ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸನ್ಯಾಸಿಯಾಗ ಬಯಸುವವರು ಸಿಗುತ್ತಿಲ್ಲ: ಚುಂಚಶ್ರೀ

Published 24 ಡಿಸೆಂಬರ್ 2023, 19:52 IST
Last Updated 24 ಡಿಸೆಂಬರ್ 2023, 19:52 IST
ಅಕ್ಷರ ಗಾತ್ರ

ಮೈಸೂರು: ‘ಈಗ ಸನ್ಯಾಸಿಗಳಾಗಲು ಬಯಸುವವರು ಸಿಗದಿರುವ ಕಾರಣದಿಂದ ಸಂತ ಪರಂಪರೆ ಮುಂದುವರಿಸಲು ಕಷ್ಟವಾಗಿದೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ವಿಜಯನಗರ 2ನೇ ಹಂತದಲ್ಲಿ ನೂತನವಾಗಿ ನಿರ್ಮಿಸಿರುವ ಕೊಡಗು ಗೌಡ ಸಮಾಜದ ಸಭಾಂಗಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜ ಹಾಗೂ ಸಮುದಾಯದ ಒಳಿತಿಗಾಗಿ ಸನ್ಯಾಸ ದೀಕ್ಷೆ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ. ಅಧ್ಯಾತ್ಮದತ್ತ ಒಲವು ಬೆಳೆಸಿಕೊಂಡಿರುವ ಯಾರಾದರೂ ಸನ್ಯಾಸಿಯಾಗಲು ಮುಂದಾದರೆ ಅವರ ಕುಟುಂಬದವರೇ ತಡೆಯುತ್ತಾರೆ. ಬೇಡ ಎನ್ನುತ್ತಾರೆ’ ಎಂದರು.

‘ನಾನು ಸನ್ಯಾಸ ದೀಕ್ಷೆ ಪಡೆಯಲು ಮುಂದಾದಾಗಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮನೆಯನ್ನೇ ಬಿಟ್ಟು ಬರಬೇಕಾಯಿತು. ಯಾರಿಗಾದರೂ ಸಮಾಜದೊಂದಿಗೆ ಸಮುದಾಯ ಸೇವೆಯ ಆಸಕ್ತಿ ಇದ್ದರೆ ಸನ್ಯಾಸ ದೀಕ್ಷೆ ‌ಸ್ವೀಕರಿಸಲು ಮಠಕ್ಕೆ ಬನ್ನಿ’ ಎಂದು ಆಹ್ವಾನ ನೀಡಿದರು.

‘ಕೊಡಗು ಗೌಡ ಸಮಾಜದ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಸಮಾವೇಶ ನಡೆಸಿ ಸರ್ಕಾರದ ಗಮನಸೆಳೆಯಬೇಕು. ಇದಕ್ಕೆ ಮಠದಿಂದಲೂ ಸಹಕಾರ ನೀಡಲಾಗುವುದು. ಒಕ್ಕಲಿಗ ಸಮುದಾಯ ಸಂಘಟಿತವಾಗಿರಬೇಕು’ ಎಂದರು.

ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಬಿಜೆಪಿ ಮುಖಂಡರಾದ ಎಲ್. ನಾಗೇಂದ್ರ, ಕವೀಶ್‌ಗೌಡ, ಜೆಡಿಎಸ್ ಮುಖಂಡ ಕೆ.ವಿ. ಶ್ರೀಧರ್, ಕೊಡಗು ಗೌಡ ಸಮಾಜದ ಅಧ್ಯಕ್ಷ ತೋಟಂಬೈಲು ಈ.ಮನೋಹರ್, ಉಪಾಧ್ಯಕ್ಷ ಕುಯ್ಯಮುಡಿ ಬಿ.ರಾಮಪ್ಪ, ಕಾರ್ಯದರ್ಶಿ ಕುಂಟಿಕಾನ ಎಸ್.ಗಣಪತಿ, ಸಹ ಕಾರ್ಯದರ್ಶಿ ಕಾಳೇರಮ್ಮನ ಎಂ.ನಾಣಯ್ಯ, ನಿರ್ದೇಶಕರಾದ ಕೊಂಬಾರನ ಯು.ಬಸಪ್ಪ, ನಡುವಟ್ಟೀರ ಜಿ.ಲಕ್ಷ್ಮಣ, ಚೆರಿಯಮನೆ ಸಿ.ನರೇಶ್ ಕುಮಾರ್ ಪಾಲ್ಗೊಂಡಿದ್ದರು.

ಹಣದಿಂದ ಮುಕ್ತಿ ಸಿಗುವುದಿಲ್ಲ. ಸ್ವಾರ್ಥ ರಹಿತ ಕೆಲಸದಿಂದ ಮಾತ್ರ ಮುಕ್ತಿ ಸಿಗಲು ಸಾಧ್ಯ
ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT