ಶನಿವಾರ, ಡಿಸೆಂಬರ್ 3, 2022
28 °C
ರಸ್ತೆ ಅಪಘಾತದಲ್ಲಿ ಐಬಿ ಅಧಿಕಾರಿ ಸಾವು

ಕೊಲೆ ಶಂಕೆ; ತನಿಖೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮಾನಸಗಂಗೋತ್ರಿ ಆವರಣದಲ್ಲಿ ಶುಕ್ರವಾರ ಸಂಜೆ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಆರ್.ಎನ್. ಕುಲಕರ್ಣಿ (82) ಸಾವು ಪ್ರಕರಣ ಹೊಸ ತಿರುವು ಪಡೆದಿದೆ. ಘಟನಾ ಸ್ಥಳದಲ್ಲಿ ಸಿಕ್ಕ ಮಾಹಿತಿ ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.‌

ನಗರದ ಶಾರದಾ ದೇವಿ ನಗರದ ನಿವಾಸಿಯಾಗಿದ್ದ ಕುಲಕರ್ಣಿ ಎಂದಿನಂತೆ ಶುಕ್ರವಾರ ಸಂಜೆ ವಾಯುವಿಹಾಕ್ಕಾಗಿ ಕಾರಿನಲ್ಲಿ ಗಂಗೋತ್ರಿ ಕ್ಯಾಂಪಸ್‌ಗೆ ತೆರಳಿದ್ದರು. ಅವರ ವಾಹನ ಚಾಲಕ ಕಾರಿನೊಂದಿಗೆ ಕಾಯುತ್ತಿದ್ದರು. ಕಂಪ್ಯೂಟರ್‌ ಸೈನ್ಸ್‌ ವಿಭಾಗಕ್ಕೆ ಸಂಪರ್ಕ ಕಲ್ಪಿಸುವ ಕಿರಿದಾದ ರಸ್ತೆಯಲ್ಲಿ ಕುಲಕರ್ಣಿ ಅವರಿಗೆ ವಾಹನ ಡಿಕ್ಕಿ ಹೊಡೆದಿತ್ತು. ವಿಷಯ ತಿಳಿದ ಚಾಲಕ ಸ್ಥಳಕ್ಕೆ ದೌಡಾಯಿಸಿ, ತಕ್ಷಣ ಕಾಮಾಕ್ಷಿ ಆಸ್ಪತ್ರೆಗೆ ಅವರನ್ನು ಕರೆತಂದಿದ್ದರು.  ತಲೆಗೆ ತೀವ್ರ ತರವಾದ ಪೆಟ್ಟು ಬಿದ್ದಿದ್ದರಿಂದ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ್ದ ವಿ.ವಿ.ಪುರಂನ ಸಂಚಾರ ಪೊಲೀಸರು ಹಿಟ್‌ ಆ್ಯಂಡ್‌ ರನ್‌ ಪ್ರಕರಣ ದಾಖಲಿಸಿದ್ದರು. ಸುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ ವೇಳೆ, ಅತ್ಯಂತ ಯೋಜನಾಬದ್ಧವಾಗಿ ಕುಲಕರ್ಣಿ ಅವರ ದಾಳಿ ನಡೆಸಿದ್ದು ಕಂಡುಬಂದಿದೆ. ದ್ವಿಚಕ್ರ ವಾಹನ ಸವಾರರೇ ಸಂಚರಿಸಲು ಕಷ್ಟಪಡುವ ಅತ್ಯಂತ ಕಿರಿದಾದ ಜಾಗದಲ್ಲಿ ನೋಂದಣಿಯಾಗದ ಕಾರು ತೆರಳಿ ಪರಾರಿಯಾಗಿರುವುದು ಪ್ರಕರಣಕ್ಕೆ ಪುಷ್ಠಿ ನೀಡಿದೆ.

ಸ್ಥಳದಲ್ಲಿ ಸಿಕ್ಕ ಮಾಹಿತಿ ಆಧಾರಿಸಿ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಪ್ರಕರಣವನ್ನು ಜಯಲಕ್ಷ್ಮೀಪುರಂ ಠಾಣೆಗೆ ವರ್ಗಾಯಿಸಿದ್ದರು.

ಮೂರು ತಂಡ: ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಶನಿವಾರ ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತಾ ಹಾಗೂ ಡಿಸಿಪಿ ಪ‍್ರದೀಪ್‌ ಗುಂಟಿ ಭೇಟಿ ನೀಡಿದ್ದರು.

ಹಾವೇರಿ ಮೂಲದ ಕುಲಕರ್ಣಿ
ಹಾವೇರಿ ಜಿಲ್ಲೆ ಸವಣೂರಿನ ಆರ್.ಎನ್.ಕುಲಕರ್ಣಿ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ, ಮುಂಬೈನ ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪಡೆದಿದ್ದರು.

1963ರಲ್ಲಿ ಕೇಂದ್ರ ಸರಕಾರದ ಗುಪ್ತಚರ ಇಲಾಖೆ (ಐಬಿ) ಸೇರ್ಪಡೆಯಾಗಿ, ವಿವಿಧೆಡೆ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.

ವಾಯುಯಾನ ಸಂಶೋಧನಾ ಕೇಂದ್ರ(ಎಆರ್‌ಸಿ)ದಲ್ಲಿ, ವಿದೇಶಿ ಗುಪ್ತಚರ ಏಜೆನ್ಸಿಯ ಸಂಶೋಧನೆ ಮತ್ತು ವಿಶ್ಲೇಷಣೆ ದಳ(ರಾ)ದಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಓಸಿ) ಮಾರ್ಕೆಟಿಂಗ್ ವಿಭಾಗದಲ್ಲಿ ವಿಚಕ್ಷಣಾ ಮುಖ್ಯಸ್ಥರಾಗಿದ್ದರು.

‘ಆ್ಯಂಡ್‌ ಯೆಟ್‌ ಗಾಡ್ ಸ್ಮೈಲ್ಸ್’, ‘ಸಿನ್‌ ಆಫ್‌ ನ್ಯಾಷನಲ್‌ ಕಾನ್‌ಸೈನ್ಸ್‌’ ‘ಫೆಸೆಟ್ಸ್‌ ಆಫ್‌ ಟೆರರಿಸಮ್‌ ಇನ್‌ ಇಂಡಿಯಾ’ ಕೃತಿಗಳನ್ನು ರಚಿಸಿದ್ದರು.

ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ವಿದೇಶದಿಂದ ಬಂದ ನಂತರ ಅಂತ್ಯಕ್ರಿಯೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.