ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ನಡೆಸದೆ ಪಲಾಯನ: ಆಕ್ರೋಶ

ಪಾಲಿಕೆ ಕೌನ್ಸಿಲ್‌ ಸಭೆ ಮುಂದೂಡಿಕೆ: ಕಾಂಗ್ರೆಸ್‌ನ ಅಯೂಬ್‌ಖಾನ್ ವಾಗ್ದಾಳಿ
Last Updated 23 ಮಾರ್ಚ್ 2023, 11:48 IST
ಅಕ್ಷರ ಗಾತ್ರ

ಮೈಸೂರು: ‘ನಗರಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಗುರುವಾರ ನಿಗದಿಯಾಗಿದ್ದ ಚುನಾವಣೆಯನ್ನು ಮತ್ತೆ ಮುಂದೂಡುವ ಮೂಲಕ ಮೇಯರ್‌ ಶಿವಕುಮಾರ್‌ ಪಲಾಯನವಾದ ಪ್ರದರ್ಶಿಸಿದ್ದಾರೆ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಯೂಬ್‌ ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯಲ್ಲಿ ಗುರುವಾರ ಮೇಯರ್‌ ಅವರ ಖಾಲಿ ಕುರ್ಚಿ ಜೊತೆಗೆ ಪ್ರತಿಭಟನೆ ನಡೆಸಿದ ನಂತರ ಮಾತನಾಡಿದ ಅವರು, ‘ಈ ಹಿಂದೆ ಮೇಯರ್‌ ಅವರ ಕಚೇರಿಗೆ ಬೀಗ ಹಾಕುವ ಮೂಲಕ ಪ್ರತಿಭಟನೆ ನಡೆಸಿದ್ದೆವು. ನಂತರ ಅನಾರೋಗ್ಯದ ಕಾರಣ ಹೇಳಿದ್ದರು. ಇದೀಗ ವಿಧಾನಸಭೆ ಚುನಾವಣೆ ಸಿದ್ಧತೆಯ ನೆಪ ಮುಂದಿಟ್ಟಿದ್ದಾರೆ’ ಎಂದು ಕಿಡಿಕಾರಿದರು.

‘ಬಿಜೆಪಿ ಆಡಳಿತವು ಜನವಿರೋಧಿಯಾಗಿದೆ. 22ರಂದು ಯುಗಾದಿ ರಜೆ ಇದ್ದರೂ, ಸಭೆ ರದ್ದಾಗಿದೆ ಎಂದು ರಾತ್ರಿ 9.30ಕ್ಕೆ ಗೊತ್ತುವಳಿ ಪತ್ರ ಬರುತ್ತದೆ. ಪಾಲಿಕೆ ಆಯುಕ್ತ, ಕೌನ್ಸಿಲ್ ಕಾರ್ಯದರ್ಶಿ ಕೂಡ ಇಂದು ನಾಪತ್ತೆಯಾಗಿದ್ದಾರೆ. ಪಾಲಿಕೆಯು ಆಡಳಿತ ನನೆಗುದಿಗೆ ಬಿದ್ದಿದೆ’ ಎಂದು ಆರೋ‍ಪಿಸಿದರು.

‘2022ರ ಸೆ.9ರಂದೇ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯಾಗಿದೆ. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ನಡೆಸಲು ಮಾತ್ರ ಆಡಳಿತ ‍ಪಕ್ಷಕ್ಕೆ ಆಸಕ್ತಿಯಿಲ್ಲ’ ಎಂದು ದೂರಿದರು.

ಬಜೆಟ್‌ ಮಂಡಿಸದಿದ್ದರೆ ಸಂಕಷ್ಟ: ‘ಮಾರ್ಚ್‌ ತಿಂಗಳೊಳಗೆ ಬಜೆಟ್‌ ಮಂಡಿಸದಿದ್ದರೆ ಕೋಟ್ಯಂತರ ಯೋಜನೆಗಳ ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬೀಳಲಿವೆ. ವಿಧಾನಸಭೆ ಚುನಾವಣೆ ಘೋಷಣೆಯೂ ಹತ್ತಿರವಿದೆ. ಬಜೆಟ್‌ಗೆ ಮೂರು ತಿಂಗಳ ಹಿಂದೆಯೇ ಸಿದ್ಧತೆ ನಡೆಸಬೇಕು. ಹಣಕಾಸು ಸಮಿತಿ ರಚಿಸದೇ, ಬಜೆಟ್‌ ಮಂಡಿಸಲಾಗದು. ಇಂಥ ಓಡಿಹೋಗುವ ಮೇಯರ್‌ ಅವರನ್ನು ಎಂದೂ ನೋಡಿಲ್ಲ’ ಎಂದು ಅಯೂಬ್‌ ಖಾನ್‌ ಕಿಡಿಕಾರಿದರು.

‘ತಿಂಗಳಿಗೆ ಒಂದಾದರೂ ಸಭೆ ನಡೆಸಬೇಕು. ಆದರೆ, ಮೇಯರ್‌ ಶಿವಕುಮಾರ್‌ 8 ತಿಂಗಳಲ್ಲಿ 2 ಸಭೆಯನ್ನು ಮಾತ್ರ ಆಯೋಜಿಸಿದ್ದಾರೆ. ಅವುಗಳೂ ಅರ್ಧಕ್ಕೆ ಮೊಟಕುಗೊಂಡಿವೆ. ಅವ್ಯವಹಾರ ನಡೆಸಿದ್ದರಿಂದಲೇ ಸ್ಥಾಯಿ ಸಮಿತಿ ಚುನಾವಣೆ ನಡೆಸುತ್ತಿಲ್ಲ. ಅದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

‘ಪಾಲಿಕೆಯ ಮಾನ ಮರ್ಯಾದೆ ಕಳೆಯುತ್ತಿದ್ದಾರೆ. ಸುನಂದಾ ಫಾಲನೇತ್ರ ಅವಧಿಯಲ್ಲೂ ಮೂರು ಸಭೆ ಮಾತ್ರ ನಡೆದಿತ್ತು. ಗ್ಯಾಸ್‌ಪೈಪ್‌ಲೈನ್‌ ಯೋಜನೆಯ ಅನುಮೋದನೆಗಾಗಿ ಸಭೆ ನಡೆಸಿದರಷ್ಟೇ. ಶಾಸನಬದ್ಧವಾಗಿ ಆಡಳಿತ ನಡೆಸದೇ ಓಡಿಹೋಗುವುದೇ ಬಿಜೆಪಿಗರ ಕೆಲಸವಾಗಿದೆ. ಕೂಡಲೇ ಮೇಯರ್‌ ಶಿವಕುಮಾರ್‌ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಆಯುಕ್ತರೂ ಮೇಯರ್‌ ಪರವಾಗಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ವಿಧಾನಸೌಧದಲ್ಲಿ ಸುಮ್ಮನೆ ಕುಳಿತಿದ್ದಾರೆ. ಈಗಾಗಲೇ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಹಿಸಿಲ್ಲ. ಅಧಿಕಾರಿ ವರ್ಗ ಬಿಜೆಪಿಯ ಕೈಗೊಂಬೆಯಾಗಿದೆ’ ಎಂದು ಆರೋಪಿಸಿದರು.

ಪಾಲಿಕೆಯ ಸದಸ್ಯರಾದ ಆರೀಫ್ ಹುಸೇನ್‌, ಶ್ರೀಧರ್, ಗೋಪಿ, ಶೋಭಾ ಸುನಿಲ್, ರಜಿನಿ ಅಣ್ಣಯ್ಯ, ಲಕ್ಷ್ಮಿ ಕುಮಾರ್, ಶಿವಕುಮಾರ್, ಸತ್ಯರಾಜ್, ಲೋಕೇಶ್ ಪಿಯಾ, ಹಾಜಿರಾ ಸೀಮಾ, ಪಲ್ಲವಿ ಬೇಗಂ ಇದ್ದರು.

ವೀಳ್ಯೆದೆಲೆ ಬೆಳೆಗಾರರ ಪ್ರತಿಭಟನೆ: ‘245 ವೀಳ್ಯೆದೆಲೆ ಬೆಳೆಗಾರರಿಗೆ ಸೀವೇಜ್‌ ಫಾರಂನಲ್ಲಿ ತಲಾ 5 ಗುಂಟೆ ಜಮೀನು ನೀಡಲು ಸರ್ಕಾರ ಆದೇಶಿಸಿದ್ದರೂ ಪಾಲಿಕೆ ಜಾರಿಗೊಳಿಸಲು ಸಭೆಯನ್ನೇ ನಡೆಸುತ್ತಿಲ್ಲ’ ಎಂದು ಆರೋಪಿಸಿದ ಫಲಾನುಭವಿಗಳು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಭಾವಚಿತ್ರ ಇರಿಸಿ ಪಾಲಿಕೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ‘ಮೇಯರ್‌ ಶೀಘ್ರ ಕೌನ್ಸಿಲ್‌ ಸಭೆ ನಡೆಸಿ ಕ್ರಮವಹಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದರು ಎಚ್ಚರಿಸಿದರು.

ಪ್ರತಿಭಟನಕಾರರಿಗೆ ಕಾಂಗ್ರೆಸ್‌ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT