ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆ, ಮೋಸ, ಅಹಂಕಾರ ತ್ಯಜಿಸಬೇಕು: ಗಣಪತಿ‌ ಸಚ್ಚಿದಾನಂದ ಸ್ವಾಮೀಜಿ

‘ಗೀತಾ’ ಸಮ್ಮೇಳನಕ್ಕೆ ಚಾಲನೆ
Last Updated 2 ಡಿಸೆಂಬರ್ 2022, 14:19 IST
ಅಕ್ಷರ ಗಾತ್ರ

ಮೈಸೂರು: ‘ಆಸೆ, ಮೋಹ, ಅಹಂಕಾರ ಎಲ್ಲವನ್ನೂ ಬಿಟ್ಟು ನನ್ನಲ್ಲಿಗೆ ಬಾ. ನೀನು ಮಾಡುವ ಕರ್ಮದ ಅನುಸಾರವಾಗಿ ಫಲ ಸಿಗುತ್ತದೆ ಎಂದು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ್ದ. ಅದನ್ನು ನಾವೆಲ್ಲರೂ ಅನುಸರಿಸಬೇಕು’ ಎಂದು ಅವಧೂತ ದತ್ತ ಪೀಠದ ಗಣಪತಿ‌ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ಬೆಂಗಳೂರಿನ ಅಂತರಾಷ್ಟ್ರೀಯ ಗೀತಾ ಪ್ರತಿಷ್ಠಾನ ಟ್ರಸ್ಟ್‌ ಮತ್ತು ಅವಧೂತ ದತ್ತ ಪೀಠದಿಂದ ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ 18ನೇ ಜಾಗತಿಕ ‘ಗೀತಾ’ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

‘ಆಸೆ ಎಂಬ ಮರೀಚಿಕೆಯ ಹಿಂದೆ ಓಡುವುದು ಬಿಟ್ಟು ಒಳ್ಳೆಯ ಮನಸ್ಸಿನಿಂದ ಉತ್ತಮ ಕೆಲಸ ಮಾಡಬೇಕು. ಹಾಗಾದಾಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ’ ಎಂದು ತಿಳಿಸಿದರು.

ಜ್ಞಾನ ನೀಡಬೇಕು: ‘ಆರೋಗ್ಯ ನಮ್ಮ ಕೈಯಲ್ಲಿಲ್ಲ. ಜ್ಞಾನೇಂದ್ರಿಯಗಳು ಇಷ್ಟ ಬಂದ ಆಸೆ ಹೊರ ಹಾಕುತ್ತವೆ. ಮೊದಲು ನಮ್ಮ ಜ್ಞಾನೇಂದ್ರಿಯಗಳಿಗೆ ಜ್ಞಾನ ನೀಡಬೇಕು‌’ ಎಂದು ಸಲಹೆ ನೀಡಿದರು.

‘ಅರ್ಜುನನಿಗೆ‌ ಶ್ರೀಕೃಷ್ಣ ‌ಗೀತೋಪದೇಶ ಮಾಡುವಾಗ‌ ನಾನು ಎಲ್ಲವನ್ನೂ ಪರಿತ್ಯಾಗ ಮಾಡಿ ಸನ್ಯಾಸಿಯಾಗುತ್ತೇನೆ‌ ಎಂದು ಹೇಳುತ್ತಲೇ ಇರುತ್ತಾನೆ. ಆಗ, ಯಾರು, ಏನು ಕೆಲಸ ಮಾಡಬೇಕು ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ ಎಂದು ಕೃಷ್ಣ ಹೇಳಿದ್ದ. ಮೊದಲು ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು ಎಂದು ತಿಳಿಸಿಕೊಟ್ಟಿದ್ದ. ಆದರೂ 18ನೇ ಅಧ್ಯಾಯದ ಮುಕ್ತಾಯದ ವೇಳೆಗೆ ಅರ್ಜುನನಿಗೆ ಭಗವದ್ಗೀತೆಯ ‌ಅರಿವಾಯಿತು. ಬದುಕಿನ ತಿಳುವಳಿಕೆ ಮೂಡಿತು. ಹೀಗೆ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸುವ ಮೂಲಕ‌ ಶ್ರೀಕೃಷ್ಣನು ಇಡೀ ಮನುಕುಲಕ್ಕೆ ಮಾನವರು ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ’ ಎಂದರು.

‘ದಿನಕ್ಕೊಂದು ಶ್ಲೋಕ ಕಲಿತರೆ, ಇಡೀ‌ ಭಗವದ್ಗೀತೆಯನ್ನು ಕಲಿಯಬಹುದು. ಒಂದು‌ ಶ್ಲೋಕದಲ್ಲಿ ಇರುವುದನ್ನಾದರೂ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ಮಾತನಾಡಿ, ‘ಭಗವದ್ಗೀತೆಯನ್ನು ಕೇವಲ ಪೂಜೆಗಾಗಿ ಬಳಸುವುದಲ್ಲ. ಅದರಲ್ಲಿನ ಶ್ಲೋಕಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

‘ನಾವು ಇಡೀ‌ ವಿಶ್ವಕ್ಕೆ ಅಧ್ಯಾತ್ಮ ಹೇಳಿಕೊಟ್ಟವರು. ಆದರೆ, ನಮ್ಮ ಶಾಲೆಗಳಲ್ಲಿ ತರಗತಿ ಪ್ರಾರಂಭಕ್ಕೆ ಮುನ್ನ ಹತ್ತು ನಿಮಿಷ ಧ್ಯಾನ ಮಾಡಿಸಲು ಹೊರಟರೆ ಬಹಳ ವಿರೋಧ ‌ವ್ಯಕ್ತವಾಯಿತು’ ಎಂದು ಬೇಸರ‌ ವ್ಯಕ್ತಪಡಿಸಿದರು.

‘ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ. ಭಗವದ್ಗೀತೆಯು ಮಾನವೀಯತೆಯನ್ನು ಬೆಳೆಸುತ್ತದೆ’ ಎಂದರು.

ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಭಗವದ್ಗೀತೆಯ 18ನೇ ಅಧ್ಯಾಯದ ಅರ್ಥವನ್ನು ಕೆಲವು ಉದಾಹರಣೆ ಮೂಲಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT