ಆರ್.ಜಿತೇಂದ್ರ
ಮೈಸೂರು: ಗೃಹ ಜ್ಯೋತಿ ಯೋಜನೆ ಅಡಿ ಅರ್ಜಿ ಸಲ್ಲಿಸಿದವರಿಗೆ ಉಚಿತ ಇಲ್ಲವೇ ವಿನಾಯಿತಿ ದರದ ವಿದ್ಯುತ್ ಬಿಲ್ ವಿತರಣೆ ಕಾರ್ಯವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಆರಂಭಿಸಿದೆ. ಸೆಸ್ಕ್ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ 7.87 ಲಕ್ಷ ನೋಂದಣಿ ಬಾಕಿ ಇದೆ.
ಸೆಸ್ಕ್ ಸಿಬ್ಬಂದಿ ಆಗಸ್ಟ್ 1ರಿಂದಲೇ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಬಿಲ್ ನೀಡುತ್ತಿದ್ದಾರೆ. 200 ಯೂನಿಟ್ ಒಳಗೆ ವಿದ್ಯುತ್ ಬಳಸಿದ ಬಹುತೇಕರಿಗೆ ಶೂನ್ಯ ದರದ ಬಿಲ್ ನೀಡಲಾಗುತ್ತಿದೆ. ಕೆಲವರಿಗೆ ಹಳೇ ಬಾಕಿ, ಬಡ್ಡಿ ಇತರೆ ಶುಲ್ಕವನ್ನು ಸೇರಿಸಿದ ಬಿಲ್ ನೀಡಲಾಗಿದ್ದು, ಅದರಲ್ಲಿ ಜುಲೈ ತಿಂಗಳ ವಿದ್ಯುತ್ ಬಳಕೆ ಶುಲ್ಕವನ್ನು 0 ಎಂದು ತೋರಿಸಲಾಗಿದೆ. ಕೆಲವರಿಗೆ ₹8, ₹10, ₹20... ಹೀಗೆ ಅಲ್ಪ ಮೊತ್ತದ ಬಿಲ್‌ಗಳು ಬಂದಿವೆ.
ಗ್ರಾಹಕರು ಕಳೆದ ಒಂದು ತಿಂಗಳ ಅವಧಿಯಲ್ಲಿ ಬಳಸಿದ ವಿದ್ಯುತ್ ಯುನಿಟ್ ಹಾಗೂ ಅದಕ್ಕೆ ತಗುಲುವ ಶುಲ್ಕವನ್ನು ಬಿಲ್‌ನಲ್ಲಿ ಉಪಮೊತ್ತ ಎಂದು ನಮೂದಿಸಲಾಗಿದೆ. ಆದರೆ ಕೊನೆಯಲ್ಲಿ ಪಾವತಿಸಬೇಕಾದ ಮೊತ್ತದಲ್ಲಿ ಈ ಹಣವು ಶೂನ್ಯವಾಗಿದೆ.
ಸೆಸ್ಕ್ ವ್ಯಾಪ್ತಿಯಲ್ಲಿ ಒಟ್ಟು ಗೃಹ ಬಳಕೆಯ ಸುಮಾರು 24 ಲಕ್ಷ ಸಂಪರ್ಕಗಳು ಇವೆ. ಇದರಲ್ಲಿ ಜುಲೈ 25ರ ಒಳಗೆ 16.13 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದು, ಅಂತಹವರಿಗೆ ಮಾತ್ರ ಈಗ ಆ.1ರಿಂದ ನೀಡುವ ಬಿಲ್‌ನಲ್ಲಿ ರಿಯಾಯಿತಿ ದೊರೆಯಲಿದೆ. ಮುಂದೆ ನೋಂದಣಿ ಮಾಡಿಕೊಂಡವರಿಗೆ ಮುಂದಿನ ತಿಂಗಳುಗಳಲ್ಲಿ ವಿನಾಯಿತಿ ಸಿಗಲಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಯು ಈಗಲೂ ಚಾಲನೆಯಲ್ಲಿ ಇದೆ. ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರ, ಸೆಸ್ಕ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.