ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲರೆ ಪ್ರಕರಣದಲ್ಲಿ ಅನ್ಯಾಯ; ದಸಂಸ

Published 17 ಮೇ 2024, 8:58 IST
Last Updated 17 ಮೇ 2024, 8:58 IST
ಅಕ್ಷರ ಗಾತ್ರ

ನಂಜನಗೂಡು: ‘ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ಅಂಬೇಡ್ಕರ್ ಅವರ ನಾಮ ಫಲಕ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಗಲಾಟೆಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ, ಹಾನಿಗೊಳಗಾಗಿರುವ ಮನೆಗಳಿಗೆ ನಾಲ್ಕು ತಿಂಗಳು ಕಳೆದರೂ ಸೂಕ್ತ ಪರಿಹಾರ ನೀಡಿಲ್ಲ’ ಎಂದು ದಲಿತ ಸಂಘಟನೆಗಳ ಒಕ್ಕೂಟ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ದಲಿತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಕಾರ್ಯ ಬಸವಣ್ಣ ಮಾತನಾಡಿ, ‘ತಾಲ್ಲೂಕು ಮತ್ತು ಜಿಲ್ಲಾಡಳಿತ ದಲಿತರನ್ನು ಕಡೆಗಣಿಸಿದೆ. ಅಂಬೇಡ್ಕರ್ ನಾಮಫಲಕ ವಿಚಾರದಲ್ಲಿ ಎಷ್ಟೇ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರು, ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೆವು. ಘಟನೆ ನಡೆದು ಐದು ತಿಂಗಳು ಕಳೆದರು ತಾಲ್ಲೂಕು ಆಡಳಿತ ಯಾವುದೇ ಕ್ರಮವನ್ನು ಕೈಗೊಳ್ಳದೆ ಇರುವುದು ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ವಿಚಾರವನ್ನು ಇನ್ನೊಂದು ವಾರದೊಳಗೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಚಳುವಳಿ ರೂಪಿಸಬೇಕಾಗುತ್ತದೆ’ ಎಂದು ತಿಳಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ.ವಿಜಯ್ ಕುಮಾರ್ ಮಾತನಾಡಿ, ‘ನಂಜನಗೂಡು ಒಂದು ಮೀಸಲು ಕ್ಷೇತ್ರ. ಇಲ್ಲಿ ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರೂ ದಲಿತರೇ. ಆದರೂ ಈ ವಿಷಯವಾಗಿ ಯಾರು ಇದುವರೆಗೂ ಮಾತನಾಡಿಲ್ಲ. ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲದಿದ್ದರೂ ನನ್ನ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ಪೊಲೀಸರಿಗೆ ಸೆಕ್ಷನ್‌ಗಳ ಬಗ್ಗೆ ಅರಿವು ಇಲ್ಲ’ ಎಂದು ಹರಿಹಾಯ್ದರು.

‘ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ನಡೆದ ಅಂಧಕಾಸುರನ ವಧೆ ಪ್ರಕರಣ ವಿಚಾರದಲ್ಲಿ ಯಾವುದೇ ರಾಜಕಾರಣಿ ಧ್ವನಿ ಎತ್ತುತ್ತಿಲ್ಲ. ದೇವರ ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿದ್ದಾರೆ ಎಂದು ಸುಳ್ಳು ಹೇಳಿ ಕೇಸ್ ದಾಖಲು ಮಾಡಿದ್ದಾರೆ. ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ಈ ವಿಚಾರಗಳ ಪರವಾಗಿ ಸರಿಯಾದ ನಿರ್ಧಾರವನ್ನು ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ದೇವರಸನಹಳ್ಳಿ ಪುಟ್ಟಸ್ವಾಮಿ, ಕಾರ್ಯ ಜಯಶಂಕರ್, ಕಳಲೆ ಕುಮಾರ್, ಹೊಸಹಳ್ಳಿ ಜಯರಾಮ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT