ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಿಲ್ಸ್‌ ಪಿಯಾನೊ ವಾದನದ ಮೋಡಿ!

ಲಲಿತಕಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ
Last Updated 6 ಡಿಸೆಂಬರ್ 2022, 12:48 IST
ಅಕ್ಷರ ಗಾತ್ರ

ಮೈಸೂರು: ಸ್ವಿಡ್ಜರ್ಲೆಂಡ್‌ನ ಪಿಯಾನೊ ವಾದಕ ಜಿಲ್ಸ್‌ ಗ್ರಿಮೈತ್ರೆ ಹರಿಸಿದ ನಾದ ಲಹರಿಗೆ ತಲೆದೂಗಿದವಿದ್ಯಾರ್ಥಿಗಳು,ಪಾಶ್ಚಾತ್ಯ ಹಾಗೂ ಕರ್ನಾಟಕಶಾಸ್ತ್ರೀಯ ಸಂಗೀತದ ಸಮಾನ ಅಂಶಗಳನ್ನು ತೆರೆದಿಡುವ ವೈಖರಿಗೆ ಮೂಕವಿಸ್ಮಿತರಾದರು.

ಮಾನಸಗಂಗೋತ್ರಿಯ ಲಲಿತಾ ಕಲಾ ಕಾಲೇಜಿನಲ್ಲಿ ಮಂಗಳವಾರ ವಿಶೇಷ ಉಪನ್ಯಾಸ ನೀಡಿದ ಜಿಲ್ಸ್,‘ಭಾರತೀಯ ಸಂಗೀತದಲ್ಲಿ ಶೃತಿಗೆ ಮಹತ್ವವಿದ್ದರೆ, ಪಾಶ್ಚಾತ್ಯ ಸಂಗೀತದಲ್ಲಿ ಒಂದೇ ಸಮಯದಲ್ಲಿ ಮೂರ್ನಾಲ್ಕು ಸ್ವರ ಹೊಮ್ಮಿಸುವ ‘ಹಾರ್ಮೊನಿ’ ಮುಖ್ಯವಾಗುತ್ತದೆ. ಕರ್ನಾಟಕ ಸಂಗೀತದ ಎಲ್ಲ ರಾಗಗಳನ್ನು ಮೂರೇ ಕಾರ್ಡ್ಸ್‌ನಲ್ಲಿ ಹಿಡಿದಿಡಬಹುದು’ ಎಂದು ಅಚ್ಚರಿಗೊಳಿಸಿದರು.

‘ಮಾಧುರ್ಯಕ್ಕೆ ಮಹತ್ವ ನೀಡುವಂತೆಯೇ ತಾಳವಾದ್ಯಗಳಿಗೆ ಹೆಚ್ಚಿನ ಆದ್ಯತೆಯನ್ನುಭಾರತೀಯ ಶಾಸ್ತ್ರೀಯ ಸಂಗೀತಗಳು ನೀಡುತ್ತವೆ. ವೈವಿಧ್ಯದ ತಾಳವಾದ್ಯಗಳ ಬಳಕೆಯು ಶಾಸ್ತ್ರೀಯ ಸಂಗೀತದ ಶ್ರೀಮಂತಿಕೆ ಹೆಚ್ಚಿಸಿವೆ’ ಎಂದು ಅಭಿಪ್ರಾಯಪಟ್ಟರು.

‘ಕರ್ನಾಟಕ ಶಾಸ್ತ್ರೀಯ ಸಂಗೀತದ ಕುನ್ನಕೋಲ್ ಕಲಿಯಲು ಬೆಂಗಳೂರಿಗೆ ಬಂದಾಗ ಮೂರು ತಾಸಿನ ಸಂಗೀತ ಕಛೇರಿ ಕೇಳಿ ತಬ್ಬಿಬ್ಬಾಗಿ ಹೋದೆ. ಏನೆಂದು ಅರ್ಥವೇ ಆಗಲಿಲ್ಲ. ಸಂಗೀತ ಭಾಷೆಯನ್ನು ಅರ್ಥೈಸಿಕೊಳ್ಳಬೇಕೆಂದರೆ ಕುತೂಹಲವಿರಬೇಕು. ಆದ್ದರಿಂದ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕುನ್ನಕೋಲ್‌ ಗುರು ಬೆಂಗಳೂರಿನ ಸೋಮಶೇಖರ್ ಜೋಯಿಸ್‌ ಅವರ ಬಳಿ ಪ್ರಶ್ನೆಗಳನ್ನು ಬರೆದುಕೊಂಡು ಹೋಗುತ್ತಿದ್ದೆ. ಇದೀಗ ಶಾಸ್ತ್ರೀಯ ಸಂಗೀತದ ಬಗ್ಗೆ ಹಿಡಿತವಿದೆ. ನಮ್ಮದೇ ಸಂಗೀತವನ್ನು ಶ್ರೇಷ್ಠವೆಂದು ಭಾವಿಸಿ ಕಲಿಯಲು ಹೋಗದೇ ಇರುವುದು ತಪ್ಪಾಗುತ್ತದೆ. ಕಲಾವಿದನಿಗೆ ಎಲ್ಲ ಸಂಗೀತಗಳ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲ ಇರಬೇಕು’ ಎಂದರು.

‘ಜಾನ್‌ ಸೆಬಾಸ್ಟಿನ್ ಬಾಕ್‌, ಬಿತೊವೆನ್‌,ಜೊಹಾ ಬ್ರಾಮ್ಸ್ ಅದ್ಭುತ ಪಿಯೊನೊ ವಾದಕರು. ಊಹಾತೀತ ಸಂಯೋಜನೆಗಳನ್ನು ಮಾಡಿದ್ದಾರೆ. ಮಾಧುರ್ಯ ಹಾಗೂ ವಿವಿಧ ಭಾವಗಳನ್ನು ಹೊಮ್ಮಿಸಿದ್ದಾರೆ. ಎರಡು ಸ್ವರಗಳ ಮಧ್ಯದ ಮೌನವು ಅದ್ಭುತ ಭಾವ ಸೃಷ್ಟಿಸುತ್ತದೆ’ ಎಂದು ಬಣ್ಣಿಸಿದ ಅವರು, ಹಲವು ಸಂಯೋಜನೆಗಳನ್ನು ಪ್ರಸ್ತುತಪಡಿಸಿದರು.

‌ವಿದ್ವಾನ್ ಎಂ.ಮಂಜುನಾಥ್‌ ಮಾತನಾಡಿ, ‘ಪ್ರದರ್ಶಕ ಕಲೆಗಳ ಕಲಾವಿದನಿಗೆ ವಿಶಾಲ ಜ್ಞಾನ ಇರಬೇಕು. ಅದಕ್ಕಾಗಿ ಹೊಸ ವಿಷಯಗಳ ಬಗ್ಗೆ ಆಸಕ್ತಿ ತಳೆಯಬೇಕು.ಜಗತ್ತಿನ ಎಲ್ಲ ಸಂಗೀತ ಕಲಿಯುವ ಉತ್ಸಾಹ ಇರಬೇಕು’ ಎಂದರು.

ಪ್ರಾಂಶುಪಾಲರಾದ ಪ್ರೊ.ಅನಿಟಾ ವಿಮ್ಲಾ ಬ್ರ್ಯಾಗ್ಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT