ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಗೆ ರಾಜ್ಯದವರೇ ಆಯ್ಕೆಯಾಗಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Published 26 ಆಗಸ್ಟ್ 2023, 13:52 IST
Last Updated 26 ಆಗಸ್ಟ್ 2023, 13:52 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುವಾಗ ಆಯಾ ರಾಜ್ಯದವರೇ ಆಗಿರಬೇಕು ಎಂಬ ಕಾನೂನು ತರಬೇಕು. ಇಲ್ಲದಿದ್ದರೆ ರಾಜ್ಯಗಳಿಗೆ ಅನುಕೂಲ ಆಗುವುದಿಲ್ಲ’ ಎಂದು ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಅಂಬೇಡ್ಕರ್ ಪೀಠ ಮತ್ತು ಇಂಡಿಯನ್ ಪಾಲಿಟ್ ಫೋರಂ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಕ್ಷೇತ್ರ ಪುನರ್‌ವಿಂಗಡಣೆ: ಅಂತರರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ರಾಜ್ಯಸಭಾ ಸದಸ್ಯರಾದ ನಂತರ ಅವರು ದೆಹಲಿಯಲ್ಲೇ ಕೂರಬೇಕೆಂದೇನಿಲ್ಲ. ಪ್ರತಿನಿಧಿಸುವ ರಾಜ್ಯದ ಜನರಿಗೆ ಉತ್ತರ ಕೊಡಬೇಕಾಗುತ್ತದೆ. ಅವರು ಚುನಾಯಿತರೋ ಅಥವಾ ನಾಮನಿರ್ದೇಶನಗೊಂಡವರೋ ಇಲ್ಲಿನ ಸಮಸ್ಯೆಗಳಿಗೆ ದನಿಯಾಗಬೇಕಾಗುತ್ತದೆ. ತಮ್ಮ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ’ ಎಂದರು.

‘ಲೋಕಸಭೆಯಲ್ಲಿ ಚರ್ಚೆಯಾದುದ್ದನ್ನು ಮತ್ತಷ್ಟು ಚರ್ಚಿಸಲು ಹಾಗೂ ಅನುಮೋದಿಸಲು ರಾಜ್ಯಸಭೆಗೆ ಕಳುಹಿಸುತ್ತೇವೆ. ಏಕೆಂದರೆ ಅಲ್ಲಿ ವಿಚಾರವಂತರು ಇರುತ್ತಾರೆ ಎಂಬ ಕಾರಣದಿಂದ. ಆದರೆ, ಅಲ್ಲಿಗೆ ಎಂಥವರನ್ನು ಕಳುಹಿಸುತ್ತಿದ್ದೇವೆ ಎನ್ನುವುದೂ ಮುಖ್ಯವಾಗುತ್ತದೆ. ಅವರು ರಾಜ್ಯದವರು ಆಗಿಲ್ಲದಿದ್ದರೆ, ಇಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅವರ ಕಳಕಳಿ ಇರುವುದಿಲ್ಲ. ಅವರು ಆಯ್ಕೆಯಾಗುತ್ತಾರೆ; ಆದರೆ, ಪ್ರತಿನಿಧಿಸುವ ರಾಜ್ಯಕ್ಕೆ ಬರುವುದೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂಸತ್‌ನಲ್ಲಿ ಚರ್ಚೆಯಲ್ಲಿ ಭಾಗವಹಿಸದವರು, ಸರಿಯಾಗಿ ಕ್ಷೇತ್ರಕ್ಕೆ ಹೋಗದವರು ಕೂಡ ಗೆಲ್ಲುತ್ತಿದ್ದಾರೆ. ಹಿಂದೆ ಮುತ್ಸದ್ದಿಗಳು ಇರುತ್ತಿದ್ದರು. ಜನಪ್ರತಿನಿಧಿಯು ಅಧಿವೇಶನದಲ್ಲಿ ಏನು ಮಾಡುತ್ತಿದ್ದಾರೆ, ಏನು ಪ್ರಶ್ನಿಸುತ್ತಿದ್ದಾರೆ ಎನ್ನುವುದನ್ನು ಜನರು ಸಹ ಗಮನಿಸಬೇಕು. ಬಜೆಟ್‌ ಅಧಿವೇಶನದಲ್ಲಿ ಅವರ ಕ್ಷೇತ್ರದ ರಸ್ತೆ ಹಾಗೂ ಸೇತುವೆ ಬಗ್ಗೆಯೇ ಮಾತನಾಡಿದರೆ ಅವರಿಗೆ ಏಕೆ ಆಯ್ಕೆಯಾಗಿದ್ದೇನೆ ಎನ್ನುವುದೇ ಅರ್ಥವಾಗಿಲ್ಲ ಎಂದೇ ಅರ್ಥ. ಸಮಗ್ರವಾಗಿ ಚರ್ಚಿಸುವ ಕೆಲಸವನ್ನು ಅವರು ಮಾಡುವುದಿಲ್ಲ. ಮತದಾರರಲ್ಲಿ ಜಾಗೃತಿ ಬರಬೇಕು. ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಅವರ ಜವಾಬ್ದಾರಿಯಾಗುತ್ತದೆ’ ಎಂದರು.

‘ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಸಂಪರ್ಕ ವ್ಯವಸ್ಥೆಯೇ ಸರಿ ಇಲ್ಲ. ಹೀಗಾಗಿ, ಸಂಸದರು ತಲುಪಲು ಕಷ್ಟವಾಗುತ್ತದೆ. ಪುನರ್‌ವಿಂಗಡಣೆ ಸಂದರ್ಭದಲ್ಲಿ ಇದೆಲ್ಲವನ್ನೂ ಗಮನಿಸಬೇಕಾಗುತ್ತದೆ. ಸ್ಯಾಟಲೈಟ್ ಚಿತ್ರಗಳನ್ನು ನೋಡಿ ಪರಿಗಣಿಸಿದರೆ ಸಾಕಾಗುವುದಿಲ್ಲ’ ಎಂದು ಹೇಳಿದರು.

ಎನ್‌ಐಟಿಟಿಇ ಶಿಕ್ಷಣ ಟ್ರಸ್ಟ್‌ ಶೈಕ್ಷಣಿಕ ನಿರ್ದೇಶಕ ಸಂದೀಪ್‌ ಶಾಸ್ತ್ರಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ವೈ.ರಫೀಕ್ ಅಹಮದ್ ಮಾತನಾಡಿದರು.

ಓದಿ... ಬಿಜೆಪಿಯಲ್ಲಿ ಈಗಿರುವುದು ಒಬ್ಬನೇ ಸಂಸದ, ಇನ್ನುಳಿದವರೆಲ್ಲ ಜೈ ಜೈ: ದೇವನೂರ ಮಹದೇವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT