ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿ.ನರಸೀಪುರ ಬಳಿ ಕಾರು –ಖಾಸಗಿ ಬಸ್ ಅಪಘಾತ: 10 ಮಂದಿ ಸಾವು

Published : 29 ಮೇ 2023, 11:40 IST
Last Updated : 29 ಮೇ 2023, 11:40 IST
ಫಾಲೋ ಮಾಡಿ
Comments

ತಿ.ನರಸೀಪುರ (ಮೈಸೂರು ಜಿಲ್ಲೆ):  ತಾಲ್ಲೂಕಿನ ಕುರುಬೂರು ಸಮೀಪದ ಪಿಂಜರಾ‍ಪೋಲ್‌ ಬಳಿ, ಮೈಸೂರು–ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ಸೋಮವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿ, ಮೂವರು ಮಕ್ಕಳು, ಮೂವರು ಮಹಿಳೆಯರು ಸೇರಿ 10 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ ಮಂಜುನಾಥ್ (35), ಪೂರ್ಣಿಮಾ (30), ಪವನ್ (10), ಕಾರ್ತಿಕ್ (8), ಸಂದೀಪ್ (24), ಸುಜಾತಾ (40), ಕೊಟ್ರೇಶ್ (45), ಗಾಯತ್ರಿ (35), ಶ್ರಾವ್ಯಾ (3) ಹಾಗೂ ಚಾಲಕ ಶ್ರೀರಂಗಪಟ್ಟಣದ ಆದಿತ್ಯ (40) ಮೃತರು.

ಮಹದೇಶ್ವರ ಬೆಟ್ಟ ಹಾಗೂ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿತು. 8 ಮಂದಿ ಸ್ಥಳದಲ್ಲೇ ಹಾಗೂ ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು.

ಕೊಳ್ಳೇಗಾಲದ ಕಡೆಯಿಂದ ಬರುತ್ತಿದ್ದ ಕಾರು, ತಿ.ನರಸೀಪುರದಿಂದ ಹೋಗುತ್ತಿದ್ದ ಬಸ್‌ಗೆ ಡಿಕ್ಕಿಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸಂಗನಕಲ್ಲು ಗ್ರಾಮದ 3 ಕುಟುಂಬಗಳು ಮೇ 27ರಂದು ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದವು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹಗಳು ಛಿದ್ರಗೊಂಡಿವೆ. ಬಸ್‌ನ ಮುಂಭಾಗವೂ ಜಖಂಗೊಂಡಿದೆ. ಅದರಲ್ಲಿದ್ದ ಕೆಲವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆದಿದ್ದಾರೆ.

‘ಕಾರಿನ ಚಾಲಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದವರು. ಗಾಯಗೊಂಡಿರುವ ಶಶಿಕುಮಾರ್ (24), ಪುನೀತ್ (4), ಜನಾರ್ದನ್‌ (45) ಬಾನು (17), ಗೌರವ್(6) ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ನಗರದ  ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಎಸ್ಪಿ ಸೀಮಾ ಲಾಟ್ಕರ್‌ ತಿಳಿಸಿದ್ದಾರೆ.

ಡಿಕ್ಕಿಯಾದ ರಭಸಕ್ಕೆ ಕಾರ್‌ನಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಪೊಲೀಸರು ಹರಸಾಹಸಪಟ್ಟರು. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಪಘಾತದ ಸ್ಥಳಕ್ಕೆ ಹಾಗೂ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. 

ಶವಗಳನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದ್ದು, ಮಂಗಳವಾರ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ ₹ 50ಸಾವಿರ ನೆರವು ನೀಡಲಾಗುವುದು.
ಡಾ.ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

ತಲಾ ₹ 2 ಲಕ್ಷ ಪರಿಹಾರ

ಘಟನೆಗೆ ಸಂಕಟ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತರಾದವರ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದಲೂ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹ 50ಸಾವಿರ ಪರಿಹಾರ ನೀಡಲಾಗುವುದು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ ತಿಳಿಸಿದೆ.

ಗ್ರಾಮಸ್ಥರು, ಸಾರ್ವಜನಿಕರ ಆಕ್ರೋಶ

‘ರಾಷ್ಟ್ರೀಯ ಹೆದ್ದಾರಿಯ ಹಲೆವೆಡೆ ತಿರುವುಗಳಲ್ಲಿ ಹಾಗೂ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ತೆರವುಗೊಳಿಸದೇ ಇರುವುದರಿಂದಲೇ ಅಪಘಾತಗಳು ಸಂಭವಿಸುತ್ತಿವೆ. ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ’ ಎಂದು ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಸಿದ್ದೇಶ್, ವೀರೇಶ್ ಹಾಗೂ ಶಿವಪ್ರಸಾದ್ ಆರೋಪಿಸಿದರು.

ಬಲಗಡೆ ಚಲಿಸಿದ ಕಾರು

ಕಾರು ರಸ್ತೆಯ ಬಲಗಡೆಗೆ ಬಂದು ಬಸ್‌ಗೆ ಡಿಕ್ಕಿಯಾದ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಸ್‌ನಲ್ಲಿ ಹಾಕಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT