ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೇಶ ದೊಡ್ಡಪಾಳ್ಯ ಅವರ ಪುಸ್ತಕಗಳ ಬಿಡುಗಡೆ ಮಾಡಿದ ಪತ್ರಕರ್ತ ಕೃಷ್ಣಪ್ರಸಾದ್

Last Updated 19 ಫೆಬ್ರುವರಿ 2023, 14:49 IST
ಅಕ್ಷರ ಗಾತ್ರ

ಮೈಸೂರು: ‘ಪತ್ರಕರ್ತರು ಸುಳ್ಳುಗಳನ್ನು ಪಸರಿಸುವ ಬದಲಿಗೆ ಪರಾಮರ್ಶಿಸಿ ಸುದ್ದಿ ಕೊಡಬೇಕು’ ಎಂದು ಪತ್ರಕರ್ತ ಕೃಷ್ಣಪ್ರಸಾದ್‌ ಹೇಳಿದರು.

ಇಲ್ಲಿನ ಹುಣಸೂರು ರಸ್ತೆಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ‘ಪ್ರಜಾವಾಣಿ’ ಸುದ್ದಿ ಸಂಪಾದಕ ಸುದೇಶ ದೊಡ್ಡಪಾಳ್ಯ ಅವರ, ‘ವಿಸ್ಮಯ ಬುಕ್‌ಹೌಸ್‌’ ಪ್ರಕಟಿಸಿರುವ ‘ಈಶಾನ್ಯ ದಿಕ್ಕಿನಿಂದ’, ‘ಹಂಗರಹಳ್ಳಿಯ ಬರ್ಬರ ಸಂಕೋಲೆಗಳು’ ಹಾಗೂ ‘ಒಲವು ನಮ್ಮ ಬದುಕು’ (ಪ್ರೇಮ ಕಥನಗಳ ಸರಣಿ–3ನೇ ಮುದ್ರಣ) ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸದ್ಯ ಸುಳ್ಳಿನ ಮೇಲೆ ಸುಳ್ಳನ್ನು ಪ್ರಚಾರ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಪತ್ರಕರ್ತರ ಪಾತ್ರವೇನು? ಈಗಿನ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಜನರೂ ಪತ್ರಕರ್ತರೇ ಇರಬಹುದು. ಆದರೆ, ಪತ್ರಕರ್ತರು ಫಿಲ್ಟರ್. ಜನರು ಏನು ಬೇಕಾದರೂ ಬರೆಯಬಹುದು. ಫಿಲ್ಟರ್‌ ಆಗಿ ಪತ್ರಕರ್ತರ ಪಾತ್ರ ದೊಡ್ಡದಿದೆ. ಪ್ರಧಾನಿಯಿಂದ ಹಿಡಿದು ಮುಖ್ಯಮಂತ್ರಿವರೆಗೆ ಹೇಳುತ್ತಿರುವ ಸುಳ್ಳುಗಳ ಕಂತೆಯನ್ನು ಕಟ್ಟಿದರೆ ಅದಕ್ಕೆ ಕೊನೆಯೇ ಇಲ್ಲ. ಅವರು ಹೇಳುತ್ತಿರುವ ಸುಳ್ಳನ್ನು ಫಿಲ್ಟರ್‌ ಆಗಿ ನಿಲ್ಲಿಸಲು ಶಕ್ತಿ ಪತ್ರಕರ್ತರಿಗೆ ಇದೆಯೇ?’ ಎಂದು ಕೇಳಿದರು.

ಗಂಭೀರವಾಗಿ ಪರಿಗಣಿಸಬೇಕು:

‘ಕರ್ನಾಟಕದ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯ 8ರಲ್ಲಿ ಏಳೂವರೆ ಪತ್ರಿಕೆಗಳು, 17 ಟಿವಿ ವಾಹಿನಿಗಳು ಒಂದೇ ರೀತಿ ಇವೆ. ಒಂದೇ ಸಿದ್ಧಾಂತ ಹಾಗೂ ಆಲೋಚನೆ. ಒಂದೇ ರೀತಿಯ ಪ್ರಚಾರವೂ ನಡೆಯುತ್ತಿದೆ. 2–3 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಮುಂದಿನ 3 ತಿಂಗಳಲ್ಲಿ ಪತ್ರಕರ್ತರು ಹಾಗೂ ಪ್ರಕಾಶಕರ ಪಾತ್ರ ಬಹಳ ಮಹತ್ವದ್ದಾಗಿದೆ. ನಮ್ಮ ರಾಜ್ಯ ತುದಿಗೆ ಬಂದು ನಿಂತಿದೆ. ಅದು ಬೀಳುವ ಅವಕಾಶ ಬಹಳಷ್ಟಿದೆ. ಅದನ್ನು ತಪ್ಪಿಸಬಹುದಾದ ಶಕ್ತಿ ಪತ್ರಕರ್ತರು, ಪ್ರಕಾಶಕರು ಹಾಗೂ ಟಿವಿ ಆ್ಯಂಕರ್‌ಗಳಿಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ತಿಳಿಸಿದರು.

‘ಮೈಸೂರಿನಿಂದ ಕುಶಾಲನಗರಕ್ಕೆ ಹೆದ್ದಾರಿ ನಿರ್ಮಿಸಲು ₹ 4ಸಾವಿರ ಕೋಟಿ ನಿಜವಾಗಿಯೂ ಬೇಕಾಗುತ್ತದೆಯೇ ಎಂಬ ಫ್ಯಾಕ್ಟ್‌ ಚೆಕ್‌ ಅನ್ನು ಪತ್ರಕರ್ತರು ಮಾಡಬೇಕು. ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎನ್ನುವವ ಉಚ್ಛ (ಉನ್ನತ) ಶಿಕ್ಷಣ ಮಂತ್ರಿಯೋ, ಹುಚ್ಚ ಶಿಕ್ಷಣ ಮಂತ್ರಿನೋ? ಹಾಗೆ ಮಾತನಾಡುವವರು ನಿಜವಾದ ಮದ್ಯಪಾಳ್ಯದವರು. ಇಂಥಾದ್ದನ್ನು ಫ್ಯಾಕ್ಟ್‌ಚೆಕ್‌ ಮಾಡದಿದ್ದರೆ ನಾವು ಪತ್ರಕರ್ತರೇ ಆಗುವುದಿಲ್ಲ, ವ್ಯರ್ಥವಾಗುತ್ತೇವೆ’ ಎಂದರು.

ಫ್ಯಾಕ್ಟ್‌ ಚೆಕ್‌ ಮಾಡಿ:

‘ಪತ್ರಕರ್ತರು ಪೋಸ್ಟ್‌ಮ್ಯಾನ್‌ ಕೆಲಸದ ಬದಲಿಗೆ, ಫಿಲ್ಟರ್‌ ಆಗಿ ಮತ್ತು ಫ್ಯಾಕ್ಟ್‌ ಚೆಕ್‌ ಕೆಲಸ ನಿರ್ವಹಿಸಬೇಕು. ಸಂವಿಧಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಪುಸ್ತಕಗಳ ಬಗ್ಗೆ ಮಾತನಾಡಿದ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ‘ಪತ್ರಕರ್ತರು ಕನ್ನಡದಲ್ಲಿ ಸ್ವತಂತ್ರವಾಗಿ ಪುಸ್ತಕ ಬರೆದಿದ್ದು ಕಡಿಮೆ. ಬಹುತೇಕವು ಲೇಖನಗಳ ಸಂಗ್ರಹವೇ. ಪ್ರಚಲಿತ ವಿದ್ಯಮಾನಗಳನ್ನು ಇಟ್ಟುಕೊಂಡು ಕನ್ನಡದಲ್ಲೂ ಸಾಕಷ್ಟು ಪುಸ್ತಕಗಳು ಬರಬೇಕಿದೆ. ಹಾಗೆ ಬಯಸುವವರಿಗೂ ಈ ಪುಸ್ತಕಗಳು ಪ್ರೇರಣೆ ನೀಡುವಂಥವಾಗಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವನ್ಯಜೀವಿ ತಜ್ಞ ಕೃಪಾಕರ ಮಾತನಾಡಿ, ‘ಒಳ್ಳೆಯ ಅಂಕಣ ಬರೆಯುವುದು ಸುಲಭವಲ್ಲ. ಓದಬೇಕು, ತಿರುಗಾಡಬೇಕು, ಒಳನೋಟವಿರಬೇಕು ಹಾಗೂ ಪ್ರಾಮಾಣಿಕವಾಗಿರಬೇಕು. ಅಂಥವರಿಂದಷ್ಟೇ ಒಳ್ಳೆಯ ಅಂಕಣ ಸಾಧ್ಯ. ಇದನ್ನು ಸುದೇಶ ಮಾಡಿದ್ದಾರೆ’ ಎಂದು ಹೇಳಿದರು.

ವನ್ಯಜೀವಿ ತಜ್ಞ ಸೇನಾನಿ ಮಾತನಾಡಿದರು. ಸುದೇಶ ದೊಡ್ಡಪಾಳ್ಯ ಮತ್ತು ವಿಸ್ಮಯ ಬುಕ್‌ಹೌಸ್‌ನ ಪ್ರಕಾಶ್‌ ಚಿಕ್ಕಪಾಳ್ಯ ಇದ್ದರು.

---

ಹೆಸರು ಬದಲಾದರೆ

ಈಗಿನದ್ದು ಕಲಿಯುಗವೋ, ಅಮೃತ ಕಾಲವೋ? ಪೆದ್ದರ ಸಂತೆ ಎಂದೂ ಹೆಸರಿಡಬಹುದು. ಹೆಸರು ಬದಲಾದರೆ ಜನರ ಸ್ಥಿತಿ ಬದಲಾಗುತ್ತದೆ ಎಂಬ ಸ್ಥಿತಿ ಬಂದಿದೆ.

–ಕೃಷ್ಣಪ್ರಸಾದ್, ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT