ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಬಿತ್ತನೆ ಬೀಜ ದರ ಹೆಚ್ಚಳ; ರೈತರಿಗೆ ತುಸು ಹೊರೆ

ಆಶಾದಾಯಕ ಪೂರ್ವ ಮುಂಗಾರು; ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳ ಪೂರೈಕೆ
ನವೀನ್‌ ಕುಮಾರ್‌ ಎನ್‌.
Published 1 ಜುಲೈ 2024, 7:43 IST
Last Updated 1 ಜುಲೈ 2024, 7:43 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಆಶಾದಾಯಕವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಕೃಷಿ ಇಲಾಖೆಯು ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳ ಪೂರೈಕೆ ಮಾಡುತ್ತಿದೆ. ಈ ಬಾರಿ ಬಿತ್ತನೆ ಬೀಜಗಳ ದರ ಶೇ 5ರಿಂದ 10ರಷ್ಟು ಹೆಚ್ಚಾಗಿದ್ದು, ರೈತರಿಗೆ ತುಸು ಹೊರೆ ಎನಿಸಿದೆ.

ಕೃಷಿ ಇಲಾಖೆಯಿಂದ ಜಿಲ್ಲೆಗೆ ಈ ವರ್ಷ ಒಟ್ಟು 2,900 ಕ್ವಿಂಟಾಲ್‌ನಷ್ಟು ಉದ್ದು, ಅಲಸಂದೆ, ಹೆಸರು, ನೆಲಗಡಲೆ, ಹೈಬ್ರಿಡ್ ಜೋಳ, ಮುಸುಕಿನಜೋಳ, ಸೂರ್ಯಕಾಂತಿ, ರಾಗಿ ಬಿತ್ತನೆ ಬೀಜ ಪೂರೈಕೆಯಾಗಿದೆ. ಈ ಪೈಕಿ 2,115.13 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ರೈತರಿಗೆ ಮಾರಾಟ ಮಾಡಿದ್ದು, 784.88 ಕ್ವಿಂಟಾಲ್ ಲಭ್ಯವಿದೆ.

ಅಲಸಂದೆ ಪ್ರತಿ ಕೆ.ಜಿ. ದರ ₹98, ಹೆಸರು ₹186, ತೊಗರಿ ₹179, ಉದ್ದು ₹157 ಇದ್ದು, ಸಾಮಾನ್ಯ ಸಬ್ಸಿಡಿ ₹25, ಪರಿಶಿಷ್ಟ ಜಾತಿ, ವರ್ಗದವರಿಗೆ ₹37 ಸಬ್ಸಿಡಿ ದೊರೆಯುತ್ತಿದೆ. ಮುಸುಕಿನ ಜೋಳ ಜಿಕೆ–3045 ದರ ₹142, ಜಿಕೆ–3018ಕ್ಕೆ ₹212 ಇದ್ದು, ಅನುಕ್ರಮವಾಗಿ ₹20, ₹30 ಸಬ್ಸಿಡಿ ಇದೆ. ರಾಗಿ ಜಿಪಿಯು–28, ಎಂಆರ್‌–6, ಎಂಆರ್‌–1, ಕೆಎಂಆರ್‌–301, ಎಂಎಲ್‌–365 ದರ ತಲಾ ₹65 ಇದ್ದು, ಅನುಕ್ರಮವಾಗಿ ₹18, ₹27 ಸಬ್ಸಿಡಿ ಇದೆ. ಭತ್ತ ತನು ದರ ₹46, ಎಂಟಿಯು–1001ಕ್ಕೆ ₹45.75, ಬಿಆರ್‌–2655ಕ್ಕೆ ₹48.50, ಜಯ ಹಾಗೂ ಐಆರ್‌–64ಕ್ಕೆ ₹46.50, ಆರ್‌ಎನ್‌ಆರ್‌–10548ಕ್ಕೆ ₹61.50, ಜ್ಯೋತಿ ₹54 ಇದ್ದು, ಅನುಕ್ರಮವಾಗಿ ₹8, ₹12 ಸಬ್ಸಿಡಿ ಇದೆ. ನೆಲಗಡಲೆ ₹114 ಇದ್ದು, ಅನುಕ್ರಮವಾಗಿ ₹18, ₹27 ಸಬ್ಸಿಡಿ ಇದೆ. ಸೂರ್ಯಕಾಂತಿ ₹940 ಇದ್ದು, ಅನುಕ್ರಮವಾಗಿ ₹80, ₹120 ಸಬ್ಸಿಡಿ ಇದೆ.

‘ಬಿತ್ತನೆ ಬೀಜಗಳ ದರ ಸ್ವಲ್ಪ ಹೆಚ್ಚಳವಾಗಿದ್ದು, ರೈತರಿಗೆ ನೀಡುತ್ತಿರುವ ಸಬ್ಸಿಡಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಈ ಬಾರಿ ಮುಸುಕಿನ ಜೋಳ ಹಾಗೂ ಅಲಸಂದೆಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆʼ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಿಗಾಗಿ ಕಾತರ: ಭತ್ತದ ಕಣಜ ಎಂದೇ ಖ್ಯಾತಿ ಪಡೆದ ಕೆ.ಆರ್.ನಗರ ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಭತ್ತ ಬೆಳೆಯಲು ಕಾಲುವೆಯ ನೀರನ್ನೇ ಅವಲಂಬಿಸಿರುವ ಬಹುತೇಕ ರೈತರು, ಜಮೀನು ಹದಗೊಳಿಸಲು, ನಾಟಿ ಕಾರ್ಯ ಕೈಗೊಳ್ಳಲು ಕಾಲುವೆಗೆ ನೀರು ಬಿಡುವುದನ್ನೇ ಕಾಯುತ್ತಿದ್ದಾರೆ. ಜುಲೈನಲ್ಲಿ ಕಾಲುವೆಯಲ್ಲಿನ ಹೂಳು ತೆಗೆದು ನೀರು ಬಿಡುವ ಸಾಧ್ಯತೆ ಇದೆ. ಏಕದಳ ಧಾನ್ಯ 13,457 ಹೆಕ್ಟೇರ್, ದ್ವಿದಳ ಧಾನ್ಯ 3,320, ಎಣ್ಣೆ ಕಾಳುಗಳು 400, ಕಬ್ಬು 1,100, ಹೊಗೆಸೊಪ್ಪು 5,600 ಸೇರಿದಂತೆ ಒಟ್ಟು 23,877 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ. ಈಗಾಗಲೇ ಮುಸುಕಿನ ಜೋಳ 700, ಅಲಸಂದೆ 2,350, ಹೊಗೆಸೊಪ್ಪು 5,500 ಸೇರಿದಂತೆ ಒಟ್ಟು 8,610 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳ ದಾಸ್ತಾನು ಇದೆ. ಮುಸುಕಿನಜೋಳ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಿದೆ. ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಅದಕ್ಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ.

ತಿ.ನರಸೀಪುರ ತಾಲ್ಲೂಕಿನಲ್ಲಿ ಪೂರ್ವ ಮುಂಗಾರಿನಲ್ಲಿ ಬೆಳೆಯುವ ಉದ್ದು, ಅಲಸಂದೆ, ನೆಲಗಡಲೆ, ಸೂರ್ಯಕಾಂತಿ, ಮುಸುಕಿನ‌ ಜೋಳ, ರಾಗಿ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಬಹುತೇಕ ರೈತರು ಪೂರ್ವ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಸೋಸಲೆ ಹೋಬಳಿ ಭಾಗದಲ್ಲಿ ಸೂರ್ಯಕಾಂತಿ, ಮುಸುಕಿನ‌ ಜೋಳಕ್ಕೆ ಹೆಚ್ಚಿನ ಬೇಡಿಕೆ ಇದೆ. ಮೂಗೂರು ಹೋಬಳಿ ವ್ಯಾಪ್ತಿಯ ಧರ್ಮಯ್ಯನಹುಂಡಿ, ಬನ್ನಹಳ್ಳಿಹುಂಡಿ, ಯರಗನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ನೆಲಗಡಲೆ ಬೆಳೆಗೆ ಒತ್ತು‌ ನೀಡಲಾಗಿದೆ.

‘ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮುಸುಕಿನ ಜೋಳದ ಬಿತ್ತನೆ ಬೀಜಕ್ಕೆ ಬೇಡಿಕೆಯಿದೆ. ತಾಲ್ಲೂಕಿನಲ್ಲಿ 100 ಕ್ವಿಂಟಾಲ್ ದಾಸ್ತಾನಿದ್ದು, 40 ಕ್ವಿಂಟಾಲ್ ಮಾತ್ರ ಮಾರಾಟವಾಗಿದೆ. ಖಾಸಗಿ ಮಾರಾಟಗಾರರು ಹಾಗೂ ಮುಸುಕಿನ ಜೋಳ ಖರೀದಿಸುವವರು ರೈತರಿಗೆ ಬಿತ್ತನೆ ಬೀಜ ಮಾರಾಟ ಮಾಡುವುದರಿಂದ ಕೃಷಿ ಇಲಾಖೆಯಿಂದ ಖರೀದಿ ಮಾಡುವವರ ಪ್ರಮಾಣದಲ್ಲಿ ಇಳಿಕೆಯಾಗಿದೆ. ತಂಬಾಕು ಬೆಳೆ ಪಡೆದುಕೊಂಡ ನಂತರ ರೈತರು ರಾಗಿ, ಭತ್ತ, ಹಲಸಂದೆ ಬೆಳೆಯುತ್ತಾರೆ. ಇಲಾಖೆ ಬಳಿ ಈಗಾಗಲೇ 400 ಕ್ವಿಂಟಾಲ್ ರಾಗಿ, 200 ಕ್ವಿಂಟಾಲ್ ಹಲಸಂದೆ, 300 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ದಾಸ್ತಾನಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ.ಪ್ರಸಾದ್ ತಿಳಿಸಿದರು.

ಪೂರಕ ಮಾಹಿತಿ: ಪಂಡಿತ್ ನಾಟಿಕರ್, ಸತೀಶ್ ಬಿ. ಆರಾಧ್ಯ, ಬಿ.ಆರ್‌. ಗಣೇಶ್‌, ಎಂ.ಮಹದೇವ್‌

ಎಚ್.ಡಿ.ಕೋಟೆ ತಾಲ್ಲೂಕಿನ ಸಿದ್ದಯ್ಯನಹುಂಡಿ ಗ್ರಾಮದ ರೈತ ಬಸವರಾಜು ಅವರ ಹೊಲದಲ್ಲಿ ರಾಗಿ ನಾಟಿ ಕಾರ್ಯದಲ್ಲಿ ತೊಡಗಿದ್ದ ಮಹಿಳೆ –ಪ್ರಜಾವಾಣಿ ಚಿತ್ರ/ ಸತೀಶ್‌ ಬಿ. ಆರಾಧ್ಯ
ಎಚ್.ಡಿ.ಕೋಟೆ ತಾಲ್ಲೂಕಿನ ಸಿದ್ದಯ್ಯನಹುಂಡಿ ಗ್ರಾಮದ ರೈತ ಬಸವರಾಜು ಅವರ ಹೊಲದಲ್ಲಿ ರಾಗಿ ನಾಟಿ ಕಾರ್ಯದಲ್ಲಿ ತೊಡಗಿದ್ದ ಮಹಿಳೆ –ಪ್ರಜಾವಾಣಿ ಚಿತ್ರ/ ಸತೀಶ್‌ ಬಿ. ಆರಾಧ್ಯ
ಜಿಲ್ಲೆಗೆ ಒಟ್ಟು 2,900 ಕ್ವಿಂಟಾಲ್‌ ಬಿತ್ತನೆ ಬೀಜ ಪೂರೈಕೆ ರೈತರಿಗೆ ನೀಡುತ್ತಿರುವ ಸಬ್ಸಿಡಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಈ ಬಾರಿ ಮುಸುಕಿನ ಜೋಳ, ಅಲಸಂದೆಗೆ ಹೆಚ್ಚಿನ ಬೇಡಿಕೆ
ಭತ್ತದ ಬಿತ್ತನೆ ಬೀಜಕ್ಕೆ ಪ್ರಸ್ತಾವ
‘ತಿ.ನರಸೀಪುರ ತಾಲ್ಲೂಕಿನಲ್ಲಿ ಈಗಾಗಲೇ ಪೂರ್ವ ಮುಂಗಾರಿಗೆ ಅನುಕೂಲವಾಗುವಂತೆ ಉದ್ದು ಮುಸುಕಿನ‌ಜೋಳ ಸೂರ್ಯಕಾಂತಿ ಬಿತ್ತನೆ ಬೀಜ ವಿತರಿಸಲಾಗಿದೆ.‌ ರೈತರು ಬೆಳೆ ತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ತಾಲ್ಲೂಕಿನ ‌ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಸಾಕಷ್ಟಿದೆ. ಮುಂಗಾರಿನಲ್ಲಿ ಭತ್ತದ ಬಿತ್ತನೆ ಬೀಜಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೃಷಿ ಚಟುವಟಿಕೆ ಆರಂಭವಾಗುತ್ತಿದ್ದಂತೆ ಬೀಜಗಳ ವಿತರಣೆ ಆರಂಭವಾಗಲಿದೆ. ರಸಗೊಬ್ಬರಗಳ ದಾಸ್ತಾನಿದ್ದು ಯಾವುದೇ ಕೊರತೆ ಇಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್.ಸುಹಾಸಿನಿ ತಿಳಿಸಿದರು.

ಯಾರು ಏನಂತಾರೆ? ಭತ್ತದ ಬಿತ್ತನೆ ಬೀಜ ಲಭ್ಯ ಬಿ.ಆರ್–2655 ಭತ್ತದ ತಳಿ 180 ಕ್ವಿಂಟಾಲ್ ಐ.ಆರ್–64 ತಳಿ 650 ಕ್ವಿಂಟಾಲ್ ಎಂ.ಟಿ.ಯು–1001 ತಳಿ 1100 ಕ್ವಿಂಟಾಲ್ ಜ್ಯೋತಿ 2000 ಕ್ವಿಂಟಾಲ್ ಉಮಾ 6500 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ಲಭ್ಯವಿದೆ.

-ಕೆ.ಜೆ.ಮಲ್ಲಿಕಾರ್ಜುನ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಕೆ.ಆರ್.ನಗರ

ಮುಂಚಿತವಾಗಿ ಬಿತ್ತನೆ ಬೀಜ ಕೊಡಿ 10–12 ಎಕರೆ ಜಮೀನಿನಲ್ಲಿ ರಾಗಿ ಹುರುಳಿ ಹುಚ್ಚೆಳ್ಳು ಅಲಸಂದೆ ಬೆಳೆ ಬಿತ್ತನೆ ಮಾಡಿದ್ದೇನೆ. ಕೃಷಿ ಇಲಾಖೆಯಿಂದ ಕೊಡುವ ಬಿತ್ತನೆ ಬೀಜಕ್ಕಾಗಿ ಕಾಯುವುದಿಲ್ಲ. ಮುಂಚಿತವಾಗಿ ಬೀಜ ಕೊಟ್ಟರೆ ಮಳೆ ಬಂದಾಗ ಬಿತ್ತನೆ ಮಾಡಬಹುದು. ನಮಗೆ ಬೇಡದೇ ಇದ್ದಾಗ ಕೊಡುತ್ತಾರೆ. ಹೀಗಾಗಿ ನಾನೇ ಬಿತ್ತನೆ ಬೀಜವನ್ನು ಸಿದ್ಧಪಡಿಸಿಕೊಳ್ಳುತ್ತೇನೆ.

ಎಂ.ಸುರೇಶ್ ರೈತ ಮಾರಿಗುಡಿಕೊಪ್ಪಲು ಕೆ.ಆರ್.ನಗರ ತಾಲ್ಲೂಕು

ಬಿತ್ತನೆ ಬೀಜದ ಕೊರತೆ ಕಾಡಿಲ್ಲ ದ್ವಿದಳ ಧಾನ್ಯಗಳಾದ ಉದ್ದು ಅಲಸಂದೆ ಬಿತ್ತನೆ ಅವಧಿ ಬಹುತೇಕ ಮುಗಿದಿದೆ. ಮಳೆ ಸಮರ್ಪಕವಾಗಿ ಬಿದ್ದರೆ ರಾಗಿ ಹುರುಳಿ ಮುಸುಕಿನ ಜೋಳ ಬಿತ್ತನೆ ಕಾರ್ಯ ಮತ್ತಷ್ಟು ಚುರುಕು ಪಡೆಯಬಹುದು. ಬಿತ್ತನೆ ಬೀಜದ ಕೊರತೆ ಪೂರೈಕೆ ಸಮಸ್ಯೆ ಬಗ್ಗೆ ರೈತರಿಂದ ದೂರು ಬಂದಿಲ್ಲ. ಹೊಸಕೋಟೆ ಬಸವರಾಜ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೈತ ಸಂಘ ಸಾಕಷ್ಟು ಬಿತ್ತನೆ ಬೀಜ ಲಭ್ಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ. ಕೃಷಿ ಇಲಾಖೆ ಮತ್ತು ಖಾಸಗಿ ಮಾರಾಟಗಾರರಿಂದ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜ ಸಿಗುತ್ತಿದೆ.

ಗೋವಿಂದೇಗೌಡ ಹಾರನಹಳ್ಳಿ ಪಿರಿಯಾಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT