ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ಧಿ ಸ್ವಾತಂತ್ರ್ಯಕ್ಕಾಗಿ ‘ಪಂಚ ಗ್ಯಾರಂಟಿ’: ಸಚಿವ ಡಾ.ಎಚ್‌.ಸಿ. ಮಹದೇವಪ್ಪ

Published : 15 ಆಗಸ್ಟ್ 2024, 6:14 IST
Last Updated : 15 ಆಗಸ್ಟ್ 2024, 6:14 IST
ಫಾಲೋ ಮಾಡಿ
Comments

ಮೈಸೂರು: ‘ಜನರಿಗೆ ಅಭಿವೃದ್ಧಿಯ ಸ್ವಾತಂತ್ರ್ಯ ನೀಡಲೆಂದು ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಪ್ರತಿಪಾದಿಸಿದರು.

ಜಿಲ್ಲಾಡಳಿತದಿಂದ ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಭಾಷಣ ಮಾಡಿದರು.

‘ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕಾಗಿ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ನಮ್ಮದು ಸರ್ವರಿಗೂ ಸಮಪಾಲು–ಸಮಬಾಳು ನೀಡುವ, ನಾಡಿನ ಪ್ರತಿ ಪ್ರಜೆಯ ಜೀವನಮಟ್ಟ ಸುಧಾರಣೆಯನ್ನು ಗುರಿಯಾಗಿಟ್ಟುಕೊಂಡ ಸರ್ವೋದಯ ತತ್ವದ ಅಭಿವೃದ್ಧಿ ಮಾದರಿಯಾಗಿದೆ’ ಎಂದು ಹೇಳಿದರು.

‘ಭಾಷೆ, ಧರ್ಮ, ಸಂಸ್ಕೃತಿ ಮೊದಲಾದವುಗಳನ್ನು ಮೀರಿ ಮನುಷ್ಯರೆಲ್ಲ ಒಂದೇ ಎಂಬ ಭಾವ ನಮ್ಮನ್ನು ಬೆಸೆಯಬೇಕು’ ಎಂದು ಆಶಯ ವ್ಯಕ್ತ‍ಪಡಿಸಿದರು.

ಚಿಂತಕರ ಆಶಯಗಳಂತೆ:

ಜಿಲ್ಲೆಯ ಪ್ರಗತಿಯ ವಿವರ ನೀಡಿದ ಅವರು, ‘ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದೇವೆ. ಸಾಮಾಜಿಕ ನ್ಯಾಯದ ಕನಸುಗಾರ ಬಸವಣ್ಣ, ಗ್ರಾಮ ಸ್ವರಾಜ್ಯದ ಹರಿಕಾರ ಮಹಾತ್ಮ ಗಾಂಧೀಜಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಹೋರಾಟಗಾರ ಡಾ.ಬಿ.ಆರ್. ಅಂಬೇಡ್ಕರ್ ಮೊದಲಾದ ಸಾಮಾಜಿಕ ಮತ್ತು ರಾಜಕೀಯ ಚಿಂತಕರ ಆಶಯಗಳು ನಮ್ಮ ಅಭಿವೃದ್ಧಿ ಮಾದರಿಗೆ ಪ್ರೇರಣೆ’ ಎಂದು ತಿಳಿಸಿದರು.

‘ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯ ಮತ್ತು ಉಳಿದ 5 ಕೆ.ಜಿ.ಗೆ ₹ 170 ಹಣವನ್ನು ಫಲಾನುಭವಿಯ ಖಾತೆಗೆ ನೇರವಾಗಿ ಪಾವತಿಸಲಾಗುತ್ತಿದೆ. ಇದರಿಂದ ಜಿಲ್ಲೆಯ 6.60 ಲಕ್ಷ ಕುಟುಂಬಗಳಿಗೆ ಅನುಕೂಲ ಆಗುತ್ತಿದೆ. ಈವರೆಗೆ ₹ 408.16 ಕೋಟಿ ಪಾವತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಶಕ್ತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಈವರೆಗೆ ಮಹಿಳೆಯರು 10.28 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಪ್ರತಿ ದಿನ 3.50 ಲಕ್ಷ ಸ್ತ್ರೀಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ 6,66,264 ಫಲಾನುಭವಿಗಳು ಆರ್ಥಿಕ ನೆರವು ಪಡೆದಿದ್ದಾರೆ’ ಎಂದು ತಿಳಿಸಿದರು.

ಅಂಬೇಡ್ಕರ್‌ ಭವನ ಪೂರ್ಣಗೊಳಿಸಲು ಕ್ರಮ:

‘ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿಯನ್ನು ₹ 19.10 ಕೋಟಿ ವೆಚ್ಚದಲ್ಲಿ ಮುಡಾದಿಂದ ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಭವನಗಳ ನಿರ್ಮಾಣ, ಪ್ರಗತಿ ಕಾಲೊನಿ, ಸ್ಮಶಾನಗಳ ಅಭಿವೃದ್ಧಿ ಹಾಗೂ ವಿವಿಧ ಕಾಮಗಾರಿಗೆ ₹ 120 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘2023–24ನೇ ಸಾಲಿನಲ್ಲಿ ಜಿಲ್ಲೆಗೆ ಬಸವ ವಸತಿ ಯೋಜನೆಯಡಿ 2,310 ಹಾಗೂ ಅಂಬೇಡ್ಕರ್ ನಿವಾಸ ವಸತಿ ಯೋಜನೆಯಡಿ 2,509 ಮನೆಗಳು ಮಂಜೂರಾಗಿದ್ದು, ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮಾಂತರ ಪ್ರದೇಶದ ಎಲ್ಲಾ ಕುಟುಂಬಗಳಿಗೂ ಶುದ್ಧ ಮತ್ತು ಸುರಕ್ಷಿತ ನೀರನ್ನು ಕಾರ್ಯಾತ್ಮಕ ನಲ್ಲಿ ಸಂಪರ್ಕದ ಮೂಲಕ ಒದಗಿಸಲಾಗುತ್ತಿದ್ದು, ಒಟ್ಟು 1,909 ಕಾಮಗಾರಿ ಪ್ರಾರಂಭಿಸಲಾಗಿದೆ. ಈವರೆಗೆ 1,264 ಕಾಮಗಾರಿಗಳನ್ನು ಭೌತಿಕವಾಗಿ ಪೂರ್ಣಗೊಳಿಸಲಾಗಿದೆ’ ಎಂದು ತಿಳಿಸಿದರು.

‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಮತ್ತು ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ 454 ಪೌರಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ’ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಂಗಾಂಗ ದಾನ ಮಾಡಿದ ಆದಿತ್ಯ, ಆಕಾಶ್, ಅನಿಲ್‌ಕುಮಾರ್ ಎಂ., ನಾಗೇಶ್ ಎಚ್‌.ವಿ., ಟಿ.ಪಿ. ಯಶವಂತ್‌ಕುಮಾರ್, ಕುಮಾರ್, ಸೈಯದ್ ಫರ್ವೇಜ್, ರೇಣುಕಾ, ಮಾಲತಿ ಎಸ್.ಪಿ. ಹಾಗೂ ತೋಟಪ್ಪ ಶೆಟ್ಟಿ ಕುಟುಂಬದವರನ್ನು ಅಭಿನಂದಿಸಲಾಯಿತು.

ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಮುಡಾ ಅಧ್ಯಕ್ಷ ಕೆ. ಮರೀಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಏತ ನೀರಾವರಿ ಯೋಜನೆಗೆ ಮಂಜೂರಾತಿ

‘ನಂಜನಗೂಡು ತಾಲ್ಲೂಕು ದೇವನೂರು ಬಳಿ ಏತ ನೀರಾವರಿ ಕಾಮಗಾರಿಯನ್ನು ₹ 90 ಕೋಟಿ ಅನುದಾನದಲ್ಲಿ ಒಟ್ಟು 17 ಕೆರೆಗಳಿಗೆ ನೀರು ತುಂಬಿಸಲು ಹಾಗೂ ಕೆ.ಆರ್. ನಗರ ತಾಲ್ಲೂಕು ಕೆಸ್ತೂರುಕೊಪ್ಪಲು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ₹ 50 ಕೋಟಿ ಅನುದಾನದಲ್ಲಿ ಒಟ್ಟು 29 ಕೆರೆಗಳಿಗೆ ನೀರು ತುಂಬಿಸಲು ಯೋಜಿಸಲಾಗಿದೆ. ಅಂದಾಜು ಪಟ್ಟಿಗೆ ತಾಂತ್ರಿಕ ಮಂಜೂರಾತಿ ದೊರೆತಿದೆ’ ಎಂದು ಸಚಿವ ಮಹದೇವಪ್ಪ ತಿಳಿಸಿದರು.

ನಗರದಲ್ಲಿ 8 ಹಾಸ್ಟೆಲ್‌

‘ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಲೋಕೋಪಯೋಗಿ ಇಲಾಖೆಯಿಂದ ₹ 59.60 ಕೋಟಿ ವೆಚ್ಚದಲ್ಲಿ ಹುಣಸೂರು ತಾಲ್ಲೂಕಿನಲ್ಲಿ 1 ಮೆಟ್ರಿಕ್ ಪೂರ್ವ, ಮೈಸೂರು ನಗರದಲ್ಲಿ 8 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳ ಕಟ್ಟಡ ನಿರ್ಮಾಣ ಕೈಗೊಳ್ಳಲಾಗಿದ್ದು ವರ್ಷಾಂತ್ಯದಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಮಹದೇವಪ್ಪ ತಿಳಿಸಿದರು.

ಕೆಸರಿನಲ್ಲೇ ಪರೇಡ್!

ಸಚಿವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೊಗಳಿಗೆ ಪುಷ್ಪ ನಮನ ಸಲ್ಲಿಸಿದರು. ಪ್ರಧಾನ ದಳಪತಿ ಆರ್‌ಪಿಐ ಎಸ್.ಡಿ. ಸಾಸನೂರು ನೇತೃತ್ವದಲ್ಲಿ ನಡೆದ ವಿವಿಧ ತುಕಡಿಗಳ ಪಥಸಂಚಲನವನ್ನು ವೀಕ್ಷಿಸಿದರು. ಮಳೆಯಿಂದಾಗಿ ಕೆಸರಾಗಿದ್ದ ಮೈದಾನದಲ್ಲೇ ಪರೇಡ್ ನಡೆಯಿತು. ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಗಮನಸೆಳೆಯಿತು.

ಉತ್ತರ ವಲಯದ ಗುಡ್‌ಶೆಫರ್ಡ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ, ನಿರ್ಮಲಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ, ಸಂತ ಫಿಲೋಮಿನಾ ಪ್ರೌಢಶಾಲೆಯ ಮಕ್ಕಳು ದೇಶಭಕ್ತಿ ಗೀತೆಗೆ ಸಾಮೂಹಿಕ ನೃತ್ಯ ಪ್ರದರ್ಶನ ನೀಡಿ, ದೇಶದಲ್ಲಿ ಸಾಕಷ್ಟು ವೈವಿಧ್ಯವಿದ್ದರೂ ನಾವೆಲ್ಲರೂ ಒಂದೇ ಎಂಬ ಆಶಯವನ್ನು ಸಾರಿದರು.

ಉತ್ತಮ ಪಥಸಂಚಲನಕ್ಕಾಗಿ ಸಶಸ್ತ್ರ ವಿಭಾಗದಲ್ಲಿ ಕೆಎಸ್‌ಆರ್‌ಪಿ, ಡಿಎಆರ್‌ ಹಾಗೂ ಮಹಿಳಾ ಪೊಲೀಸ್ ತುಕಡಿಗಳು ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ಪಡೆದವು.

ಮತ್ತೊಂದು ವಿಭಾಗದಲ್ಲಿ (ಅನ್‌ಆರ್ಮ್ಡ್) ಎನ್‌ಸಿಸಿ ಏರ್‌ಫೋರ್ಸ್‌, ಅಬಕಾರಿ ಹಾಗೂ ಅಗ್ನಿಶಾಮಕ ದಳ ಮತ್ತು ಶಾಲಾ ವಿಭಾಗದಲ್ಲಿ ಭಾರತ್ ಸೇವಾದಳದ ಬಾಲಕಿಯರು, ಡೆಲ್ಲಿ ಪಬ್ಲಿಕ್ ಶಾಲೆ ಹಾಗೂ ಭಾರತ್ ಸೇವಾದಳದ ಬಾಲಕರ ತಂಡದವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT