ಮೈಸೂರು: ಪರ್ಫೆಕ್ಟ್ ಪಾಸ್ ತಂಡವು ಶನಿವಾರ ಇಲ್ಲಿ ನಡೆದ ಬೆಂಗಳೂರು– ಮೈಸೂರು ಅಂತರ ಜಿಲ್ಲಾ ಅಲಯನ್ಸ್ ಫುಟ್‌ಬಾಲ್ ಟೂರ್ನಿಯಲ್ಲಿ ಮೂರು ವಿಭಾಗಗಳಲ್ಲೂ ಪ್ರಶಸ್ತಿ ಎತ್ತಿ ಹಿಡಿಯಿತು.
ಫ್ರೀಕಿಕ್ ಫಿಟ್‌ನೆಸ್ ಮತ್ತು ಫುಟ್‌ಬಾಲ್ ಕೋಚಿಂಗ್ ಅಕಾಡೆಮಿ, ಮೈಸೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಸಹಯೋಗದಲ್ಲಿ ನಡೆದ ಟೂರ್ನಿಯ 10, 12 ಹಾಗೂ 14 ವರ್ಷದ ಒಳಗಿನವರ ವಿಭಾಗದಲ್ಲಿ ಪರ್ಫೆಕ್ಟ್ ಪಾಸ್ ತಂಡವು ಅಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.
10 ವರ್ಷದ ಒಳಗಿನವರ ವಿಭಾಗದಲ್ಲಿ ಮೈಸೂರಿನ ದೆಹಲಿ ಪಬ್ಲಿಕ್ ಸ್ಕೂಲ್ ಎರಡನೇ ಹಾಗೂ ಬೆಂಗಳೂರು ಡಿಪಿಎಫ್‌ಎ ತಂಡವು ಮೂರನೇ ಸ್ಥಾನ ಪಡೆದವು. 12 ವರ್ಷದ ಒಳಗಿನವರ ವಿಭಾಗದಲ್ಲಿ ಬೆಂಗಳೂರಿನ ಡಿಪಿಎಫ್‌ಎ ರನ್ನರ್ ಅಪ್ ಹಾಗೂ ಮೈಸೂರಿನ ದೆಹಲಿ ಪಬ್ಲಿಕ್ ಸ್ಕೂಲ್ ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡವು.
14 ವರ್ಷದ ಒಳಗಿನವರ ವಿಭಾಗದಲ್ಲಿ ಡಿಪಿಎಫ್‌ಎ ಎರಡನೇ ಹಾಗೂ ಪರ್ಫೆಕ್ಟ್ ಪಾಸ್ ‘ಬಿ’ ತಂಡವು ಮೂರನೇ ಸ್ಥಾನ ಪಡೆದವು. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡವು.
ಟೂರ್ನಿಯನ್ನು ಜಿಲ್ಲಾ ಪುಟ್‌ಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಲ್. ಮಂಜುನಾಥ್ ಉದ್ಘಾಟಿಸಿದರು. ಐಐಎಸ್ ಅಧಿಕಾರಿ ಎಸ್.ಟಿ. ಶ್ರುತಿ ಪಾಲ್ಗೊಂಡರು.