ಮೈಸೂರು: ಇಲ್ಲಿನ ಅರಮನೆಯ ಖಾಸಗಿ ದರ್ಬಾರ್ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ‘ಪಟ್ಟದ ಆನೆ’ಯಾಗಿ ‘ಕಂಜನ್’, ‘ನಿಶಾನೆ ಆನೆ’ಯಾಗಿ ‘ಭೀಮ’ ಆಯ್ಕೆಯಾಗಿದೆ.
ನಗರದ ಅಂಬಾವಿಲಾಸ ಅರಮನೆಯಲ್ಲಿ ಭಾನುವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಆನೆಗಳ ಮೈಕಟ್ಟು, ಗಾಂಭೀರ್ಯ ನೋಡಿ ಕಬ್ಬು ತಿನ್ನಿಸಿ ಆಯ್ಕೆಯನ್ನು ಪ್ರಕಟಿಸಿದರು.
ಕಳೆದ ವರ್ಷದ ಮೊದಲ ಬಾರಿ ಬಂದಿದ್ದ ‘ಕಂಜನ್’ ಈ ಬಾರಿ ಹೊಸ ಜವಾಬ್ದಾರಿ ನಿಭಾಯಿಸಲಿದ್ದು, ‘ಧನಂಜಯ’ನ ಸ್ಥಾನ ತುಂಬಲಿದ್ದಾನೆ. ಕಳೆದ ಬಾರಿಯೂ ‘ಭೀಮ’ ನಿಶಾನೆ ಆನೆಯಾಗಿದ್ದ. ಧನಂಜಯ, ಗೋಪಿ, ಸುಗ್ರೀವ, ಏಕಲವ್ಯ, ಪ್ರಶಾಂತ, ಭೀಮ, ವರಲಕ್ಷ್ಮಿ, ದೊಡ್ಡಹರವೆ ಲಕ್ಷ್ಮಿ ಆನೆಗಳು ಆಯ್ಕೆ ವೇಳೆ ಬಂದಿದ್ದವು. ಡಿಸಿಎಫ್ ಐ.ಬಿ.ಪ್ರಭುಗೌಡ ಎಲ್ಲ ಆನೆಗಳ ಮಾಹಿತಿ ನೀಡಿದರು. ‘ಯಾವ ಆನೆ ಚೆನ್ನಾಗಿದೆ’ ಎಂದು ಮೊಮ್ಮಗ
ಆದ್ಯವೀರ್‌ನನ್ನು ಪ್ರಮೋದಾದೇವಿ ಕೇಳಿದರು. ಅವನು ‘ಭೀಮ’, ‘ಕಂಜನ್’ ಕಡೆಗೆ ಬೊಟ್ಟು ಮಾಡಿದ.
ಧನಂಜಯ ಹಾಗೂ ಕಂಜನ್ ಆನೆಗಳು ಶುಕ್ರವಾರ ವಷ್ಟೇ ಜಗಳವಾಡಿದ್ದವು. ಕಂಜನ್‌ನನ್ನು ಧನಂಜಯ ಅರಮನೆಯಾಚೆಗೆ ಅಟ್ಟಿಸಿಕೊಂಡು ಹೋಗಿದ್ದನು. ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಮೈಸೂರಿಗೆ ಬಂದ ಆರಂಭದಲ್ಲಿ ಕಾಲುನೋವಿನಿಂದ ಬಳಲುತ್ತಿದ್ದ ಕಂಜನ್ ಈಗ
ಚೇತರಿಸಿಕೊಂಡಿದ್ದಾನೆ.