ಮೈಸೂರು: ‘ಮೈಸೂರು ಮಹಾನಗರ ಪಾಲಿಕೆಯನ್ನು ‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ಯನ್ನಾಗಿ ಮೇಲ್ದರ್ಜೆಗೇರಿಸಬೇಕು ಹಾಗೂ ನಗರಕ್ಕೆ ಹೊಂದಿಕೊಂಡಿರುವ ಬಡಾವಣೆಗಳನ್ನು ಆ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ದಸರಾ ಮಹೋತ್ಸವ ಉನ್ನತ ಸಮಿತಿ ಸಭೆಯಲ್ಲಿ ಚರ್ಚಿಸಿದ್ದಾರೆ.
‘ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಒಳಗೆ ಬರುವ ಮೈಸೂರು ತಾಲ್ಲೂಕಿನ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಇದೆ. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಬಡಾವಣೆಗಳು ಕೂಡ ಅಭಿವೃದ್ಧಿಗೊಂಡಿದ್ದು, ನಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಆ ಬಡಾವಣೆಗಳನ್ನು ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು. ಅಂತೆಯೇ ಅವುಗಳಿಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಲ್ಲಿನ ಬಡಾವಣೆಗಳನ್ನೂ ಪಾಲಿಕೆಗೆ ಸೇರಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ’ ಎಂದು ಹೇಳಿದ್ದಾರೆ.
‘ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಅಧಿನಿಯಮ-1976ರ ಸೆಕ್ಷನ್ 4 ಮತ್ತು ಸೆಕ್ಷನ್ 500ರಲ್ಲಿ ದೊಡ್ಡ ನಗರ ಪ್ರದೇಶಗಳಲ್ಲಿ ಕೆಲವೊಂದು ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಪ್ರದೇಶಗಳನ್ನು ಸೇರಿಸಿಕೊಳ್ಳಲು ಹಾಗೂ ಕೈಬಿಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಬೃಹತ್ ಮಹಾನಗರ ಪಾಲಿಕೆಯನ್ನಾಗಿ ರಚನೆ ಮಾಡುವ ಸಂಬಂಧ ಎಲ್ಲೆಯನ್ನು ಗುರುತಿಸಿ 2018ರ ವಾರ್ಡ್ ಪುನರ್ ವಿಂಗಡಣೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಸದ್ಯ ಮಹಾನಗರ ಪಾಲಿಕೆಯು 86.31.ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಿದೆ’ ಎಂದು ಹೇಳಿದ್ದಾರೆ.
ಸರ್ಕಾರದಿಂದ ಅನುಮೋದನೆಗೊಂಡಿರುವ 2018ರ ವಾರ್ಡ್ ಪುನರ್ ವಿಂಗಡಣೆ ಅನ್ವಯ ಹೂಟಗಳ್ಳಿ, ರಮ್ಮನಹಳ್ಳಿ ಹಾಗೂ ಶ್ರೀರಾಂಪುರ ಪ್ರದೇಶದ ಭಾಗಶಃ ಗ್ರಾಮಗಳು ಪಾಲಿಕೆಯ ಎಲ್ಲೆಯೊಳಗೆ ಬರುತ್ತಿವೆ. ಸರ್ಕಾರದ ಅಧಿಸೂಚನೆ ಅನ್ವಯ ಪಾಲಿಕೆಯ ವಾರ್ಡ್ ನಂ.1, 2, 3, 4, 5, 20ರ ಹೆಬ್ಬಾಳು ಪ್ರದೇಶವು ಹೂಟಗಳ್ಳಿ ನಗರಸಭೆಯ ವ್ಯಾಪ್ತಿಗೆ ಸೇರಿದೆ. ವಾರ್ಡ್ ನಂ. 35ರ ಸಾತಗಳ್ಳಿ ಪ್ರದೇಶವು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗೆ ಹಾಗೂ ವಾರ್ಡ್ ನಂ. 65ರ ಶ್ರೀರಾಂಪುರ ಪ್ರದೇಶವು ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಸೇರುತ್ತದೆ.
ಈ ಸಂಬಂಧ ಹೂಟಗಳ್ಳಿ ನಗರಸಭೆ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಹಾಗೂ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಕಚೇರಿಗಳಿಂದ ಈಗಾಗಲೇ ಸರ್ಕಾರದಿಂದ ಅನುಮೋದನೆಗೊಂಡಿರುವ-2018ರ ವಾರ್ಡ್ ಪುನರ್‌ವಿಂಗಡಣೆ ನಕ್ಷೆಯ ಅನ್ವಯ ಪಾಲಿಕೆಯ ವ್ಯಾಪ್ತಿಯೊಳಗೆ ಸೇರಿರುವ ಪ್ರದೇಶಗಳನ್ನು ಕೈಬಿಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದಾಗಿ ತಿಳಿದುಬಂದಿದೆ ಎಂದು ಜಿಟಿಡಿ ಮಾಹಿತಿ ನೀಡಿದ್ದಾರೆ.
ಗಡಿರೇಖೆಯು ಸರ್ಕಾರದ ಅಧಿಸೂಚನೆಯಂತೆ ಹಾಗೂ 2018ರ ವಾರ್ಡ್ ಪುನರ್‌ವಿಂಗಡಣೆಯಂತೆ ಸಮಗ್ರ ನಕ್ಷೆ ತಯಾರಿಸಲಾಗಿದೆ. ಅದರಂತೆ ಪಾಲಿಕೆಯ ಹಾಲಿ ವಿಸ್ತೀರ್ಣ 86.31 ಚ.ಕಿ.ಮೀ. ಪ್ರದೇಶಕ್ಕೆ ಚಾಮುಂಡಿಬೆಟ್ಟ ಗ್ರಾಮ ಪಂಚಾಯಿತಿ, ಆಲನಹಳ್ಳಿ ಗ್ರಾಮ ಪಂಚಾಯಿತಿ, ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ, ಹೂಟಗಳ್ಳಿ ನಗರಸಭೆ, ಬೋಗಾದಿ ಪಟ್ಟಣ ಪಂಚಾಯಿತಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಇಲವಾಲ ಗ್ರಾಮ ಪಂಚಾಯಿತಿ ಒಳಗೊಂಡಂತೆ ಒಟ್ಟು 187.01 ಚ.ಕಿ.ಮೀ ಪ್ರದೇಶವನ್ನು ಪಾಲಿಕೆಯ ವ್ಯಾಪ್ತಿಗೆ ಸೇರಿಸಿದರೆ ಪ್ರಸ್ತಾವಿತ ಬೃಹತ್ ಮೈಸೂರು ಮಹಾನಗರ ಪಾಲಿಕೆ ಒಟ್ಟಾರೆ ವಿಸ್ತೀರ್ಣವು 273.32 ಚ.ಕಿ.ಮೀ ಆಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಏಕೆ ಅಗತ್ಯ? ‘ಚಾಮುಂಡಿಬೆಟ್ಟ ಗ್ರಾ.ಪಂ. ಆಲನಹಳ್ಳಿ ಗ್ರಾ.ಪಂ. ಸಿದ್ದಲಿಂಗಪುರ ಗ್ರಾ.ಪಂ. ಹೂಟಗಳ್ಳಿ ನಗರಸಭೆ ಬೋಗಾದಿ ಪಟ್ಟಣ ಪಂಚಾಯಿತಿ ಶ್ರೀರಾಂಪುರ ಪಟ್ಟಣ ಪಂಚಾಯಿತಿ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಇಲವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಯೋಜನಾಬದ್ಧ ನಗರದ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಸಲುವಾಗಿ ಮೈಸೂರು ಮಹಾನಗರ ಪಾಲಿಕೆಗೆ ಸೇರಿಸಿಕೊಂಡು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೇಗೇರಿಸಬೇಕು’ ಎಂದು ಜಿಟಿಡಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.