ಹುಣಸೂರು: ‘ಪ್ರತಿ ಚುನಾವಣೆಯಲ್ಲಿ ನನ್ನನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದ ಜೆಡಿಎಸ್ ಒಕ್ಕಲಿಗರ ಮತಕ್ಕೆ ಕನ್ನ ಹಾಕುತ್ತಿತ್ತು. ಆದರೆ, ಈ ಬಾರಿ ಅದು ಅಸಾಧ್ಯ’ ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.
ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಖಾಸಗಿ ಬಡಾವಣೆಯಲ್ಲಿ ಫೆ.15ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಈ ಸಂಬಂಧ ನಡೆದ ಒಕ್ಕಲಿಗ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ಶಾಸಕ ಜಿ.ಟಿ.ದೇವೇಗೌಡ ಅವರ ಸ್ವಾರ್ಥ ರಾಜಕಾರಣದಿಂದ ಕ್ಷೇತ್ರದಲ್ಲಿ ಬೆರಳೆಣಿಕೆ ಒಕ್ಕಲಿಗರು ಬೆಳೆದಿದ್ದು, ಸಣ್ಣ ಕೋಮಿನವರು ಧ್ವನಿ ಎತ್ತಲಾಗದ ಸ್ಥಿತಿ ನಿರ್ಮಾಣಗೊಂಡಿತ್ತು. ಸಣ್ಣ ಕೋಮಿನವರ ಸಂಕಟವನ್ನು ಹತ್ತಿರದಿಂದ ಬಲ್ಲ ನಾನು ಈ ಸಮುದಾಯಗಳಿಗೆ ಹೆಚ್ಚಿನ ಶಕ್ತಿ ತುಂಬಿಸುವ ಕೆಲಸ ಮಾಡಿದ್ದೇನೆ’ ಎಂದರು.
‘ಜಿ.ಟಿ.ದೇವೇಗೌಡ ಮತ್ತು ಹರೀಶ್ ಗೌಡ ಪ್ರತಿ ಚುನಾವಣೆಯಲ್ಲೂ ಸ್ವಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಹುನ್ನಾರ ನಡೆಸಿರುವುದು ಗೋಪ್ಯವಾಗಿ ಉಳಿದಿಲ್ಲ. ಇವರ ರಾಜಕೀಯ ಚದುರಂಗದಾಟಕ್ಕೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ದೇವಗಳ್ಳಿ ಸೋಮಶೇಖರ್ ಬಲಿಯಾದರು. ರಾಜಕೀಯ ನೀತಿ ಇಲ್ಲದೆ ತಮಗೆ ಬೇಕಾದಂತೆ ನಡೆದುಕೊಳ್ಳುವ ವ್ಯಕ್ತಿಗೆ ಕ್ಷೇತ್ರದ ಒಕ್ಕಲಿಗ ಸಮುದಾಯ ಬೆಂಬಲಿಸುವುದಿಲ್ಲ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.
ಜಿ.ಟಿ.ದೇವೇಗೌಡರ ಬೆಂಬಲಿಗ ರಾಗಿದ್ದ ಮಾವಿನಹಳ್ಳಿ ಸಿದ್ದೇಗೌಡ, ಮಾದೇಗೌಡ, ಬೀರಿಹುಂಡಿ ಬಸವಣ್ಣ ಅವರು ಜಿಟಿಡಿ ವಿರುದ್ಧ ಹರಿಹಾಯ್ದರು.
ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ವಿಜಯಕುಮಾರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣ್, ರಮೇಶ್, ದೇವರಾಜ್, ಒಕ್ಕಲಿಗ ಮುಖಂಡ ವೆಂಕಟೇಶ್, ಸುನಿತಾ ಜಯರಾಮೇಗೌಡ, ಶ್ವೇತಾ, ರಾಜು ಶಿವರಾಜೇಗೌಡ, ಬಿಳಿಕೆರೆ ಬಾಬು, ಹಿರಿಕ್ಯಾತನಹಳ್ಳಿ ಸುರೇಶ್, ಗದ್ದಿಗೆ ದೇವರಾಜ್, ಜವರೇಗೌಡ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.