ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆ.22ಕ್ಕೆ ವಕೀಲರ ಪ್ರಥಮ ರಾಜ್ಯ ಸಮಾವೇಶ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ
Published : 14 ಸೆಪ್ಟೆಂಬರ್ 2024, 15:43 IST
Last Updated : 14 ಸೆಪ್ಟೆಂಬರ್ 2024, 15:43 IST
ಫಾಲೋ ಮಾಡಿ
Comments

ಮೈಸೂರು: ‘ಪಂಚಮಸಾಲಿ, ಗೌಡ ಲಿಂಗಾಯತ ಸಮುದಾಯಕ್ಕೆ ‘2ಎ’ ಮೀಸಲಾತಿಗೆ ಒತ್ತಾಯಿಸಿ ಸೆ.22ರಂದು ಬೆಳಗಾವಿಯಲ್ಲಿ ವಕೀಲರ ಪ್ರಥಮ ರಾಜ್ಯ ಸಮಾವೇಶ ಆಯೋಜಿಸಲಾಗಿದೆ’ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸಮಾವೇಶದ ಅಂಗವಾಗಿ ನಗರದ ಹೊಸಮಠದಲ್ಲಿ ಲಿಂಗಾಯತ ಗೌಡ ಮಹಾಸಭಾದ ವಕೀಲರ ಪೂರ್ವಭಾವಿ ಸಭೆಗೂ ಮುನ್ನ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮೂರೂವರೆ ವರ್ಷದಿಂದ ಪಂಚಮಸಾಲಿ ಮೀಸಲಾತಿಗಾಗಿ ನಿರಂತರ ಹೋರಾಟ ನಡೆದಿದ್ದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ‘2ಡಿ’ ಮೀಸಲಾತಿ ನೀಡಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತೆ ಆಗಿದೆ. 12 ಜಿಲ್ಲೆಗಳಲ್ಲಿ ಹೆದ್ದಾರಿಯಲ್ಲಿ ಲಿಂಗಪೂಜೆಯ ಮೂಲಕ ಪ್ರತಿಭಟನೆ ಮಾಡಿದ್ದರೂ ಕಾಂಗ್ರೆಸ್‌ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪಂಚಮಸಾಲಿ ಮೀಸಲಾತಿಗಾಗಿ ಎರಡನೇ ಹಂತದ ಹೋರಾಟ ಆರಂಭಿಸಿದ್ದು, ವಕೀಲರ ಸಂಘಟನೆಯನ್ನೂ ಮಾಡಲಾಗುತ್ತಿದೆ. ಅದರ ಭಾಗವಾಗಿ ವಕೀಲರ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಸದನದಲ್ಲಿ ಶಾಸಕರು ಮಾತನಾಡಲಿಲ್ಲ. ಅದಕ್ಕಾಗಿ ವಕೀಲರ ಮೂಲಕ ಒತ್ತಡ ತರಲು ರೂಪುರೇಷೆಗಳನ್ನು ರೂಪಿಸಲಾಗುತ್ತಿದೆ’ ಎಂದರು.

‘ಸಮಾವೇಶಕ್ಕೂ ಮುನ್ನ ಸೆ.17ರಂದು ಕಲಬುರಗಿಯಲ್ಲಿ ಸಮುದಾಯದ ಮುಖಂಡರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ. ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕು. ಎಲ್ಲಾ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಯಾವುದೇ ಸರ್ಕಾರ ಬರಲಿ, ಯಾರೇ ಮುಖ್ಯಮಂತ್ರಿ ಆಗಲಿ ಮೀಸಲಾತಿ ಆದೇಶ ಬರುವವರೆಗೂ ನಮ್ಮ ಹೋರಾಟ ನಿರಂತರ’ ಎಂದು ಹೇಳಿದರು.

‘ಸೆ.22ರಂದು ಬೆಳಿಗ್ಗೆ 10ಕ್ಕೆ ಸಮಾವೇಶ ನಡೆಯಲಿದ್ದು, ಅಂದು ಮಧ್ಯಾಹ್ನ 1 ಗಂಟೆಗೆ ಧರಣಿ ಮಾಡುತ್ತೇವೆ. ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಭಾಗದ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಮುದಾಯದ ಮಕ್ಕಳಿಗೆ ನ್ಯಾಯ ಕೊಡಿಸಬೇಕು’ ಎಂದು ಮನವಿ ಮಾಡಿದರು.

‘ರಾಜಕೀಯವಾಗಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದ್ದು, ರಾಜಕೀಯ ಅನ್ಯಾಯ ಸಹಿಸುತ್ತೇವೆ. ಆದರೆ, ಸಮುದಾಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮೀಸಲಾತಿ ಬೇಕು’ ಎಂದು ಆಗ್ರಹಿಸಿದರು.

‘ಸಮಾವೇಶದ ಮೂಲಕ ಬೃಹತ್ ಹೋರಾಟ ರೂಪಿಸಲಾಗುವುದು. ಕಾನೂನಾತ್ಮಕವಾಗಿ ಯಾವ ರೀತಿಯ ಹೋರಾಟ ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲು 10 ಹಿರಿಯ ವಕೀಲರ ಸಮಿತಿ‌ ರಚನೆ ಮಾಡಿ ಬಳಿಕ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮುಂದಿನ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದರು.

ಗೌಡ ಲಿಂಗಾಯತ ರಾಜ್ಯ ಘಟಕದ ಅಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಕಣೇನೂರು ಜಗದೀಶ್ ಡಿ., ನಗರ ಘಟಕದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮೀಜಿ, ವಕೀಲರಾದ ಕೆ.ಸಿ.ನಟರಾಜ, ಮಂಜುನಾಥ್, ಹೊಂಬೇಶ್, ಸುನಿಲ್, ಬಿ.ಬಿ. ಜೀವನ್ ಇದ್ದರು.

ಶಾಸಕರ ವಿರುದ್ಧ ಆಕ್ರೋಶ

‘ಪಂಚಮಸಾಲಿ ‘2ಎ’ ಮೀಸಲಾತಿ ಬಗ್ಗೆ ಮಾತನಾಡುವಂತೆ ಕಳೆದ ವಿಧಾನಸಭಾ ಅಧಿವೇಶನದ ವೇಳೆ ನಮ್ಮ ಸಮುದಾಯದ ಎಲ್ಲ ಶಾಸಕರಿಗೆ ತಿಳಿಸಿದ್ದೆ. ಆದರೆ ಯಾರೂ ಈ ಸಂಬಂಧ ಮಾತನಾಡಿಲ್ಲ. ಕೇಳಿದರೆ ಸ್ಪೀಕರ್‌ ಅವಕಾಶ ನೀಡಿಲ್ಲ ಎಂದು ಹೇಳುತ್ತಾರೆ. ಅವಕಾಶ ನೀಡದೇ ಇದ್ದಾಗ ಶಾಸಕರು ಸಭಾತ್ಯಾಗ ಮಾಡಬೇಕಿತ್ತು. ಇಲ್ಲವೇ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಬೇಕಿತ್ತು’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT