ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಜಂಕ್ಷನ್‌ನಲ್ಲಿ ಮೇಲ್ಸೇತುವೆ

ಹೊರವರ್ತುಲ ರಸ್ತೆಗಳಲ್ಲಿ ಅಪಘಾತಕ್ಕೆ ತಡೆ‌ ಹಾಕಲು ಮುಡಾ ಚಿಂತನೆ
Last Updated 29 ಡಿಸೆಂಬರ್ 2022, 4:46 IST
ಅಕ್ಷರ ಗಾತ್ರ

ಮೈಸೂರು: ’ನಗರದ ಹೊರವರ್ತುಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಪ್ರಮುಖ ಐದು ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುವುದು’ ಎಂದು ಮುಡಾ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್‌ ತಿಳಿಸಿದರು.

ಸಂಸದ ಪ್ರತಾಪಸಿಂಹ ಜೊತೆಗೆ ಬುಧವಾರ ನಗರದ ಹೊರವರ್ತುಲ ರಸ್ತೆಯ ಜನನಿಬಿಡ ಪ್ರದೇಶ, ಜಂಕ್ಷನ್‌ಗಳಿಗೆ ಭೇಟಿ ನೀಡಿ ಮಾತನಾಡಿದರು.

‘ನಗರದಲ್ಲಿ ವಾಹನಗಳ ದಟ್ಟಣೆ ಏರಿಕೆಯಾಗುತ್ತಿದೆ. ಹೊರವರ್ತುಲ ರಸ್ತೆಗಳಲ್ಲಿಯೂ ದಟ್ಟಣೆ ಉಂಟಾಗುತ್ತಿದ್ದು, ಪ್ರಮುಖ ವೃತ್ತಗಳಲ್ಲಿ ಅಪಘಾತ ತಡೆಯಲು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ವಿಜಯನಗರ 4ನೇ ಹಂತದ ಜಂಕ್ಷನ್‌ನಲ್ಲಿ ಕೆಳಸೇತುವೆ, ಬೋಗಾದಿ ರಿಂಗ್‌ರೋಡ್‌ ಜಂಕ್ಷನ್‌ನಲ್ಲಿ ಮೇಲ್ಸೇತುವೆ, ದಟ್ಟಗಳ್ಳಿ 3ನೇ ಹಂತದಲ್ಲಿ ಮ್ಯಾಜಿಕ್‌ ಬಾಕ್ಸ್‌, ಜೆ.ಪಿ. ನಗರದ ಗೋಬ್ಲಿಮರದ ಕೆಳಗೆ ಕೆಳಸೇತುವೆ ನಿರ್ಮಾಣಕ್ಕೂ ಚಿಂತನೆ ನಡೆದಿದೆ’ ಎಂದರು.

‘ಜೆ.ಪಿ.ನಗರದ ಹೊರವರ್ತುಲ ರಸ್ತೆಯಲ್ಲಿ ಗೋಬ್ಲಿಮರದವರೆಗೂ ಚತುಷ್ಪಥ ರಸ್ತೆಯಿದ್ದು, ದ್ವಿಪಥದ ಕೆಳಸೇತುವೆ ವ್ಯವಸ್ಥೆಯಿತ್ತು. ಅದರಿಂದ, ಸೇತುವೆ ಸಮೀಪಿಸುತ್ತಿದ್ದಂತೆಯೇ, ವಾಹನ ಸವಾರರು ಗೊಂದಲಕ್ಕೀಡಾಗಿ ಅಪಘಾತಗಳು ಸಂಭವಿಸಿದ್ದವು. ಅದಕ್ಕೆ ಪರಿಹಾರ ನೀಡಲು ಮತ್ತೊಂದು ಕೆಳಸೇತುವೆ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ. ಈ ಭಾಗದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ’ ಎಂದು ಮಾಹಿತಿ ನೀಡಿದರು.

‘ಹೊರವರ್ತುಲ ರಸ್ತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಮುಡಾದಿಂದ ನಡೆಸಲಾಗುವುದು. ಮಣಿಪಾಲ್ ಆಸ್ಪತ್ರೆ ಜಂಕ್ಷನ್‌, ನಂಜನಗೂಡು ರಸ್ತೆ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಕಾಮಗಾರಿ ನಡೆಸಲಿದೆ. ಪರಸಯ್ಯನಹುಂಡಿ ಜಂಕ್ಷನ್‌ ಅನ್ನು ರಾಜ್ಯ ಸರ್ಕಾರ ನಿರ್ಮಿಸಲಿದೆ. ಎಲ್ಲಾ ಕಾಮಗಾರಿಗಳನ್ನೂ ಶೀಘ್ರ ಆರಂಭಿಸಲಾಗುವುದು’ ಎಂದರು.

‘ತಜ್ಞರಿಂದಲೇ ಯೋಜನೆ ಜಾರಿಗೆ ಟೆಂಡರ್ ಕರೆದು, ವಿಸ್ತೃತಾ ಯೋಜನಾ ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗುವುದು. ಒಪ್ಪಿಗೆ ಸಿಕ್ಕ ತಕ್ಷಣವೇ, ಯೋಜನೆ ಜಾರಿಗೊಳಿಸಲಾಗುವುದು’ ಎಂದರು.

ವಿಜಯನಗರ 4ನೇ ಹಂತ ಜಂಕ್ಷನ್‌, ಬೋಗಾದಿ ಜಂಕ್ಷನ್‌, ದಟಗಳ್ಳಿ 3ನೇ ಹಂತದ ಸಾರಾ ಚೌಲ್ಟ್ರಿ ಜಂಕ್ಷನ್‌, ಹೊರವರ್ತುಲ ರಸ್ತೆಯ ಎಚ್‌.ಡಿ.ಕೋಟೆ ರಸ್ತೆ ಜಂಕ್ಷನ್‌, ಜೆ.ಪಿ.ನಗರದ ಕುಪ್ಪಲೂರು ರಸ್ತೆ ಜಂಕ್ಷನ್‌ಗಳಲ್ಲಿ ಅವರು ಭೇಟಿ ನೀಡಿ ಪರಿಶೀಲಿಸಿದರು.

ನಿವೇಶನ ಹಂಚಲು ಕ್ರಮ: ‘ಮುಡಾದಿಂದ ಬಡಾವಣೆ ನಿರ್ಮಿಸಿ, ನಿವೇಶನ ಹಂಚುವ ಪ್ರಕ್ರಿಯೆ ನಡೆದು 10 ವರ್ಷಗಳೇ ಕಳೆದಿವೆ. ಇದೀಗ ಬೊಮ್ಮೇನಹಳ್ಳಿಯಲ್ಲಿ 600 ಎಕರೆ ಜಾಗವನ್ನು ಗುರುತಿಸಿದ್ದು, 50–50 ಹಂಚಿಕೆಯಲ್ಲಿ ಬಡಾವಣೆ ನಿರ್ಮಿಸಲು ನಿರ್ಧರಿಸಲಾಗಿದೆ. ಶೀಘ್ರ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದರು.

ಮುಡಾ ಆಯುಕ್ತ ಜಿ.ಟಿ. ದಿನೇಶ್‌ ಕುಮಾರ್‌, ನಗರ ಯೋಜನಾ ಸದಸ್ಯ ಶೇಷ, ಎಕ್ಸಿಕೂಟಿವ್‌ ಎಂಜಿನಿಯರ್‌ ಮೋಹನ್‌, ಸೂಪರಿಟಿಡೆಂಟ್ ಎಂಜಿನಿಯರ್‌ ಚನ್ನಕೇಶವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT