ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ, ಅವರ ತವರು ಜಿಲ್ಲೆಯಲ್ಲಿ ಬೆಂಬಲಿಗರು ನಗರದ ವಿವಿಧೆಡೆ ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಹಿಂದ ಸಂಘಟನೆ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸದಸ್ಯರು ಹಾಗೂ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಬೆಂಬಲಿಗರು, ಟಯರ್ ಹಾಗೂ ರಾಜ್ಯಪಾಲರ ಪ್ರತಿಕೃತಿಗೆ ಬೆಂಕಿ ಹಚ್ಚಿದರು. ಅರೆಬೆತ್ತಲಾಗಿ ನಿಂತು ಪ್ರತಿಭಟಿಸಿದರು. ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು.
ನ್ಯಾಯಾಲಯದ ಮುಂಭಾಗ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ.ಎಸ್.ಶಿವರಾಮು, ‘ರಾಜ್ಯಪಾಲರು ಸಂವಿಧಾನ ಬಾಹಿರವಾಗಿ ವರ್ತಿಸಿದ್ದಾರೆ. ಮಂಗಳವಾರ ಬೃಹತ್ ಸಂಖ್ಯೆಯಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದೇವೆ’ ಎಂದು ತಿಳಿಸಿದರು.
ನಂತರ, ಬಿಜೆಪಿ ಕಚೇರಿಗೂ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಡೆದಾಗ, ಪಕ್ಕದಲ್ಲೇ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಾಜಿ ಸಂಸದ ಪ್ರತಾಪ ಸಿಂಹ ಅವರನ್ನು ಕಂಡು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು.
‘ಬಿಜೆಪಿ ಚೇಲ ರಾಜ್ಯಪಾಲರಿಗೆ ಧಿಕ್ಕಾರ’, ‘ಬಿಜೆಪಿ ಕೈಗೊಂಬೆಯಾಗಿ ವರ್ತಿಸಿದ ರಾಜ್ಯಪಾಲರಿಗೆ ಧಿಕ್ಕಾರ’, ‘ಮೋದಿ– ಅಮಿತ್ ಷಾ ಸೇವಕ ಗೆಹ್ಲೋಟ್‌ಗೆ ಧಿಕ್ಕಾರ’, ‘ಬಿಜೆಪಿಯ ಕಳ್ಳರಿಗಾಗಿ ಕೆಲಸ ಮಾಡುತ್ತಿರುವ ರಾಜ್ಯಪಾಲರಿಗೆ ಧಿಕ್ಕಾರ’ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
ಸಿದ್ದರಾಮಯ್ಯ ಬೆಂಬಲಿಗ ಬಂಡಿಪಾಳ್ಯ ಬಸವರಾಜು ನೇತೃತ್ವದಲ್ಲಿ, ಬಂಡಿಪಾಳ್ಯ ಸಿಗ್ನಲ್ ವೃತ್ತದಲ್ಲಿ ವಾಹನಗಳನ್ನು ತಡೆದು, ರಾಜ್ಯಪಾಲರ ಪ್ರತಿಕೃತಿಗೆ ಬೆಂಕಿ ಹಚ್ಚಿ ಕಾರ್ಯಕರ್ತರು ಪ್ರತಿಭಟಿಸಿದರು.
ಬಿಜೆಪಿ ಕಚೇರಿಗೆ ಭದ್ರತೆ: ನಗರದ ವಿವಿಧ ಭಾಗಗಳಲ್ಲಿ ಧಿಡೀರ್ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನಗರ ಪೊಲಿಸರು, ಬಿಗಿ ಭದ್ರತೆ ಕೈಗೊಂಡರು. ಮುಂಜಾಗ್ರತಾ ಕ್ರಮವಾಗಿ ಬಿಜೆಪಿ ಕಚೇರಿಯ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಿದರು. ಡಿಸಿಪಿ ಎಂ.ಮುತ್ತುರಾಜ್ ನೇತೃತ್ವದಲ್ಲಿ ಕಚೇರಿ ಸುತ್ತ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ನಿವೇಶನಗಳನ್ನು ಸರ್ಕಾರಕ್ಕೆ ಒಪ್ಪಿಸಿ ತನಿಖೆಗೆ ಆದೇಶಿಸಿ ಎಲ್ಲಾ ಕಳ್ಳರು ಸಿಕ್ಕಿ ಬೀಳುತ್ತಾರೆ ಎಂದು ತಿಂಗಳ ಹಿಂದೆಯೇ ಮುಖ್ಯಮಂತ್ರಿಗೆ ಹೇಳಿದ್ದೆ. ನನ್ನ ಮಾತು ಕೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲಪ್ರತಾಪ ಸಿಂಹ ಮಾಜಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.