ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಅಭಿವೃದ್ಧಿಗೆ ಸಮತೋಲನ ಅಗತ್ಯ: ಪಿ.ಜಿ.ಯೋಗೀಂದ್ರ

Last Updated 24 ನವೆಂಬರ್ 2022, 10:33 IST
ಅಕ್ಷರ ಗಾತ್ರ

ಮೈಸೂರು: ‘ಆರ್ಥಿಕ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು’ ಎಂದು ಎಚ್‌ಎಎಲ್‌ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ‌ ಪಿ.ಜಿ.ಯೋಗೀಂದ್ರ ಹೇಳಿದರು.

ಇಲ್ಲಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಎಸ್‌ಡಿಎಂಐಎಂಡಿಯಲ್ಲಿ ‘ಆರ್ಥಿಕ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿ: ಹೊರಹೊಮ್ಮುತ್ತಿರುವ ಪ್ರವೃತ್ತಿಗಳು’ ವಿಷಯದ ಕುರಿತು ಗುರುವಾರ ಆಯೋಜಿಸಿದ್ದ 7ನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್ಥಿಕ, ಸಾಮಾಜಿಕ ‌ಹಾಗೂ ಪರಿಸರ ಸುಸ್ಥಿರತೆ ಅಗತ್ಯವಾದುದು.‌ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಇಟ್ಟುಕೊಳ್ಳಲಾಗಿದ್ದು, ಅದನ್ನು 2030ಕ್ಕೆ ತಲುಪುವ ಉದ್ದಶೇಶವನ್ನೂ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಆತ್ಮನಿರ್ಭರ ಭಾರತ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿರುವುದು ಸಹಕಾರಿಯಾಗಿದೆ’ ಎಂದರು.

ಬಹಳಷ್ಟು ಅವಕಾಶಗಳಿವೆ:‘ಜಾಗತಿಕ ಆರ್ಥಿಕತೆಯಲ್ಲಿ ಭಾರತವು 5ನೇ ಸ್ಥಾನದಲ್ಲಿದೆ. ಇದಕ್ಕೆ, ಸೇವಾ ವಲಯವು ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತಿದೆ. ಜಗತ್ತಿನ 5ನೇ ಅತಿ‌ದೊಡ್ಡ ರಕ್ಷಣಾ ಬಜೆಟ್‌ ನಮ್ಮದಾಗಿದೆ. ಇದಕ್ಕೆ ಬಾಹ್ಯಾಕಾಶ ಉದ್ದಿಮೆಯಲ್ಲಿ ಪ್ರಗತಿಗೆ ಬಹಳಷ್ಟು ಅವಕಾಶಗಳು ಸೃಷ್ಟಿಯಾಗಿರುವುದು ಕಾರಣವಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಅವಕಾಶಗಳಿವೆ. ವಿವಿಧ ‌ಕಂಪನಿಗಳು ಮುಂದೆ ಬರುತ್ತಿವೆ’ ಎಂದು ತಿಳಿಸಿದರು.

‘ವೈಮಾನಿಕ ಕ್ಷೇತ್ರದಲ್ಲಿ ಭಾರತವು 2025ರ ವೇಳೆಗೆ 3ನೇ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಲಿದೆ.‌ ‘ಉಡಾನ್’ ಅಥವಾ ಪ್ರಾದೇಶಿಕ ಸಂಪರ್ಕ‌ ಯೋಜನೆಯಿಂದ ಅನುಕೂಲವಾಗಿದೆ. ಪ್ರಮುಖ ನಗರಗಳ ಸಂಪರ್ಕವು ಸುಲಭ ಸಾಧ್ಯವಾಗಿದೆ. ಆದಾಗ್ಯೂ ಮತ್ತಷ್ಟು ವಿಮಾನಗಳ ಅಗತ್ಯವಿದೆ.‌ 2038ರ ವೇಳೆಗೆ ವೇಳೆಗೆ 2380 ವಾಣಿಜ್ಯ ವಿಮಾನಗಳ ಅಗತ್ಯವಿದೆ. ‌114 ಎಂಆರ್‌ಎಫ್‌ಎ (ಮಲ್ಟಿರೋಲ್ ಫೈಟರ್‌ ಏರ್‌ಕ್ರಾಫ್ಟ್‌) ಖರೀದಿಗೆ ವಾಯುದಳ ಮುಂದಾಗಿದೆ’ ಎಂದು ವಿವಿಧ ವರದಿಗಳನ್ನು ಉಲ್ಲೇಖಿಸಿ ಹೇಳಿದರು.

‘ವೈಮಾನಿಕ ಕ್ಷೇತ್ರದಲ್ಲಿ ರಫ್ತಿಗೂ ಬಹಳಷ್ಟು ಅವಕಾಶಗಳಿವೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಸಹಕಾರಿಯಾಗಿದೆ.‌ ಉದ್ಯಮಗಳು ಅನುಮತಿಗಾಗಿ ಹಿಂದಿನಂತೆ ಕಷ್ಟಪಡಬೇಕಿಲ್ಲ; ಸುಗಮವಾಗಿ ಸಿಗುತ್ತಿದೆ’ ಎಂದರು.

ಸವಾಲುಗಳೂ ಇವೆ:‘ಆರ್ಥಿಕ ಪ್ರಗತಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ (ಎಂಎಸ್‌ಎಂಇ) ಬೆಳವಣಿಗೆಯೂ ಮಹತ್ವದ್ದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು, ಸುಧಾರಿತ ತಂತ್ರಜ್ಞಾನ ಬಳಕೆ, ಮಾರುಕಟ್ಟೆ ಕಂಡುಕೊಳ್ಳುವುದು ಹಾಗೂ ಮೂಲಸೌಲಭ್ಯಗಳನ್ನು ಹೊಂದುವ ವಿಷಯದಲ್ಲಿ ಅವುಗಳಿಗೆ ಸವಾಲುಗಳೂ ಇವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಸ್‌ಡಿಎಂಐಎಂಡಿ ನಿರ್ದೇಶಕ ಡಾ.ಎನ್.ಆರ್.ಪರಶುರಾಮನ್ ಮಾತನಾಡಿ, ‘ರಷ್ಯಾ–ಉಕ್ರೇನ್ ಯುದ್ಧ ಶುರುವಾದಾಗಿನಿಂದ ಜಗತ್ತಿನಾದ್ಯಂತ ಆರ್ಥಿಕ ಪ್ರತಿಕೂಲಗಳನ್ನು ಕಾಣುತ್ತಿದ್ದೇವೆ. ಅಲ್ಲಲ್ಲಿ ಆರ್ಥಿಕ ಹಿಂಜರಿತವೂ, ಅಸ್ಥಿರತೆಯೂ ಕಂಡುಬರುತ್ತಿದೆ’ ಎಂದರು.

ಸಮ್ಮೇಳನದ ಅಧ್ಯಕ್ಷ ಡಾ.ಬಿ.ವೆಂಕಟರಾಜ ಮಾತನಾಡಿ, ‘ಜಾಗತಿಕವಾಗಿ ಆರ್ಥಿಕ ಅಸ್ಥಿರತೆ ಕಾಡುತ್ತಿದೆ. 2023ರಲ್ಲಿ ಆರ್ಥಿಕ ಹಿಂಜರಿತದ ವರದಿಗಳು ಇವೆ. ಇದೆಲ್ಲವನ್ನೂ ಸಮ್ಮೇಳನದಲ್ಲಿ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT