ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಮುಳುಗಿದ್ದ ಜಿಲ್ಲಾಡಳಿತ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಜನತಾ ದರ್ಶನ’ ಕಾರ್ಯಕ್ರಮವನ್ನು ಅಕ್ಟೋಬರ್ ತಿಂಗಳಲ್ಲಿ ನಡೆಸಲೇ ಇಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿಲ್ಲ.
‘ಇನ್ಮುಂದೆ ಪ್ರತಿ ತಿಂಗಳೂ ಜನತಾ ದರ್ಶನ ನಡೆಸಬೇಕು. ಅಂದು ಎಲ್ಲ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಜನರ ಅಹವಾಲುಗಳನ್ನು ಆಲಿಸಬೇಕು ಮತ್ತು ಅವುಗಳನ್ನು ಕಾಲಮಿತಿಯಲ್ಲಿ ಬಗೆಹರಿಸಬೇಕು’ ಎಂದು ಸರ್ಕಾರದಿಂದ ಸೆಪ್ಟೆಂಬರ್‌ನಲ್ಲಿ ಆದೇಶಿಸಲಾಗಿದೆ. ಆದರೆ, ಅದನ್ನು ಪಾಲಿಸುವಲ್ಲಿ ಮುಖ್ಯಮಂತ್ರಿ ತವರಿನಲ್ಲೇ ನಿರ್ಲಕ್ಷ್ಯ ಕಂಡುಬಂದಿದೆ. ಇದರಿಂದಾಗಿ, ಬರದಿಂದ ಸಂಕಷ್ಟ ಎದುರಿಸುತ್ತಿರುವ ಗ್ರಾಮೀಣ ಜನರು ಕುಂದುಕೊರತೆಗಳನ್ನು ಹೇಳಿಕೊಳ್ಳಲು ಸೂಕ್ತ ವೇದಿಕೆಯೇ ಸಿಗುತ್ತಿಲ್ಲದಂತಾಗಿದೆ.
ಸರ್ಕಾರದ ಆದೇಶದಂತೆ, ಜಿಲ್ಲಾ ಮಟ್ಟದಲ್ಲಿ ಮೊದಲ ಜನತಾ ದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಸಿದ್ದರು. ಅಂದು ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಸಚಿವರು ಸತತ ಐದು ತಾಸಿನವರೆಗೆ ಮನವಿಗಳನ್ನು ಸ್ವೀಕರಿಸಿದ್ದರು. ಆದರೆ, ಅವುಗಳಲ್ಲಿ ಎಷ್ಟು ಮನವಿಗಳಿಗೆ ಸ್ಪಂದಿಸಲಾಗಿದೆ, ಎಷ್ಟಕ್ಕೆ ಪರಿಹಾರ ಸೂಚಿಸಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಈವರೆಗೂ ಬಹಿರಂಗಪಡಿಸಿಲ್ಲ! ಅಲ್ಲದೇ, ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ನಡೆಯಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ.
ಕಿಮ್ಮತ್ತಿಲ್ಲವೇ?: ನವೆಂಬರ್ 2ನೇ ವಾರ ಬಂದರೂ ಜನರಿಗೆ ‘ಅಧಿಕಾರಿಗಳ ದರ್ಶನ’ವಾಗಿಲ್ಲ. ಪ್ರತಿ ತಿಂಗಳೂ ಜನತಾ ದರ್ಶನವನ್ನು ಕಡ್ಡಾಯವಾಗಿ ನಡೆಸಬೇಕು ಎಂಬ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸೆಪ್ಟೆಂಬರ್‌ನಲ್ಲಿ ನಡೆದಿದ್ದ ‘ದರ್ಶನ’ಕ್ಕೆ ಮುನ್ನ, ಸಾರ್ವಜನಿಕರಿಂದ ಲಿಖಿತ ಅಹವಾಲುಗಳನ್ನು ಸೆ. 21 ಹಾಗೂ 22ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಜಿಲ್ಲಾ ಪಂಚಾಯಿತಿಯಲ್ಲಿ ತೆರೆದಿದ್ದ ಜನತಾ ದರ್ಶನ ಕೋಶದಲ್ಲಿ ಸ್ವೀಕರಿಸಲಾಗಿತ್ತು. ಸ್ವೀಕೃತವಾದ ಮನವಿಗಳನ್ನು ಕ್ರೋಢೀಕರಿಸಿ, ಸೆ.25ರಂದು ಆದ್ಯತೆ ಮೇರೆಗೆ ಪರಿಶೀಲನೆಗೆ ತೆಗೆದುಕೊಳ್ಳಲಾಗಿತ್ತು. ಕೆಲವರು ಅಂದೇ ಅರ್ಜಿಗಳನ್ನು ಸಲ್ಲಿಸಿದ್ದರು. ತಮ್ಮ ಊರು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯಲ್ಲಿ ಸೇರಿದಂತೆ ತಾಲ್ಲೂಕು ಹಂತದಲ್ಲಿ ಕೆಲಸವಾಗದಿದ್ದರಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ನೂರಾರು ಮಂದಿ ಬಂದಿದ್ದರು.
‘ಜಿಲ್ಲಾಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾ ವ್ಯಾಪ್ತಿಯ ಒಂದು ತಾಲ್ಲೂಕು ಆಯ್ಕೆ ಮಾಡಿಕೊಂಡು ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ನಡೆಸಬೇಕು’ ಎಂದು ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.