ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯ, ಮಾಂಸಾಹಾರ ಮುಕ್ತ ರಾಜಭವನಕ್ಕೆ ಆದೇಶ: ಸಿ.ಎಚ್. ವಿಜಯಶಂಕರ್‌

Published 25 ಆಗಸ್ಟ್ 2024, 10:06 IST
Last Updated 25 ಆಗಸ್ಟ್ 2024, 10:06 IST
ಅಕ್ಷರ ಗಾತ್ರ

ಮೈಸೂರು: ‘ಶಿಲ್ಲಾಂಗ್‌ನಲ್ಲಿರುವ ರಾಜಭವನವನ್ನು ಮಾಂಸಾಹಾರ ಮತ್ತು ಮದ್ಯಪಾನದಿಂದ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ನಾನು ಇಲ್ಲಿರುವವರೆಗೂ ಇದು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಎಂಬ ಸೂಚನೆಯನ್ನೂ ನೀಡಿದ್ದೇನೆ’ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್‌ ತಿಳಿಸಿದರು.

ಇಲ್ಲಿನ ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ನಡೆದ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಪೀಠಾಧಿಪತಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 109ನೇ ಜಯಂತಿ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಎಲ್ಲಿಯ ಮೈಸೂರು, ಎಲ್ಲಿಯ ಮೇಘಾಲಯ? ಮೈಸೂರಿನವನಾದ ನನ್ನನ್ನು ಅಲ್ಲಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿಕೊಟ್ಟಿದ್ದಾರೆ. ಮೈಸೂರು ಮತ್ತು ಮೇಘಾಲಯದ ಸಂಬಂಧ ನಾನು ರಾಜ್ಯಪಾಲ ಆಗಿರುವಷ್ಟು ಅವಧಿಯದ್ದಷ್ಟೆ ಆಗಬಾರದು. ಅದು ಮುಂದುವರಿಯಬೇಕು. ಇದಕ್ಕಾಗಿ ಶಿಲ್ಲಾಂಗ್ ಹಾಗೂ ಸುತ್ತೂರು ಮಠದ ನಡುವೆ ಶಾಶ್ವತ ಸೇತುವೆ ಕಟ್ಟವ ಬಯಕೆ ನನ್ನದು. ಅದಕ್ಕಾಗಿ ಶ್ರೀಮಠ ಹಾಗೂ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಅಲ್ಲಿಗೆ ಪ್ರವೇಶಿಸಬೇಕು. ಇಲ್ಲಿನ ಕಲ್ಯಾಣ ಕಾರ್ಯಕ್ರಮವನ್ನು ಅಲ್ಲಿನ ಜನರೂ ಕಾಣುವಂತಾಗಬೇಕು. ವಂಚಿತರೂ ಸೇವೆ ಪಡೆಯುವಂತಾಗಬೇಕು’ ಎಂದು ವೇದಿಕೆಯಲ್ಲಿದ್ದ ಶ್ರೀಗಳನ್ನು ಆಹ್ವಾನಿಸಿದರು.

‘ಸಾಮಾನ್ಯ ಜನರಿಗೆ ರಾಜಭವನದ ಬಾಗಿಲು ತೆಗೆಯಿರಿ, ಜನಸಾಮಾನ್ಯರ ಬಳಿಗೆ ಹೋಗಿ ಎಂದು ಪ್ರಧಾನಿ ನನಗೆ ತಿಳಿಸಿದ್ದಾರೆ. ನೀವು ಜನಸಾಮಾನ್ಯರ ರಾಜ್ಯಪಾಲ ಆಗಬೇಕು, ಆದಿವಾಸಿಗಳ ಬಳಿಗೆ ಹೋಗಬೇಕು, ಜನರೊಂದಿಗೆ ಬೆರೆಯಬೇಕು ಎಂದೂ ಸೂಚಿಸಿದ್ದಾರೆ. ಇದಕ್ಕಾಗಿ ಶ್ರಮಿಸುತ್ತೇನೆ. ಯಾವುದೇ ಕಾರಣಕ್ಕೂ ಮೈಸೂರಿಗೆ ಕೆಟ್ಟ ಹೆಸರು ಬಾರದಂತೆ ಗೌರವ ಕಾಪಾಡುವ ಕೆಲಸವನ್ನು ಮಾಡುತ್ತೇನೆ. ಮೈಸೂರು ನೆಲದ ಋಣ ತೀರಿಸುವ ಕೆಲಸವನ್ನೂ ಪ್ರಾಮಾಣಿಕವಾಗಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ವಿಜಯಶಂಕರ್‌ ಅವರು ರಾಜಭವನದ ಪಾವಿತ್ರ್ಯತೆ ಕಾಪಾಡುವ ಶಪಥ ಮಾಡಿರುವುದು ಶ್ಲಾಘನೀಯ’ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT