ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತೂರು ಸಾಮೂಹಿಕ ವಿವಾಹದಲ್ಲಿ ಸಾಮರಸ್ಯ: 9 ಅಂತರ್ಜಾತಿ, 2 ಅಂತರಧರ್ಮೀಯ ಜೋಡಿ

ಸುತ್ತೂರು ಜಾತ್ರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 114 ಜೋಡಿ
Last Updated 19 ಜನವರಿ 2023, 10:52 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಗುರುವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 9 ಅಂತರ್ಜಾತಿ, ಇಬ್ಬರು ಅಂತರ್ಧಮೀಯರು ಸೇರಿದಂತೆ ಒಟ್ಟು 114 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸಚಿವರು, ಶಾಸಕರು, ಹರಗುರು ಚರಮೂರ್ತಿಗಳು, ಪೋಷಕರು, ಬಂಧುಗಳು, ಮಿತ್ರರು ಹಾಗೂ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಸತಿ–ಪತಿಗಳಾದರು.

ವಿಶ್ವಕರ್ಮ–ವೀರಶೈವ ಲಿಂಗಾಯತ, ಆದಿಕರ್ನಾಟಕ– ವಿಶ್ವಕರ್ಮ, ಗೆಜ್ಜಗಾರಶೆಟ್ಟಿ– ಪರಿಶಿಷ್ಟ ಜಾತಿ, ‍ಪರಿಶಿಷ್ಟ ಪಂಗಡ– ವೀರಶೈವ ಲಿಂಗಾಯತ, ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ–ವೀರಶೈವ ಲಿಂಗಾಯತ, ಪ‍ರಿಶಿಷ್ಟ ಪಂಗಡ– ಆದಿಕರ್ನಾಟಕ, ಪರಿಶಿಷ್ಟ ಜಾತಿ– ಬಳೆಗಾರ ಶೆಟ್ಟಿ, ಒಕ್ಕಲಿಗ–ಪರಿಶಿಷ್ಟ ಜಾತಿಯ ವಧು–ವರರು ಜಾತಿಯನ್ನು ಮೀರಿ ಮದುವೆಯ ಬಂಧಕ್ಕೆ ಕಾಲಿಟ್ಟರು. ಪರಿಶಿಷ್ಟ ಜಾತಿಯ ವಧು ಕ್ರೈಸ್ತ ವರನನ್ನು ವರಿಸಿ ಗಮನಸೆಳೆದರು. ತಮಿಳುನಾಡಿನ ಒಂದು ಜೋಡಿ, ತಲಾ ಮೂರು ಜೋಡಿ ವಿಶೇಷ ವ್ಯಕ್ತಿಗಳು ದಂಪತಿಗಳಾದರು. ಮೂರು ಜೋಡಿ ವಿಧುರ–ವಿಧವೆಯವರು ವಿವಾಹವಾಗಿದ್ದು ವಿಶೇಷವಾಗಿತ್ತು. ಜಾತಿ, ಧರ್ಮದ ಎಲ್ಲೆಯನ್ನು ಮೀರಿ ಸಾಮರಸ್ಯಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.

ಉಳಿದಂತೆ, ವೀರಶೈವ ಲಿಂಗಾಯತ– 5, ಹಿಂದುಳಿದ ವರ್ಗ –6, ಉಪ್ಪಾರ– 3, ಪರಿಶಿಷ್ಟ ಜಾತಿ– 85, ಪರಿಶಿಷ್ಟ ಪಂಗಡದ 6 ಜೋಡಿ ಮದುವೆಯಾದರು. ಇವರಲ್ಲಿ ಬಹುತೇಕರು ಮೈಸೂರು, ಚಾಮರಾಜನಗರ ಜಿಲ್ಲೆಯವರು. ಜೊತೆಗೆ, ಕೋಲಾರ, ಬೆಂಗಳೂರು, ತುಮಕೂರು ಮತ್ತು ಮಂಡ್ಯ ಜಿಲ್ಲೆಯ ವಧು–ವರರೂ ಇದ್ದಾರೆ.

ಇದರೊಂದಿಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಈವರೆಗೆ 3,405 ಜೋಡಿಗಳು ವಿವಾಹವಾದಂತಾಗಿದೆ. ಎರಡು ದಶಕಗಳಿಂದಲೂ ಇಲ್ಲಿ ಸಾಮೂಹಿಕ ವಿವಾಹ ನಡೆಸಿಕೊಂಡು ಬರಲಾಗುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದವರ ನೆರವಿಗೆ ಶ್ರೀಮಠ ಬಂದಿದೆ.

ವರನಿಗೆ ಪಂಚೆ, ಶರ್ಟ್‌ ಹಾಗೂ ವಲ್ಲಿ, ವಧುವಿಗೆ ಸೀರೆ, ರವಿಕೆ, ಮಾಂಗಲ್ಯ, ಕಾಲುಂಗುರವನ್ನು ನೀಡಲಾಯಿತು. ಶಾಸ್ತ್ರೋಕ್ತವಾಗಿ ವಿಧಿವಿಧಾನ ನೆರವೇರಿಸಲಾಯಿತು.

ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೆಳಗಾವಿ ಜಿಲ್ಲೆ ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ವಾಸವಿ ವಿದ್ಯಾಪೀಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಸಚಿವರಾದ ಸಿ.ಸಿ.ಪಾಟೀಲ, ಎಸ್.ಟಿ.ಸೋಮಶೇಖರ್‌, ಶಾಸಕ ಎಸ್.ಎ.ರಾಮದಾಸ್, ಉದ್ಯಮಿ ಎಸ್.ಎಸ್.ಗಣೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಬಿ.ಪ್ರಭುದೇವ, ಎಸ್ಪಿ ಸೀಮಾ ಲಾಟ್ಕರ್, ಅಮೆರಿಕದ ಉದ್ಯಮಿ ಭಾರತಿ ರೆಡ್ಡಿ, ಕೊಯಮತ್ತೂರಿನ ಕೈಗಾರಿಕೋದ್ಯಮಿ ತಿರುಮಲೈ ತಂಬು, ಜೆ.ಕೆ.ಟೈರ್ಸ್‌ನ ಉಪಾಧ್ಯಕ್ಷ ವುಪ್ಪು ಈಶ್ವರರಾವ್ ನೂತನ ದಂಪತಿಯನ್ನು ಹರಸಿದರು. ವಿದ್ವಾನ್ ಮಲ್ಲಣ್ಣ ವಿಧಿವಿಧಾನಗಳನ್ನು ನೆರವೇರಿಸಿದರು.

ಇದಕ್ಕೂ ಮುನ್ನ ವಧು–ವರರನ್ನು ಶಿವರಾತ್ರೀಶ್ವರ ಶಿವಯೋಗಿಗಳ ಗದ್ದುಗೆಯಿಂದ ಮೆರವಣಿಗೆಯಲ್ಲಿ ಕರೆತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT