ಮೈಸೂರು: ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಗೆ ಅರಮನೆ ನಗರಿ ಸಜ್ಜಾಗಿದ್ದು, ಮಾರ್ಚ್ 27ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ಐಟಿಎಫ್ ಮೈಸೂರು ಓಪನ್–2023ಕ್ಕೆ ಮೈಸೂರು ಆತಿಥ್ಯ ವಹಿಸಿದೆ.
ರಾಜ್ಯ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್ (ಎಂಟಿಸಿ) ಅಂಗಳದಲ್ಲಿ 8 ವರ್ಷಗಳ ನಂತರ ಸೈಕಲ್ ಪ್ಯೂರ್ ಅಗರಬತ್ತಿ ಕಂಪನಿಯ ಪ್ರಾಯೋಕತ್ವದಲ್ಲಿ ನಡೆಯಲಿದೆ
‘₹ 20.5 ಲಕ್ಷ (25 ಸಾವಿರ ಡಾಲರ್) ಪ್ರಶಸ್ತಿ ಮೊತ್ತವನ್ನು ಹೊಂದಿರುವ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದ್ದು, ಮುಖ್ಯ ಸುತ್ತಿನ ಹಣಾಹಣಿ 28ರಿಂದ ನಡೆಯಲಿದೆ. 32 ಮಂದಿಯ ಕಣದಲ್ಲಿದ್ದು, ನಾಲ್ವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದಾರೆ. ಎಂಟು ಮಂದಿ ಅರ್ಹತಾ ಸುತ್ತಿನ ಮೂಲಕ ಬರಲಿದ್ದಾರೆ. ಡಬಲ್ಸ್‌ನಲ್ಲಿ 16 ತಂಡಗಳು ಆಡಲಿವೆ’ ಎಂದು ಟೂರ್ನಿಯ ನಿರ್ದೇಶಕ ಪೀಟರ್ ವಿಜಯ್ ಕುಮಾರ್ ತಿಳಿಸಿದರು.
ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೈಸೂರಿನ ಮನೀಷ್ ಗಣೇಶ್ ಹಾಗೂ ಆರ್.ಸೂರಜ್ ಪ್ರಬೋದ್, ಬೆಂಗಳೂರಿನ ರಿಷಿ ರೆಡ್ಡಿ, ಗುಜರಾತ್‌ನ ಮಾಧವ್ ಕಾಮತ್ ಅವರಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದೆ. ಭಾರತದ ಪ್ರತಿಭಾವಂತ ಆಟಗಾರರಾದ ಮುಕುಂದ್ ಶಶಿಕುಮಾರ್, ಎಸ್.ಡಿ.ಪ್ರಜ್ವಲ್ ದೇವ್, ರಾಮ್ ಕುಮಾರ್ ರಾಮನಾಥನ್, ಸಿದ್ಧಾರ್ಥ್ ರಾವತ್, ದಿಗ್ವಿಜಯ್ ಪ್ರತಾಪ್ ಸಿಂಗ್, ಮನೀಷ್ ಸುರೇಶ್ ಕುಮಾರ್, ನಿಕಿ ಪೂಣಚ್ಚ ಮತ್ತು ಕರಣ್ ಸಿಂಗ್ ಕಣದಲ್ಲಿದ್ದಾರೆ’ ಎಂದರು.
ಐಟಿಎಫ್ ಮೇಲ್ವಿಚಾರಕ ಶ್ರೀಲಂಕಾದ ಧರಕ ಇಲವಾಲ, ‘2017ರಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿದ್ದ ರಷ್ಯಾದ ಡಾನ್ಸ್ಕೊಯ್, 245ನೇ ಶ್ರೇಯಾಂಕಿತ ವಿಯೆಟ್ನಾಂನ ನಾಮ್ ಹೊವಾಂಗ್ ಲೀ, ಅಮೆರಿಕದ ಆಲಿವರ್ ಕ್ರಾಫೋರ್ಡ್ ಸೇರಿದಂತೆ 15 ವಿದೇಶಿ ಆಟಗಾರರು ಕಣದಲ್ಲಿದ್ದಾರೆ’ ಎಂದರು.
‘ಸಿಂಗಲ್ಸ್ ವಿಜೇತರಿಗೆ ₹ 2.96 ಲಕ್ಷ (3,600 ಡಾಲರ್), ಡಬಲ್ಸ್ ವಿಜೇತ ತಂಡಕ್ಕೆ ₹ 1.29 ಲಕ್ಷ (1550 ಡಾಲರ್) ನಗದು ಬಹುಮಾನವಿದೆ’ ಎಂದರು.
ಜಿಲ್ಲಾಧಿಕಾರಿ ಹಾಗೂ ಟೂರ್ನಿಯ ಸಂಘಟನಾ ಸಮಿತಿ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.