ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಕರನ್ನು ಮುಗಿಸಿದ್ದೇ ಜೆಡಿಎಸ್ ಸಾಧನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್‌ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಿಂಚಿನ ಪ್ರಚಾರ; ಬಿಜೆಪಿ ವಿರುದ್ಧ ಕಿಡಿ
Published 3 ಏಪ್ರಿಲ್ 2024, 14:28 IST
Last Updated 3 ಏಪ್ರಿಲ್ 2024, 14:28 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿ ಕೋಮುವಾದಿ ಪಕ್ಷ ಎಂದ ದೇವೇಗೌಡರೇ ಈಗ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುತ್ತಿದ್ದಾರೆ. ನಾಯಕರನ್ನು ಬಳಸಿ ಬಿಸಾಡುವ ಧೋರಣೆ ಹೊಂದಿರುವ, ಚುನಾವಣೆ ಬಂದಾಗಲೆಲ್ಲ ಕಣ್ಣೀರಿಡುವ ಜೆಡಿಎಸ್‌ ಅನ್ನು ಈ ಬಾರಿ ಜನತೆ ತಿರಸ್ಕರಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ನಗರದ ಮಂಚೇಗೌಡನ ಕೊಪ್ಪಲಿ ನಲ್ಲಿ ಮಂಗಳವಾರ ನಡೆದ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಮಕೃಷ್ಣ ಹೆಗಡೆ, ಜೆ.ಎಚ್‌. ಪಟೇಲರು ಬಿಜೆಪಿ ಕಡೆ ವಾಲಿದಾಗ ಜನತಾ ಪರಿವಾರ ಇಬ್ಭಾಗವಾಗಿ ದೇವೇ ಗೌಡರ ಜೊತೆ ಜೆಡಿಎಸ್ ಕಟ್ಟಿದ್ದು ನಾನು. ಅವರು ಪಕ್ಷದ ರಾಷ್ಟ್ರ ಅಧ್ಯಕ್ಷರಾದರೆ, ನಾನು ರಾಜ್ಯ ಅಧ್ಯಕ್ಷನಾಗಿ ಆರು ವರ್ಷ ಕೆಲಸ ಮಾಡಿದೆ. ನಂತರ ನನ್ನನ್ನೇ ಪಕ್ಷದಿಂದ ಹೊರ ಹಾಕಿದರು. ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಕಟ್ಟಿದ ಹರೀಶ್‌ ಗೌಡರಿಗೆ ಟಿಕೆಟ್ ನೀಡಲಿಲ್ಲ. ಕೆ.ಎಸ್. ರಂಗಪ್ಪ ಅವರಿಗೆ ಟಿಕೆಟ್ ನೀಡಿ ನಡುನೀರಲ್ಲಿ ಕೈ ಬಿಟ್ಟರು. ಹೀಗೆ ಜೆಡಿಎಸ್ ನಾಯಕರನ್ನು ಬಳಕೆ ಮಾಡಿಕೊಂಡು ಬಿಸಾಡುವ ಧೋರಣೆ ಹೊಂದಿದೆ’ ಎಂದು ಲೇವಡಿ ಮಾಡಿದರು.

‘ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪ್ರವಾಹ ಬಂದಾಗ ಮೋದಿ ಬರಲಿಲ್ಲ, ಈಗ ಬರಗಾಲ ಬಂದಾಗಲೂ ಮೋದಿ ಬರಲಿಲ್ಲ. ಸಂಕಷ್ಟದಲ್ಲಿ ರಾಜ್ಯದ ಜನರ ಸಮಸ್ಯೆ ಆಲಿಸದ ಮೋದಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ’ ಎಂದು ಟೀಕಿಸಿದರು.

‘ಹತ್ತು ವರ್ಷ ಕಾಲ ಆಡಳಿತ ನಡೆಸಿದ ಮೋದಿ ಸರ್ಕಾರ ಕೊಟ್ಟ ಮಾತಿನಂತೆ ವಿದೇಶದಿಂದ ಕಪ್ಪು ಹಣ ತರ
ಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಅಕ್ಕಿ, ಬೇಳೆ , ಎಣ್ಣೆ ಎಲ್ಲದರ ಬೆಲೆಯೂ ದುಬಾರಿ ಆಗಿದೆ. ಇದೇ ಏನು ಅಚ್ಛೆ ದಿನ್?’ ಎಂದು ಪ್ರಶ್ನಿಸಿದರು.

‘ಹಾಸನದ ಪ್ರತಾಪ ಸಿಂಹ ಇಲ್ಲಿ ಬಂದು ಪ್ರಲಾಪ‌ ಮಾಡಿದ್ದೇ‌ ಮಾಡಿದ್ದು.‌ ಅವರು ಸುಳ್ಳು ಹೇಳಿದ್ದಕ್ಕೆ ಈ ಬಾರಿ ಬಿಜೆಪಿ ಟಿಕೆಟ್‌ ಕೊಡಲಿಲ್ಲ. ಈ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್ ತಪ್ಪಿಸಿ ಅರಸು ಮನೆತನಕ್ಕೆ ನೀಡಿದೆ. ಸಾಮಾನ್ಯ ಒಕ್ಕಲಿಗ ಸಮಾಜಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಜನ ಪರ, ಸಂವಿಧಾನ ರಕ್ಷಣೆ, ಸಾಮಾಜಿಕ ನ್ಯಾಯದ ಧ್ವನಿ ಯಾಗಿ ನಮ್ಮ-ನಿಮ್ಮಲ್ಲರ ಧ್ವನಿಯಾಗಿ ಸಂಸತ್ತಿಗೆ ಆಯ್ಕೆಯಾಗಲು ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸಬೇಕು. ಗೆಯ್ಯುವ ಎತ್ತಿಗೆ ಹುಲ್ಲು ಹಾಕಿ’ ಎಂದರು.

ಮೈಸೂರು–ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ‘ನಾನು ಬೀದಿಯಲ್ಲಿ‌‌ ನಿಂತು‌ ಹೋರಾಟ ಮಾಡುವ ವ್ಯಕ್ತಿ.‌ ನನ್ನಂಥ ಸಾಮಾನ್ಯರಿಗೆ ಪಕ್ಷ ಅವಕಾಶ ನೀಡಿದೆ. ಸಮಾಜದಲ್ಲಿ ಬೆಂಕಿ ಹಚ್ವುವವರಿಗೆ ಅವಕಾಶ ನೀಡಬೇಡಿ’ ಎಂದು ಕೋರಿದರು.

ಸಚಿವ ಕೆ. ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಡಿ. ರವಿಶಂಕರ್, ವಿಧಾನ ಪರಿಷತ್‌ ಸದಸ್ಯ ಡಿ. ತಿಮ್ಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಮುಖಂಡರಾದ ಎಂ.ಕೆ. ಸೋಮಶೇಖರ್, ಆರ್. ಮೂರ್ತಿ, ಡಿ.ಧ್ರುವಕುಮಾರ್, ಆರಿಫ್‌ ಹುಸೇನ್, ಅಯೂಬ್ ಖಾನ್, ಎಂ.ಶಿವಣ್ಣ, ಎಚ್.ವಿ. ರಾಜೀವ್ ಪಾಲ್ಗೊಂಡರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು

ಮೈಸೂರಿನಲ್ಲಿ ದಶಕಗಳ ನಂತರ ಒಕ್ಕಲಿಗ ಸಮುದಾಯದ ವ್ಯಕ್ತಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಒಂದೇ ಕುಟುಂಬಕ್ಕೆ ಎಷ್ಟು ಎಂದು ಬೆಂಬಲ ಕೊಡುತ್ತೀರಿ. ಈ ಬಾರಿ ನಮ್ಮದೇ ಸಮುದಾಯದ ಲಕ್ಷ್ಮಣ್ ಬೆಂಬಲಿಸಿ
ಕೆ. ವೆಂಕಟೇಶ್‌ ಪಶು ಸಂಗೋಪನೆ ಸಚಿವ

ಸಿದ್ದರಾಮಯ್ಯ 2013–2018ರ ಅವಧಿಯಲ್ಲಿ ನಗರಕ್ಕೆ ₹3800 ಕೋಟಿ ಅನುದಾನ ಕೊಟ್ಟಿದ್ದರು. ಈ ಬಾರಿ 8 ತಿಂಗಳಲ್ಲೇ ಚಾಮರಾಜ ಕ್ಷೇತ್ರಕ್ಕೆ ₹900 ಕೋಟಿ ನೀಡಿದ್ದಾರೆ. ಅಭಿವೃದ್ಧಿಗಾಗಿ ಜನರು ಕಾಂಗ್ರೆಸ್ ಬೆಂಬಲಿಸಬೇಕು ಕೆ. ಹರೀಶ್‌ ಗೌಡ ಶಾಸಕ

ಬೆಳಿಗ್ಗೆ ಶಾರದಾದೇವಿ ನಗರದಲ್ಲಿನ ತಮ್ಮ ನಿವಾಸದಲ್ಲಿ ಮುಖಂಡರ ಜೊತೆ ಸಭೆ ನಡೆಸಿದ ಸಿದ್ದರಾಮಯ್ಯ ಬಳಿಕ ಅಗ್ರಹಾರದಲ್ಲಿ ಇರುವ ಶಂಕರ ಮಠಕ್ಕೆ ಭೇಟಿ ನೀಡಿ ಶೃಂಗೇರಿಯ ವಿದುಶೇಖರ ಭಾರತಿ ಶ್ರೀಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಅವರಿಗೆ ಪೂರ್ಣಕುಂಭದ ಸ್ವಾಗತ ದೊರೆಯಿತು. ಈ ಸಂದರ್ಭ ಮಾತನಾಡಿದ ಸಿದ್ದರಾಮಯ್ಯ ತಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಸಮಾಜದ ಎಲ್ಲ ವರ್ಗದ ಜನರಿಗೆ ಆಗಿರುವ ಅನುಕೂಲಗಳ ಕುರಿತು ಶ್ರೀಗಳಿಗೆ ವಿವರಿಸಿದರು. ಈ ಸಂದರ್ಭ ಸಚಿವ ಕೆ. ವೆಂಕಟೇಶ್ ಶಾಸಕ ರವಿಶಂಕರ್‌ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಯತೀಂದ್ರ ಸಿದ್ದರಾಮಯ್ಯ ಎಚ್‌.ವಿ. ರಾಜೀವ್‌ ಹಾಗೂ ಪಕ್ಷದ ಮುಖಂಡರು ಸಾಥ್‌ ನೀಡಿದರು.

ಮೈಸೂರು: ಮನಸ್ಥಾಪಗಳನ್ನು ಬದಿಗಿಟ್ಟು ಸಾಮೂಹಿಕ ನಾಯಕತ್ವದಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರಿಗೆ ಸೂಚನೆ ನೀಡಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ 3 ಲಕ್ಷಕ್ಕೂ ಅಧಿಕ ಮತದಾರರು ಇದ್ದು ಲಕ್ಷ್ಮಣ್‌ ಅವರಿಗೆ ಕನಿಷ್ಠ 50 ಸಾವಿರ ಮತಗಳ ಮುನ್ನಡೆ ಸಿಗಬೇಕು. ಅದಕ್ಕೆ ತಕ್ಕಂತೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು. ಕ್ಷೇತ್ರದಲ್ಲಿ ಅಭ್ಯರ್ಥಿ ಪರ ಸಂಘಟಿತ ಪ್ರಚಾರಕ್ಕೆ ಪ್ರತ್ಯೇಕ ಸಮಿತಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಒಪ್ಪದ ಮುಖಂಡರು ಡಾ.ಯತೀಂದ್ರ ನಾಯಕತ್ವದಲ್ಲೇ ಪ್ರಚಾರ ಕೈಗೊಳ್ಳುವುದಾಗಿ ತಿಳಿಸಿದರು. ಸಚಿವ ಕೆ. ವೆಂಕಟೇಶ್‌ ಮುಖಂಡರಾದ ಡಾ.ಯತೀಂದ್ರ ಸಿದ್ದರಾಮಯ್ಯ ಪುಷ್ಪಾ ಅಮರನಾಥ್ ಬಿ.ಜೆ.ವಿಜಯ್ ಕುಮಾರ್ ಮಾವಿನಹಳ್ಳಿ ಸಿದ್ದೇಗೌಡ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT