ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ ಆಧಾರಿತ ಮೀಸಲಾತಿ ಅಗತ್ಯ: ಯತೀಂದ್ರ ಸಿದ್ದರಾಮಯ್ಯ

ಗಾಣಿಗ ಸಂಘದ ಪ್ರತಿಭಾ ಪುರಸ್ಕರದಲ್ಲಿ ಯತೀಂದ್ರ ಸಿದ್ದರಾಮಯ್ಯ
Published 27 ಆಗಸ್ಟ್ 2023, 16:29 IST
Last Updated 27 ಆಗಸ್ಟ್ 2023, 16:29 IST
ಅಕ್ಷರ ಗಾತ್ರ

ಮೈಸೂರು: ‘ಕಡಿಮೆ ಜನಸಂಖ್ಯೆಯ ಜಾತಿ, ಸಮುದಾಯಗಳೂ ಅಭಿವೃದ್ಧಿಹೊಂದಲು ಹಾಗೂ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಿಗಲು ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೊಳಿಸುವ ಅಗತ್ಯ ಇದೆ. ಇದಕ್ಕಾಗಿ ಜಾತಿ ಗಣತಿ, ಸಮೀಕ್ಷೆ ಅನಿವಾರ್ಯ’ ಎಂದು ವರುಣ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮೈಸೂರು ಜಿಲ್ಲಾ ಗಾಣಿಗರ ಸಂಘ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಗಣ್ಯರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೇವಲ ಶೇ 4ರಷ್ಟು ಜನಸಂಖ್ಯೆ ಇರುವ ಮೇಲ್ವರ್ಗದವರಿಗೆ ಶೇ 10 ಪ್ರಮಾಣದ ಮೀಸಲಾತಿ (ಎಡಬ್ಲ್ಯುಎಸ್‌) ಸುಲಭದಲ್ಲಿ ಲಭ್ಯವಾಗುತ್ತದೆ. ಆದರೆ 300ರಷ್ಟು ಸಮುದಾಯಗಳು ಸೇರಿದಂತೆ ಶೇ 54ರಷ್ಟು ಜನಸಂಖ್ಯೆ ಇರುವ ಹಿಂದುಳಿದ ವಿಭಾಗಗಳಿಗೆ ಅದಕ್ಕನುಗುಣವಾಗಿ ಮೀಸಲಾತಿ ಲಭ್ಯವಾಗುತ್ತಿಲ್ಲ. ಮೇಲ್ವರ್ಗದವರಿಗೆ ಅವರು ಹೋರಾಟ ಮಾಡದೇ ಆರ್ಥಿಕ ಮೀಸಲಾತಿ ಲಭಿಸಿದೆ. ಆದರೆ ಹಿಂದುಳಿದ ಸಮುದಾಯಗಳಿಗೆ ದಶಕಗಳ ಕಾಲ ಹೋರಾಟ ನಡೆಸಿದ್ದರಿಂದ ಮೀಸಲಾತಿ ಲಭಿಸಿತು. ಇದರಿಂದಲೇ ಮೀಸಲಾತಿ ಅನುಷ್ಠಾನದೊಳಗಿನ ಪ್ರಭಾವವನ್ನು ಅರಿಯಬಹುದು’ ಎಂದು ಮಾರ್ಮಿಕವಾಗಿ ವಿವರಣೆ ನೀಡಿದರು.

‘ಕಡಿಮೆ ಜನಸಂಖ್ಯೆಯ ಸಣ್ಣ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಸಿಗದೆ ಅವರ ಪ್ರಗತಿ ಕುಂಠಿತವಾಗಿದೆ. ಹಾಗೆಂದು ಒಟ್ಟು ಮೀಸಲಾತಿಯ ಪ್ರಮಾಣ ಹೆಚ್ಚಿಸಲು ಸಂವಿಧಾನದ ಮಿತಿಯೂ ಇದೆ. ಇದನ್ನೆಲ್ಲ ಗಮನಿಸಿ ಜನಸಂಖ್ಯೆ ಆಧಾರಿತ ಮೀಸಲಾತಿಯ ಬಗ್ಗೆ ಚಿಂತನೆ ನಡೆದಿದೆ. ಹಿಂದುಳಿದ ಸಮುದಾಯಗಳು ಪ್ರತ್ಯೇಕವಾಗಿದ್ದರೆ ದುರ್ಬಲಗೊಳ್ಳುತ್ತವೆ. ಒಗ್ಗಟ್ಟು, ಬಲವರ್ಧನೆ ಮಾಡಿದರೆ ರಾಜಕೀಯವೂ ಸೇರಿದಂತೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಈ ಸಮುದಾಯಗಳವರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು’ ಎಂದು ಯತೀಂದ್ರ ಸಲಹೆ ನೀಡಿದರು.

ಸಮುದಾಯದ 10 ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ, ಗಾಣಿಗ ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ಶ್ರಮಿಸಿದ ಎನ್‌.ಸಿ. ಉಮೇಶ್‌, ಯದುಕುಮಾರ್‌, ದ್ವಾರಕಾನಾಥ ಅವರನ್ನು ಅಭಿನಂದಿಸಲಾಯಿತು.

ಬಿಜೆಪಿ ಪ್ರಮುಖ ಆರ್‌. ರಘು ಕೌಟಿಲ್ಯ, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ರಾಮು, ಕೋಲಾರದ ಅಶೋಕ್‌ ಕುಮಾರ್‌, ರಾಮಸ್ವಾಮಿ, ಅಧಿಕಾರಿ  ಕುಮಾರ್‌, ವಾಕ್‌ಶ್ರವಣ ಸಂಸ್ಥೆ ತಜ್ಞೆ ಗೀತಾ ಎಂ.ಪಿ., ವಕೀಲ ಎಂ.ಎಲ್‌. ವರದರಾಜು, ಚೇತನ್‌, ಎಂ.ಕೆ. ಚನ್ನಕೇಶವ, ಅರವಿಂದ, ಪಾರ್ಥಸಾರಥಿ, ಮುಖಂಡರಾದ ಶರವಣ, ಕೃಷ್ಣ ಸ್ವಾಮಿ, ಸ್ವಾಮಿ ನಾಯಕ್‌, ಎನ್‌. ಮಹಾದೇವಯ್ಯ, ಅನಂತು, ಮಂಜುಳಾ ಮಂಜುನಾಥ್‌, ಪುಷ್ಪಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ಅಖಿಲ ಕರ್ನಾಟಕ ಗಾಣಿಗರ ಸಂಘದ ರಾಜ್ಯ ಅಧ್ಯಕ್ಷ ಎಂ.ಆರ್‌. ರಾಜಶೇಖರ್‌, ಜಿಲ್ಲಾ ಪದಾಧಿಕಾರಿಗಳಾದ ಉಮೇಶ್‌ ಎನ್‌.ಸಿ.,  ಕೃಷ್ಣ ಶೆಟ್ಟಿ ವಿ., ಶ್ರೀನಿವಾಸ ಎನ್‌.ಟಿ., ಹೇಮಂತ್‌ ಕುಮಾರ್‌ ಕೆ., ಮಹದೇವ ಎಂ. ಚಾಮರಾಜ ನಗರ ಘಟಕದ ಶಿವಣ್ಣ, ಸ್ವಾಮಿ, ಮಂಡ್ಯ, ಹಾಸನ ಜಿಲ್ಲಾ ಘಟಕಗಳ ಪ್ರಮುಖರು ಇದ್ದರು.

ನಿವೇಶನ ಅನುದಾನ ಭರವಸೆ

ಮುಖ್ಯಅತಿಥಿ ಹುಣಸೂರು ಕ್ಷೇತ್ರದ ಶಾಸಕ  ಜಿ.ಡಿ. ಹರೀಶ್‌ ಗೌಡ ಮಾತನಾಡಿ ‘ಗಾಣಿಗರ ಸಂಘಟನೆಗೆ ಮುಡಾ ನಿವೇಶನ ಮಂಜೂರು ಒದಗಿಸಲಾಗುವುದು. ಅನುದಾನ ಒದಗಿಸಲಾಗುವುದು. ಆರ್ಥಿಕ ಇಲಾಖೆಯ ಅನುಮೋದನೆಯ ಹಂತದಲ್ಲಿ ಈ ಪ್ರಕ್ರಿಯೆಗಳು ಇದ್ದು ಆದಷ್ಟು ಶೀಘ್ರ ಸಂಘಕ್ಕೆ ಲಭಿಸುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT