೆ’ ಎಂದು ಪಟ್ಟಣದ ಸಂತ್ರಸ್ತೆಯ ಪುತ್ರ ಗುರುವಾರ ರಾತ್ರಿ ದೂರು ನೀಡಿದ್ದರು.

‘ನನ್ನ ತಾಯಿ ಆರು ವರ್ಷದಿಂದ, ಹೊಳೆನರಸೀಪುರದ ಚೆನ್ನಾಂಬಿಕ ಥಿಯೇಟರ್ ಬಳಿ ಇರುವ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. 3 ವರ್ಷದ ಹಿಂದೆ ಕೆಲಸ ಬಿಟ್ಟಿದ್ದು, ಊರಿನಲ್ಲಿ ಕೂಲಿ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ಸಮಯದಲ್ಲಿ ಭವಾನಿ ಅವರು ಮತ್ತೆ ಕೆಲಸಕ್ಕೆ ಕರೆದಿದ್ದಾರೆಂದು ಹೇಳಿ ಹೆಬ್ಬಾಳಕೊಪ್ಪಲಿನ ಸತೀಶ್ ಬಾಬಣ್ಣ ನನ್ನ ತಾಯಿಯನ್ನು ಕರೆದೊಯ್ದಿದ್ದರು’ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

‘ಚುನಾವಣೆಯ ದಿನ ತಾಯಿಯನ್ನು ಮನೆಗೆ ಕರೆತಂದು ಬಿಟ್ಟಿದ್ದರು. ನಂತರ, ಏ. 29ರಂದು ರಾತ್ರಿ ಮನೆಗೆ ಬಂದ ಬಾಬಣ್ಣ, ನಿಮ್ಮ ತಾಯಿ ಪೊಲೀಸರಿಗೆ ಸಿಕ್ಕರೆ ಪ್ರಕರಣ ದಾಖಲಾಗುತ್ತದೆ. ಹೀಗಾಗಿ ಅವರನ್ನು ಕರೆತರುವಂತೆ ರೇವಣ್ಣ ತಿಳಿಸಿದ್ದಾರೆಂದು ಹೇಳಿ ಒತ್ತಾಯದಿಂದ ಬೈಕ್‌ನಲ್ಲಿ ಕರೆದೊಯ್ದರು’ ಎಂದು ಅವರು ಆರೋಪಿಸಿದ್ದಾರೆ.

‘ಏ. 1ರಂದು ನನ್ನ ಕೆಲ ಸ್ನೇಹಿತರು ಮನೆಗೆ ಬಂದು, ನಿನ್ನ ತಾಯಿಯ ವಿಡಿಯೊ ಮೊಬೈಲ್ ಫೋನ್‌ನಲ್ಲಿ ಹರಿದಾಡುತ್ತಿದೆ. ತಾಯಿ ಕೈ ಮುಗಿದರೂ ಪ್ರಜ್ವಲ್ ಅಣ್ಣ ಬಲತ್ಕಾರ ಮಾಡಿರುವ ದೃಶ್ಯ ವಿಡಿಯೊದಲ್ಲಿದೆ. ಆ ಬಗ್ಗೆ ದೊಡ್ಡ ಪ್ರಕರಣವೂ ದಾಖಲಾಗಿದೆ ಎಂದಿದ್ದರು. ಆಗ, ಬಾಬಣ್ಣ ಅವರಿಗೆ ಕರೆ ಮಾಡಿ, ನನ್ನ ತಾಯಿಯನ್ನು ಕರೆ ತನ್ನಿ ಎಂದು ಕೋರಿದ್ದೆ. ಅವರು, ಈ ಹಿಂದೆ ರೇವಣ್ಣ ಅವರ ಮಗ ಬೇರೆಯವರೊಂದಿಗೆ ಗಲಾಟೆ ಮಾಡಿದಾಗ ನಿಮ್ಮ ತಾಯಿಯೂ ದೊಣ್ಣೆ ಹಿಡಿದು ನಿಂತಿರುವ ಫೋಟೊ ಬಂದಿದೆ. ಹೀಗಾಗಿ ಅವರ ಮೇಲೂ ಎಫ್.ಐ.ಆರ್. ದಾಖಲಾಗಿದೆ. ಜಾಮೀನಿನ ಮೇಲೆ ಬಿಡಿಸಿಕೊಂಡು ಬರಬೇಕು ಎಂದು ಹೇಳಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನಮ್ಮ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಸುಳ್ಳು ಹೇಳಿ ತಾಯಿಯನ್ನು ಒತ್ತಾಯದಿಂದ ಕರೆದೊಯ್ದು, ನಮಗೆ ಗೊತ್ತಿಲ್ಲದ ಕಡೆ ಕೂಡಿಹಾಕಿದ್ದಾರೆ.‌ ನನ್ನ ತಾಯಿಯ ಜೀವಕ್ಕೆ ತೊಂದರೆ ಇದೆ. ತಾಯಿಯನ್ನು ಕರೆದೊಯ್ಯಲು ಹೇಳಿದ ರೇವಣ್ಣ ಹಾಗೂ ಕರೆದೊಯ್ದ ಸತೀಶ್ ಬಾಬಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಂತ್ರಸ್ತೆಯ ಪುತ್ರ ದೂರಿನಲ್ಲಿ ಕೋರಿದ್ದಾರೆ.

ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 364 (ಎ)(ಕೊಲೆ ಮಾಡುವ ಸಲುವಾಗಿ ಅಪಹರಣ), 365/ 34 (ವ್ಯಕ್ತಿಯನ್ನು ಅಪಹರಿಸಿ ರಹಸ್ಯವಾಗಿಟ್ಟಿರುವುದು) ಅಡಿ ಪ್ರಕರಣ ದಾಖಲಾಗಿದೆ.

ಮೇ 16ರವರೆಗೆ ಬಂಧನ: ‘ಸುರೇಶ್‌ ಬಾಬಣ್ಣ ಅವರನ್ನು ಅವರ ಹೆಬ್ಬಾಳುಕೊಪ್ಪಲಿನ ಮನೆಯಲ್ಲಿ ಶುಕ್ರವಾರ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಮೇ 16ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT