ಮೈಸೂರು: ‘ಗಮಕ ಕಲೆಯು ಗಂಭೀರ ಕಲೆಯಾಗಿದ್ದು, ಅದು ವಾಚನ, ವ್ಯಾಖ್ಯಾನಕ್ಕೆ ಸೀಮಿತವಾಗದೆ ಅದರಾಚೆಗೂ ಬೆಳೆಯಬೇಕು’ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಜ್ಯೋತಿ ಶಂಕರ್ ಹೇಳಿದರು.
ಕರ್ನಾಟಕ ಗಮಕ ಕಲಾ ಪರಿಷತ್ತು, ಮೈಸೂರು ಜಿಲ್ಲಾ ಗಮಕ ಕಲಾ ಪರಿಷತ್ ಟ್ರಸ್ಟ್ ಕೃಷ್ಣಮೂರ್ತಿಪುರಂನ ರಾಮ ಮಂದಿರದಲ್ಲಿ ಆಯೋಜಿಸಿದ್ದ ಗಮಕಿ ಮಂಜುಳಾ ನಾಗರಾಜ್ ಅವರ ದ್ವಿತೀಯ ವರ್ಷದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಂಜುಳಾ ಅವರು ಗಮಕದ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಕಲೆ ಜನರಿಗೆ ತಲುಪಿದಾಗ ಖುಷಿ ಪಡುತ್ತಿದ್ದರು. ಸೋತರೆ ಯಾವ ಕಾರಣಕ್ಕಾಗಿ ಜನರಿಗೆ ತಲುಪಲಿಲ್ಲ ಎಂದು ವಿಮರ್ಶೆ ಮಾಡುತ್ತಿದ್ದರು. ಅವರಿಗೆ ಕನ್ನಡ, ಹಿಂದಿಯ ಹಳೆಯ ಹಾಡುಗಳ ಬಗ್ಗೆ ಹೆಚ್ಚಿನ ಒಲವು ಇತ್ತು’ ಎಂದು ತಿಳಿಸಿದರು.
ಕರ್ನಾಟಕ ಮುಕ್ತಕ ಅಕಾಡೆಮಿ ಗೌರವಾಧ್ಯಕ್ಷ ಎಸ್.ರಾಮಪ್ರಸಾದ್ ಮಾತನಾಡಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ.ಎನ್.ನಾಗರಾಜರಾವ್ ಇದ್ದರು.