ಮೈಸೂರು: ‘ಸಿದ್ದರಾಮಯ್ಯ ಅವರಿಗಿರುವ ಪರಿಶುದ್ಧ ರಾಜಕಾರಣಿ ಎಂಬ ಹೆಸರು ಉಳಿಸಲು ಜನಾಂದೋಲನ ನಡೆಸುತ್ತಿದ್ದೇವೆ ಹೊರತು ಅಧಿಕಾರಕ್ಕಾಗಿ ಅಲ್ಲ’ ಎಂದು ಕೆಪಿಸಿಸಿ ರಾಜ್ಯ ವಕ್ತಾರ ನಿಕೇತ್‌ರಾಜ್ ಮೌರ್ಯ ತಿಳಿಸಿದರು.
ಜನಸ್ಪಂದನ ಟ್ರಸ್ಟ್‌ನಿಂದ ‘ಕರ್ನಾಟಕದ ಅಪರೂಪದ ಜನನಾಯಕನಿಗೆ ಜನಪರತೆಯೇ ದ್ವೇಷವಾಯಿತೆ’ ವಿಷಯದ ಕುರಿತು ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಅಧಿಕಾರವನ್ನು ಅಪ್ಪಿಕೊಳ್ಳುವುದಿದ್ದರೆ ಅವರು ಜೆಡಿಎಸ್ ಬಿಟ್ಟು ಬರುತ್ತಿರಲಿಲ್ಲ. ಎಚ್.ಡಿ.ದೇವೇಗೌಡ ಅವರು ಅಹಿಂದ ಸಮಾವೇಶದಲ್ಲಿ ಭಾಗವಹಿಸಬಾರದು ಎಂದಾಗ ಉಪ ಮುಖ್ಯಮಂತ್ರಿ ಸ್ಥಾನ ಹೋದರೂ ಪರವಾಗಿಲ್ಲ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದರು. ಅಹಿಂದ ಸಮುದಾಯದ ಪರವಾದ ಕಾರ್ಯಗಳಿಗಾಗಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲಬೇಕಿದೆ’ ಎಂದರು.
‘ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಮಾಡುತ್ತಿರುವವರು ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತಂದು, ನೂರಾರು ಎಕರೆ ಭೂಮಿಯನ್ನು ಮಾಡಿಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ಕುಟುಂಬ ಸಾಮಾನ್ಯರಂತೆ ಬದುಕುತ್ತಿದೆ. ಕುಟುಂಬವನ್ನು ರಾಜಕೀಯಕ್ಕೆ ಎಳೆದು ತರದಿರುವ ಅವರ ಸಿದ್ಧಾಂತ ಅನುಕರಣೀಯ. ಆ.9ರ ಜನಾಂದೋಲನವು ಅವರ ರಾಜಕೀಯ ಜೀವನದ ಕಟ್ಟಕಡೆಯ ದೊಡ್ಡ ಹೋರಾಟ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ತಂದೆ ಮುಖ್ಯಮಂತ್ರಿ ಸ್ಥಾನಕ್ಕೇರಿದರೂ ನಮ್ಮ ಮನೆಯಲ್ಲಿ ಮಧ್ಯಮ ವರ್ಗದ ಕುಟುಂಬದ ಪರಿಸ್ಥಿತಿಯಿತ್ತು. ಪ್ರಾಮಾಣಿಕ ರಾಜಕಾರಣಕ್ಕೆ ಅವರು ಒತ್ತು ನೀಡುತ್ತಿದ್ದರು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಬಿಜೆಪಿ ಕುತಂತ್ರಕ್ಕೆ ಅವಕಾಶ ನೀಡುವುದಿಲ್ಲ. ಸಮಾವೇಶ ನಡೆಸಿ ಜನರ ಬಳಿ ವಾಸ್ತವ ಸತ್ಯವನ್ನು ತಿಳಿಸುತ್ತೇವೆ’ ಎಂದು ಹೇಳಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ‘ವಿರೋಧ ಪಕ್ಷಗಳು ಪ್ರಾಮಾಣಿಕರನ್ನು ಭ್ರಷ್ಟಾಚಾರಿ ಎಂದು ನಿರೂಪಿಸಲು ಹೊರಟಿದ್ದಾರೆ. ಜಾತಿಯ ಹೆಸರಿನಲ್ಲಿ ಕೊಲೆ ಮಾಡಿಸಿ ಜೈಲಿನಲ್ಲಿದ್ದ ಅಮಿತ್ ಷಾ ಆಡಳಿತ ಪಕ್ಷದಲ್ಲಿದ್ದಾರೆ. ಭ್ರಷ್ಟರ ಕೈಗೆ ಆಡಳಿತ ದೊರೆಯುತ್ತಿದ್ದು, ರಾಜಕೀಯದಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗಿದೆ’ ಎಂದು ಹೇಳಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್, ಕಾಂಗ್ರೆಸ್ ಮುಖಂಡ ಎಚ್.ವಿ.ವೆಂಕಟೇಶ್ ಇದ್ದರು.
‘ಕಾನೂನು ಹೋರಾಟಕ್ಕೆ ಸಿದ್ಧ’
‘ಶೋಷಿತ ಸಮಾಜದವರು ರಾಜಕೀಯಕ್ಕೆ ಬಂದರೆ ಅವರದ್ದು ಕತ್ತಿಯ ಮೇಲಿನ ನಡಿಗೆಯಾಗಿರುತ್ತದೆ. ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯದಲ್ಲಿ ಬಿಜೆಪಿಯು ಕುತಂತ್ರದ ಮೂಲಕ ಅಲ್ಲಿನ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಯತ್ನಿಸುತ್ತಾರೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿ ಕಿರುಕುಳ ನೀಡುತ್ತಾರೆ. ದೆಹಲಿ ಹಾಗೂ ಜಾರ್ಖಂಡ್‌ನಲ್ಲಿ ಇದೇ ರೀತಿ ಮಾಡಿದ್ದು ಕರ್ನಾಟಕದಲ್ಲೂ ಮುಖ್ಯಮಂತ್ರಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದು ‘ಭ್ರಷ್ಟಾಚಾರಿ’ ಪಟ್ಟ ಕಟ್ಟಲು ಯತ್ನಿಸುತ್ತಿದ್ದಾರೆ. ಹೈಕಮಾಂಡ್‌ನಿಂದಲೂ ಸಿದ್ದರಾಮಯ್ಯ ಅವರಿಗೆ ಬೆಂಬಲವಿದ್ದು ಕಾನೂನು ಹೋರಾಟವನ್ನೂ ಮಾಡುತ್ತೇವೆ’ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.