ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ ಶುರು

ರಾಜ್ಯದ ತೆರಿಗೆ ಪಾಲು ನೀಡಲು ಆಗ್ರಹಿಸಿ ‘ಕರ್ನಾಟಕ ಜನರಂಗ' ಪ್ರತಿಭಟನೆ
Published 21 ಫೆಬ್ರುವರಿ 2024, 16:02 IST
Last Updated 21 ಫೆಬ್ರುವರಿ 2024, 16:02 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯಕ್ಕೆ ಬರಬೇಕಾದ ತೆರಿಗೆ ‍ಪಾಲಿನಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಎಸಗಿದೆ’ ಎಂದು ಆರೋಪಿಸಿ ಕರ್ನಾಟಕ ಜನರಂಗ’ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದ ಚಿಕ್ಕಗಡಿಯಾರದ ಎದುರು ಬುಧವಾರ ಅಹೋರಾತ್ರಿ ಧರಣಿ ಆರಂಭಿಸಿದರು.

ನಗಾರಿ ನುಡಿಸಿ ಧರಣಿಗೆ ಚಾಲನೆ ನೀಡಿದ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ, ‘ದೇಶವನ್ನು ಭೀಕರ ಭಾರತವಾಗಿ ಮಾಡುವ ಹುನ್ನಾರ ನಡೆದಿದೆ. ಮಾತನಾಡು ಇಂಡಿಯಾ ಮಾತನಾಡು ಎಂದವರು ದೇಶದ ಜನರ ಕೊರಳನ್ನು ಹಿಸುಕಿ ಮೌನಕ್ಕೆ ತಳ್ಳಿದ್ದಾರೆ’ ಎಂದರು. 

‘ದಕ್ಷಿಣ ಭಾರತವೆಂಬ ಪ್ರತ್ಯೇಕತೆಯು ಆರ್‌ಎಸ್‌ಎಸ್‌ನ ಪಿತೂರಿಯಷ್ಟೇ. ಸಂಘಟನೆಯು ದಕ್ಷಿಣದವರನ್ನು ಸಾಂಸ್ಕೃತಿಕವಾಗಿ ಉತ್ತರ ಭಾರತದವರ ಕಾಲ ಕೆಳಗಿಟ್ಟಿದ್ದಾರೆ’ ಎಂದು ಕಿಡಿಕಾರಿದರು.

‘ಸಂವಿಧಾನ ಬಾಹಿರ ಸಂಘಟನೆಯಾದ ಆರ್‌ಎಸ್‌ಎಸ್‌ನ ಪ್ರಧಾನ ಕಚೇರಿಯಲ್ಲಿ ದೇಶದ ಧ್ವಜ ಹಾರಿಸಿಲ್ಲ. ಅದು ಪ್ರತಿಪಾದಿಸುವ ರಾಷ್ಟ್ರೀಯತೆ ವೈಷ್ಣವ ರಾಷ್ಟ್ರೀಯತೆಯಷ್ಟೇ. ಅಲ್ಲಿ ಶೈವವೂ ಇಲ್ಲ. ಬಹುಜನರೂ ಇಲ್ಲ. ಪೇಶ್ವೆ, ಚಿತ್ಪಾವನ ಸಂಸ್ಕೃತಿಯನ್ನೇ ಭಾರತೀಯ ಅಸ್ಮಿತೆಯೆನ್ನಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬಹುತ್ವ ಭಾರತದ ಸಾಂಸ್ಕೃತಿಕ ಸಂರಚನೆಯನ್ನು ಹೊಸಕಿ ಏಕಸಂಸ್ಕೃತಿಯನ್ನು ತರಲಾಗುತ್ತಿದೆ. ಬಹುತ್ವದ ಆತ್ಮವನ್ನು ವಿರೂಪಗೊಳಿಸಲಾಗಿದೆ. ಅಘೋಷಿತ ಸರ್ವಾಧಿಕಾರಿ ಸರ್ಕಾರದಲ್ಲಿ ಕಾನೂನಿದ್ದರೂ ಪಾಲನೆಯಾಗದು’ ಎಂದರು.

‘ಆರ್ಥಿಕತೆ ಮಾತ್ರವಲ್ಲದೇ ದಕ್ಷಿಣ ಭಾರತದ ಸಾಂಸ್ಕೃತಿಕ ಅಸ್ಮಿತೆಯ ಹೋರಾಟವಿದು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು’ ಎಂದರು.

ರಂಗಕರ್ಮಿ ಸಿ.ಬಸವಲಿಂಗಯ್ಯ, ‘ಗಾಂಧಿಯನ್ನು ಕೊಂದವರೇ ದೇಶದ ಹತ್ಯೆ ನಡೆಸಿದ್ದಾರೆ. ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಶೇ 3ರಷ್ಟು ಜನರು ಶೇ 97ರಷ್ಟು ಜನರ ವಿರುದ್ಧವಿದ್ದಾರೆ’ ಎಂದರು.

‘ದೇಶವೆಂದರೆ ಜನ. ಜನರೇ ಭಾರತ. ಯಾವೊಬ್ಬ ಪ್ರಜೆಗೂ ಅನ್ಯಾಯವಾಗಬಾರದು. ಭಾರತವು ಒಂದೇ ಗಣರಾಜ್ಯದಿಂದ ಆಗಿರುವ ದೇಶವಲ್ಲ. ರಾಜ್ಯಗಳು ತೆರಿಗೆ ನೀಡದಿದ್ದರೆ ಒಕ್ಕೂಟ ಸರ್ಕಾರದ ಬಳಿ ಹಣವಿರುವುದಿಲ್ಲ. ಪ್ರಭುಗಳು ಇಲ್ಲಿ ಆಳುತ್ತಿಲ್ಲ. ಜನರೇ ಆಳುತ್ತಿರುವುದು‌’ ಎಂದು ಹೇಳಿದರು.

ರಂಗಕರ್ಮಿಗಳಾದ ಎಚ್‌.ಜನಾರ್ಧನ, ಮೈಮ್ ರಮೇಶ್, ಕೃಷ್ಣಪ್ರಸಾದ್, ಸಂಚಾಲಕ ಟಿ.ಗುರುರಾಜ್, ಕಾಂಗ್ರೆಸ್‌ನ ಬಿ.ಜೆ.ವಿಜಯಕುಮಾರ್, ಆರ್‌.ಮೂರ್ತಿ, ಸಿಪಿಎಂನ ಜಗದೀಶ್ ಸೂರ್ಯ, ಲ.ಜಗನ್ನಾಥ್, ಕೆ.ಬಸವರಾಜ್, ದಸಂಸದ ಆಲಗೂಡು ಶಿವಕುಮಾರ್, ಚಿಂತಕರಾದ ಭೂಮಿಗೌಡ, ಮಹೇಶ್ ಚಂದ್ರಗುರು, ಸುರೇಖಾ, ನಾ.ದಿವಾಕರ, ಒಡನಾಡಿಯ ಪರಶುರಾಮ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮ್, ಮೈಸೂರು ವಿ.ವಿ ಸಂಶೋಧಕರ ಸಂಘದ ಹರೀಶ್, ಪ್ರದೀಪ್, ನಟರಾಜ್ ಶಿವಣ್ಣ, ‘ನೆಲೆ ಹಿನ್ನೆಲೆ’ಯ ಕೆ.ಆರ್.ಗೋಪಾಲಕೃಷ್ಣ, ರೈತಸಂಘದ ರಾಜು, ಕಲ್ಲಹಳ್ಳಿ ಕುಮಾರ್‌ ಹಾಜರಿದ್ದರು.

ಧರಣಿಗೆ ರಂಗಕರ್ಮಿಗೆ ಕೋಟಿಗಾನಹಳ್ಳಿ ರಾಮಯ್ಯ ಚಾಲನೆ ರೈತ, ಕಾರ್ಮಿಕ, ದಲಿತ, ಪ್ರಗತಿಪರ ಸಂಘಟನೆಗಳ ಸಾಥ್ ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧ ವಾಗ್ದಾಳಿ

‘ಕ್ವಿಟ್‌ ಮೋದಿ ಚಳವಳಿ’

‘ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯನ್ನು ಮಹಾತ್ಮ ಗಾಂಧಿ ಮಾಡಿದರು. ಇಂದು ದೇಶದ ಜನರು ಕ್ವಿಟ್ ಎನ್‌ಡಿಎ ಕ್ವಿಟ್ ಮೋದಿ ಚಳವಳಿ ಮಾಡಬೇಕಿದೆ’ ಎಂದು ಲೇಖಕ ಮಹೇಶ್‌ಚಂದ್ರ ಗುರು ಟೀಕಿಸಿದರು. ಕಾಂಗ್ರೆಸ್‌ ಮುಖಂಡ ಬಿ.ಸೋಮಶೇಖರ್‌ ‘ಕೋಮುವಾದಿ ಬಿಜೆಪಿ ಜಾತಿವಾದಿ ಜೆಡಿಎಸ್ ದೇಶಕ್ಕೆ ಮಾರಕ. ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಕರಾಳ ದಿನಗಳನ್ನೇ ಜನರು ಅನುಭವಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT