ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅತ್ಯಧಿಕ ಮಳೆ ದಾಖಲು

ರಾಜ್ಯದ ವಿವಿಧೆಡೆ ವರುಣನ ಆರ್ಭಟ l ಒಣಗಲಾರಂಭಿಸಿದ್ದ ಅಡಿಕೆ ತೋಟಗಳಿಗೆ ಜೀವಕಳೆ
Published 20 ಮೇ 2024, 23:30 IST
Last Updated 20 ಮೇ 2024, 23:30 IST
ಅಕ್ಷರ ಗಾತ್ರ

ಮೈಸೂರು/ಮಂಗಳೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ರಾಜ್ಯದಲ್ಲೇ ಅತ್ಯಧಿಕ ಮಳೆ ಪ್ರಮಾಣ ದಾಖಲಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಕೆಲವೆಡೆಯೂ  ಮಳೆಯಾಗಿದೆ. 

ಕೊಡಗು ಜಿಲ್ಲೆಯ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಮೈಸೂರು, ಹುಣಸೂರು, ತಿ. ನರಸೀಪುರ ತಾಲ್ಲೂಕುಗಳಲ್ಲೂ ವರುಣ ಆರ್ಭಟಿಸಿದ್ದು, ಸೋಮವಾರ ಮಧ್ಯಾಹ್ನವೂ ಉತ್ತಮ ಮಳೆ ಸುರಿಯಿತು. ಹಳ್ಳಗಳು ತುಂಬಿ ಹರಿದಿದ್ದು, ಕೆರೆ–ಕಟ್ಟೆಗಳಲ್ಲಿ ನೀರಿನ ಸಂಗ್ರಹವಾಗತೊಡಗಿದೆ. ಕೆಲವೆಡೆ ಹೊಲಗಳಲ್ಲಿ ನೀರು ನಿಂತಿದೆ.

ಚಾಮರಾಜನಗರ ಜಿಲ್ಲೆಯಾದ್ಯಂತ ಇಡೀ ದಿನ ಬಿರುಸಿನ ಮಳೆಯಾಗಿದೆ. ಕೊಳ್ಳೇಗಾಲ ನಗರ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ, ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು, ಬೆಟ್ಟದ ತಪ್ಪಲಿನಲ್ಲಿರುವ ಗೇಟ್‌ ಪ್ರದೇಶದ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದಿದೆ.

ಹಾಸನ ಜಿಲ್ಲೆಯ ಹಾಸನ, ಹೊಳೆನರಸೀಪುರ ಅರಕಲಗೂಡು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ  ಕೊಣನೂರು ಸುತ್ತಲಿನ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆ ಸುರಿಯಿತು. 

ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿ, ಚೆಂಬು, ಪೆರಾಜೆ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದೆ. ಮಡಿಕೇರಿ ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಸೋಮವಾರಪೇಟೆಯಲ್ಲೂ ಉತ್ತಮ ಮಳೆಯಾಗಿದೆ.‌

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿ ಧಾರಾಕಾರ ಮಳೆ ಸುರಿದಿದೆ. ಹಳ್ಳ–ಕೊಳ್ಳಗಳು ತುಂಬಿ ಹರಿದಿವೆ. ಒಣಗಲಾರಂಭಿಸಿದ್ದ ಅಡಿಕೆ ತೋಟಗಳಿಗೆ ಮಳೆನೀರು ಜೀವಕಳೆ ತಂದಿದೆ. ಚಿಕ್ಕಮಗಳೂರು, ಚೌಳಹಿರಿಯೂರು, ಅಮೃತಾಪುರ, ಹಿರೇನಲ್ಲೂರು, ಪಂಚನಹಳ್ಳಿ ಸುತ್ತಮುತ್ತ ಜೋರು ಮಳೆಯಾಗಿದೆ.

ಹೊಸಪೇಟೆ/ ಬಳ್ಳಾರಿ ವರದಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆ ಕೆಲವೆಡೆ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಹೋಬಳಿಯ ಹೊಸಹಳ್ಳಿ ಸೇತುವೆಯ ಒಂದು ಬದಿ ಭಾಗಶಃ ಕುಸಿದಿದೆ. 

ತುಮಕೂರು ವರದಿ: ಜಿಲ್ಲೆಯಲ್ಲಿ ಸೋಮವಾರ ಸಹ ನಗರದಲ್ಲಿ ಒಂದು ತಾಸಿಗೂ ಹೆಚ್ಚು ಮಳೆ ಸುರಿಯಿತು. 

ನಗರದಲ್ಲಿ ಸಂಜೆ 4 ಗಂಟೆಗೆ ಆರಂಭವಾದ ಮಳೆ ಒಂದು ತಾಸು ಸುರಿಯಿತು. ನಂತರ ಜಿಟಿಜಿಟಿ ಮಳೆ ಮುಂದುವರಿದಿತ್ತು. 

ಶಿರಾ ನಗರದಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು 18ನೇ ವಾರ್ಡ್‌ನ ಬೇಗಂ ಮೊಹಲ್ಲಾದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. 

ಬಿತ್ತನೆಗೆ ಅಡ್ಡಿ: ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆ ಬೀಳುತ್ತಿರುವ ಕಾರಣ ಕೆಲ ಭಾಗಗಳಲ್ಲಿನ ತೋಟ, ಹೊಲ ಮತ್ತು ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ. ರೈತರು ಹೆಜ್ಜೆ ಇಡದಷ್ಟು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ.

ಮೈಸೂರಿನ ಡಾ. ಶಿವಕುಮಾರ ಸ್ವಾಮೀಜಿ ವೃತದಲ್ಲಿ ಸೋಮವಾರ ಸುರಿದ ಮಳೆಯಲ್ಲೇ ಬೈಸಿಕಲ್ ಸವಾರರೊಬ್ಬರು ಸಾಗಿದರು. -ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೈಸೂರಿನ ಡಾ. ಶಿವಕುಮಾರ ಸ್ವಾಮೀಜಿ ವೃತದಲ್ಲಿ ಸೋಮವಾರ ಸುರಿದ ಮಳೆಯಲ್ಲೇ ಬೈಸಿಕಲ್ ಸವಾರರೊಬ್ಬರು ಸಾಗಿದರು. -ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT